ರಷ್ಯಾ ಕಳೆದ ರಾತ್ರಿ ಉಕ್ರೇನ್ ಮೇಲೆ ಈವರೆಗಿನ ಅತಿದೊಡ್ಡ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಕೇಂದ್ರ ಕೈವ್‌ನಲ್ಲಿರುವ ಮುಖ್ಯ ಸರ್ಕಾರಿ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಒಂದು ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವಿಗೀಡಾಗಿದ್ದಾರೆ.
ಅನೇಕ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಈ ಭೀಕರ ದಾಳಿಯು ದೇಶದ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಝಪೊರಿಝಿಯಾ, ಕ್ರಿವೀ ರಿಹ್, ಒಡೆಸಾ ನಗರಗಳು ಹಾಗೂ ಸುಮಿ ಮತ್ತು ಚೆರ್ನಿಹಿವ್ ಪ್ರದೇಶಗಳು ದಾಳಿಗೊಳಗಾಗಿವೆ.
“ನೈಜ ರಾಜತಂತ್ರ ಬಹಳ ಹಿಂದೆಯೇ ಆರಂಭವಾಗಬೇಕಿದ್ದ ಸಮಯದಲ್ಲಿ ಇಂತಹ ಕೊಲೆಗಳು ಉದ್ದೇಶಪೂರ್ವಕ ಅಪರಾಧ ಮತ್ತು ಯುದ್ಧವನ್ನು ವಿಸ್ತರಿಸುವ ಪ್ರಯತ್ನ” ಎಂದು ಝೆಲೆನ್ಸ್ಕಿ ತಮ್ಮ X ಪೋಸ್ಟ್‌ನಲ್ಲಿ ತಿಳಿಸಿದ್ದು, ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ರಾಯಿಟರ್ಸ್ ವರದಿಗಾರರ ಪ್ರಕಾರ, ಸೂರ್ಯೋದಯದ ಸ್ವಲ್ಪ ಸಮಯದ ನಂತರ ಕೈವ್‌ನ ಐತಿಹಾಸಿಕ ಪೆಚೆರ್ಸ್ಕಿ ಜಿಲ್ಲೆಯಲ್ಲಿರುವ ಮುಖ್ಯ ಸರ್ಕಾರಿ ಕಟ್ಟಡದ ಸುಡುತ್ತಿರುವ ಮೇಲಿನ ಮಹಡಿಯಿಂದ ದಟ್ಟವಾದ ಹೊಗೆ ಸ್ಪಷ್ಟ ನೀಲಿ ಆಕಾಶದಲ್ಲಿ ಏರುತ್ತಿತ್ತು.
ಪ್ರಧಾನ ಕಟ್ಟಡಕ್ಕೆ ಹಾನಿ: ಉಕ್ರೇನಿಯನ್ ಪ್ರಧಾನಮಂತ್ರಿ ಯೂಲಿಯಾ ಸ್ವಿರಿಡೆಂಕೊ ಪ್ರಕಾರ, ಕೈವ್‌ನ ಮುಖ್ಯ ಸರ್ಕಾರಿ ಕಟ್ಟಡವು ಯುದ್ಧದಲ್ಲಿ ಮೊದಲ ಬಾರಿಗೆ ದಾಳಿಗೊಳಗಾಗಿದ್ದು, ಇದು ನಗರದ ಅತ್ಯಂತ ಬಲವಾದ ರಕ್ಷಣಾ ಪ್ರದೇಶಗಳಲ್ಲಿ ಒಂದಕ್ಕೆ ಸಂಕೇತಾತ್ಮಕ ಹೊಡೆತವಾಗಿದೆ.
ದಾಳಿಯ ಪ್ರಮಾಣ: ಉಕ್ರೇನಿಯನ್ ವಾಯುಪಡೆಯ ಪ್ರಕಾರ, ರಷ್ಯಾ ಕಳೆದ ರಾತ್ರಿ ಉಕ್ರೇನ್ ಮೇಲೆ 805 ಡ್ರೋನ್‌ಗಳು ಮತ್ತು 13 ಕ್ಷಿಪಣಿಗಳನ್ನು ಉಡಾಯಿಸಿದೆ. ಅವುಗಳಲ್ಲಿ ಉಕ್ರೇನಿಯನ್ ವಾಯು ರಕ್ಷಣಾ ಪಡೆಗಳು 751 ಡ್ರೋನ್‌ಗಳು ಮತ್ತು ನಾಲ್ಕು ಕ್ಷಿಪಣಿಗಳನ್ನು ತಡೆಹಿಡಿದಿವೆ. ಇದು ರಷ್ಯಾ ತನ್ನ ಫೆಬ್ರವರಿ 2022ರ ಆಕ್ರಮಣ ಪ್ರಾರಂಭವಾದ ನಂತರ ನಡೆಸಿದ ಅತಿದೊಡ್ಡ ಡ್ರೋನ್ ದಾಳಿಯಾಗಿದೆ.
ರಾಜಕೀಯ ಪ್ರತಿಕ್ರಿಯೆಗಳು:
ಪೋಲೆಂಡ್‌ನ ಪ್ರಧಾನಿ ಡೊನಾಲ್ಡ್ ಟಸ್ಕ್, ಕೈವ್‌ನ ಸರ್ಕಾರಿ ಕಟ್ಟಡದ ಮೇಲಿನ ದಾಳಿಯು “ಪುಟಿನ್ ವಿರುದ್ಧ ಬಲವಾದ ಪ್ರತಿಕ್ರಿಯೆಯನ್ನು ವಿಳಂಬ ಮಾಡುವುದು ಮತ್ತು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುವುದು ಅರ್ಥಹೀನ” ಎಂದು ಮತ್ತೊಮ್ಮೆ ತೋರಿಸಿದೆ ಎಂದಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯವು ಟಾಸ್ ಸುದ್ದಿ ಸಂಸ್ಥೆಗೆ, ತಮ್ಮ ದಾಳಿಯು ಉಕ್ರೇನ್‌ನ ಸೇನಾ-ಕೈಗಾರಿಕಾ ಸಂಕೀರ್ಣ ಮತ್ತು ಸಾರಿಗೆ ಮೂಲಸೌಕರ್ಯದ ಮೇಲೆ ನಡೆಸಲಾಗಿದೆ ಎಂದು ಹೇಳಿದೆ. ಆದರೆ, ಉಭಯ ದೇಶಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ನಿರಾಕರಿಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದಾಳಿಯನ್ನು “ಮಾನವೀಯತೆಯ ಭೀಕರ ವ್ಯರ್ಥ” ಎಂದು ಕರೆದಿದ್ದರೂ, ಸಂಘರ್ಷವನ್ನು ಬಗೆಹರಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. “ನನಗೆ ಸಂತೋಷವಿಲ್ಲ. ಇಡೀ ಪರಿಸ್ಥಿತಿಯಿಂದ ನಾನು ಸಂತೋಷವಾಗಿಲ್ಲ… ಆದರೆ ನಾವು ಅದನ್ನು ಇತ್ಯರ್ಥಪಡಿಸುತ್ತೇವೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.
ಉಕ್ರೇನ್‌ನ ಪ್ರತಿದಾಳಿ: ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿನ ‘ದ್ರುಜ್ಬಾ’ ತೈಲ ಪೈಪ್‌ಲೈನ್ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಲಾಗಿದೆ ಎಂದು ಉಕ್ರೇನ್ ಸೈನ್ಯವು ಹೇಳಿದೆ. ಈ ದಾಳಿಯಿಂದ “ವ್ಯಾಪಕವಾದ ಬೆಂಕಿ ಹಾನಿ” ಉಂಟಾಗಿದೆ.
ಗಾಯಗೊಂಡವರು: ಉಕ್ರೇನ್‌ನ ಗೃಹ ಸಚಿವಾಲಯದ ಪ್ರಕಾರ, ರಾಜಧಾನಿಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೈವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 11 ಗಂಟೆಗಳಿಗೂ ಹೆಚ್ಚು ಕಾಲ ವಾಯು ದಾಳಿಯ ಎಚ್ಚರಿಕೆಗಳು ಮುಂದುವರಿದಿದ್ದವು.
ಹಾನಿ: ಮಧ್ಯ ಉಕ್ರೇನ್‌ನ ಕ್ರೆಮೆನ್ಚುಕ್ ನಗರದಲ್ಲಿಯೂ ಡಜನ್‌ಗಟ್ಟಲೆ ಸ್ಫೋಟಗಳು ಸಂಭವಿಸಿದ್ದು, ಕೆಲವು ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಮತ್ತು ಡಿಪ್ರೊ ನದಿಗೆ ಅಡ್ಡಲಾಗಿರುವ ಸೇತುವೆಗೆ ಹಾನಿಯಾಗಿದೆ ಎಂದು ಮೇಯರ್ ವಿಟಾಲಿ ಮಲೆಟ್ಸ್ಕಿ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ನಿರ್ಬಂಧಗಳು: ಉಕ್ರೇನ್ ಯುದ್ಧದ ಕಾರಣದಿಂದ ರಷ್ಯಾ ಅಥವಾ ಅದರ ತೈಲ ಖರೀದಿದಾರರ ವಿರುದ್ಧ ಕ್ರಮಗಳನ್ನು ಹೆಚ್ಚಿಸುವ ಸಾಧ್ಯತೆಯ ಬಗ್ಗೆ ಪ್ರಬಲ ಸೂಚನೆ ನೀಡಿದ ಡೊನಾಲ್ಡ್ ಟ್ರಂಪ್, ರಷ್ಯಾದ ವಿರುದ್ಧ ಎರಡನೇ ಹಂತದ ನಿರ್ಬಂಧಗಳಿಗೆ ಸಿದ್ಧ ಎಂದು ಹೇಳಿದ್ದಾರೆ.
ನಾಗರಿಕರ ಸಾವು: ಕೈವ್‌ನ ಮಿಲಿಟರಿ ಆಡಳಿತದ ಮುಖ್ಯಸ್ಥ ತಿಮೂರ್ ಟ್ಕಾಚೆಂಕೊ, ಡಾರ್ನಿಟ್ಸ್ಕಿ ಜಿಲ್ಲೆಯಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಹಾನಿಯಾಗಿದ್ದು, ಅಲ್ಲಿನ ಅವಶೇಷಗಳಿಂದ ಒಂದು ಮಗುವಿನ ದೇಹವನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ. ಡಿಪ್ರೊ ನದಿಯ ಪೂರ್ವದಲ್ಲಿರುವ ಈ ಜಿಲ್ಲೆಯ ಮೇಲಿನ ದಾಳಿಯಲ್ಲಿ ಒಬ್ಬ ಯುವತಿ ಸಹ ಮೃತಳಾಗಿದ್ದಾಳೆ.