ಜಾಗತಿಕ ಮಟ್ಟದಲ್ಲಿ ಇಂಧನ ದರ ಏರಿಕೆಯಿಂದ ಅನೇಕ ದೇಶಗಳಲ್ಲಿ ಜನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ, ಕೆಲವು ತೈಲ ಸಂಪತ್ತಿನ ರಾಷ್ಟ್ರಗಳಲ್ಲಿ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಅತಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವುದು ಗಮನಸೆಳೆಯುತ್ತಿದೆ. ವಿಶೇಷವಾಗಿ ಯುದ್ಧಪೀಡಿತ ರಾಷ್ಟ್ರವಾಗಿರುವ ಇರಾನ್ ಹಾಗೂ ತೈಲ ಸಂಪತ್ತಿಗೆ ಪ್ರಸಿದ್ಧಿಯಾದ ವೆನೆಜುವೆಲಾ ದೇಶಗಳಲ್ಲಿ ಇಂಧನ ದರ ಅಚ್ಚರಿಯ ಮಟ್ಟಿಗೆ ಕಡಿಮೆಯಿರುವ ಮಾಹಿತಿ ಹೊರಬಿದ್ದಿದೆ.
ತೈಲ ನಿಕ್ಷೇಪಗಳಲ್ಲಿ ಸಮೃದ್ಧವಾಗಿರುವ ಇರಾನ್ ನಲ್ಲಿ 1 ಲೀಟರ್ ಪೆಟ್ರೋಲ್ ದರ ಸುಮಾರು ₹2.68ರಷ್ಟಿದ್ದು, ಡೀಸೆಲ್ ಕೇವಲ 55 ಪೈಸೆಗೆ ಲಭ್ಯವಾಗುತ್ತಿದೆ. ದೇಶದಲ್ಲಿ ಅಪಾರ ಪ್ರಮಾಣದ ತೈಲ ಸಂಪತ್ತು ಇರುವುದರ ಜೊತೆಗೆ ಸರ್ಕಾರ ನೀಡುತ್ತಿರುವ ಹೆಚ್ಚಿನ ಸಬ್ಸಿಡಿ ಕಾರಣದಿಂದ ಇಂಧನ ದರ ಇಷ್ಟು ಕಡಿಮೆಯಾಗಿ ಉಳಿದಿದೆ ಎಂದು ತಿಳಿದು ಬಂದಿದೆ.
ಇದೇ ರೀತಿ ಜಗತ್ತಿನ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶದಲ್ಲಿಯೂ ಪೆಟ್ರೋಲ್ ದರ ಅಂದಾಜು ₹3.23ರಷ್ಟಿದೆ. ಡೀಸೆಲ್ ದರ ಇದಕ್ಕಿಂತಲೂ ಕಡಿಮೆಯಾಗಿದ್ದು ಕೇವಲ 37 ಪೈಸೆ ಮಾತ್ರ. ದಶಕಗಳಿಂದಲೂ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಾಗೂ ದೇಶೀಯ ತೈಲ ಉತ್ಪಾದನೆಯೇ ಇಲ್ಲಿ ಇಂಧನ ದರ ಕಡಿಮೆ ಇರುವುದಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ.
ಆಫ್ರಿಕಾ ಖಂಡದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಅಂಗೋಲಾದಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ದರ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಮಟ್ಟದಲ್ಲಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಸುಮಾರು ₹30.3 ಇದ್ದು, ಡೀಸೆಲ್ ದರ ₹40.3ರಷ್ಟಿದೆ. ದೇಶೀಯ ಉತ್ಪಾದನೆ ಹೆಚ್ಚಿರುವುದು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಕುವೈತ್ ಹಾಗೂ ಟರ್ಕಮೇನಿಸ್ಥಾನ್ ಸೇರಿದಂತೆ ಕೆಲವು ತೈಲ ಸಂಪದ್ಭರಿತ ರಾಷ್ಟ್ರಗಳಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ದರ ₹50ಕ್ಕಿಂತ ಕಡಿಮೆ ಇರುವುದಾಗಿ ವರದಿಗಳು ತಿಳಿಸಿವೆ.
