ಇರಾಕ್‌ನ ಭೂಭಾಗದಲ್ಲಿ ಅಮೆರಿಕದ ಈ ಬೃಹತ್ ವಿಮಾನ ಪತನಗೊಂಡಿದ್ದು, ಈ ವೇಳೆ ವಿಮಾನದಲ್ಲಿದ್ದ ಆರು ಮಂದಿ ಅಮೆರಿಕದ ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ವಿಮಾನವನ್ನು ತಾವೇ ಹೊಡೆದುರುಳಿಸಿರುವುದಾಗಿ ಇರಾನ್ ಪರ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿವೆ. ಇದು ಯುದ್ಧ ಪೀಡಿತ ಪ್ರದೇಶದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇರಾನ್ ಪರ ಗುಂಪುಗಳ ಈ ವಾದವನ್ನು ಅಮೆರಿಕದ ರಕ್ಷಣಾ ಇಲಾಖೆ ಸಂಪೂರ್ಣವಾಗಿ ತಳ್ಳಿಹಾಕಿದೆ. ವಿಮಾನ ಪತನಗೊಂಡಿರುವುದು ನಿಜವಾದರೂ, ಇದು ಶತ್ರುಗಳ ದಾಳಿಯಿಂದ ಸಂಭವಿಸಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಅಂದಾಜಿಸಲಾಗಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿಯ ಪ್ರಕಾರ, ಅಪಘಾತದ ವೇಳೆ ಜೊತೆಯಲ್ಲಿದ್ದ ಮತ್ತೊಂದು ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಕಾರ್ಯಾಚರಣೆಯ ಭಾಗವಾಗಿ ಈ ವಿಮಾನವು ಕರ್ತವ್ಯ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.
ಪತನಗೊಂಡ ವಿಮಾನದಲ್ಲಿದ್ದ ಐದರಿಂದ ಆರು ಮಂದಿ ಸಿಬ್ಬಂದಿಗಳಿಗಾಗಿ ಪ್ರಸ್ತುತ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ಬೆಂಬಲಿತ ಗುಂಪುಗಳ ನಡುವೆ ಸಂಘರ್ಷ ತೀವ್ರವಾಗಿರುವಾಗಲೇ ಈ ಘಟನೆ ನಡೆದಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆದಿದೆ.
ಅಪಘಾತದ ಬಗ್ಗೆ ಅಮೆರಿಕವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಇದು ಆಕಸ್ಮಿಕವೇ ಅಥವಾ ವ್ಯವಸ್ಥಿತ ಸಂಚೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದೆ. ಮೃತಪಟ್ಟ ಸೈನಿಕರ ಅಧಿಕೃತ ಮಾಹಿತಿ ಮತ್ತು ಪತನದ ನಿಖರ ಕಾರಣಗಳಿಗಾಗಿ ಅಮೆರಿಕದ ರಕ್ಷಣಾ ಇಲಾಖೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
