Home ದೇಶ ಸಂಬಳ ಯಾವಾಗ ಕೊಡುತ್ತೀರಿ ಪ್ರಭು? ಮಾರ್ಚಿಯಿಂದ ಸಂಬಳವಿಲ್ಲದೆ ಗೋಳಾಡುತ್ತಿದ್ದಾರೆ ಬಿಹಾರದ ಸರ್ಕಾರಿ ನೌಕರರು

ಸಂಬಳ ಯಾವಾಗ ಕೊಡುತ್ತೀರಿ ಪ್ರಭು? ಮಾರ್ಚಿಯಿಂದ ಸಂಬಳವಿಲ್ಲದೆ ಗೋಳಾಡುತ್ತಿದ್ದಾರೆ ಬಿಹಾರದ ಸರ್ಕಾರಿ ನೌಕರರು

0

ಬಿಜೆಪಿ ಆಡಳಿತವಿರುವ ಬಿಹಾರ ಸರ್ಕಾರವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮಾರ್ಚ್ ತಿಂಗಳ ವೇತನವನ್ನು ಇನ್ನೂ ಪಾವತಿಸಿಲ್ಲ. ಇದರಿಂದಾಗಿ ಲಕ್ಷಾಂತರ ನೌಕರರು ತೀವ್ರ ಇಬ್ಬಂದಿಗೆ ಸಿಲುಕಿದ್ದಾರೆ. ರಾಜ್ಯದ ಖಜಾನೆಯಲ್ಲಿ ನಗದು ಕೊರತೆ ಉಂಟಾಗಿರುವುದರಿಂದ, ಉದ್ಯೋಗಿಗಳಿಗೆ ಸಂಬಳ ನೀಡಲು ಸರ್ಕಾರದ ಬಳಿ ನಿಧಿಯಿಲ್ಲದಂತಾಗಿದೆ. ಸರ್ಕಾರ ಘೋಷಿಸಿರುವ ಹಲವು ಜನಕಲ್ಯಾಣ ಯೋಜನೆಗಳ ಜಾರಿಗೂ ತೀವ್ರ ಹಣದ ಕೊರತೆ ಎದುರಾಗಿದೆ. ಇದರಿಂದಾಗಿ ಆ ಯೋಜನೆಗಳನ್ನು ನಿಲ್ಲಿಸಲಾಗದೆ ಅಥವಾ ಮುಂದುವರಿಸಲಾಗದೆ ಸರ್ಕಾರ ಒದ್ದಾಡುತ್ತಿದೆ. 2025ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಈಡೇರಿಸಲಾಗದ ಉಚಿತ ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಎನ್‌ಡಿಎ (NDA) ಮೈತ್ರಿಕೂಟ, ಈಗ ಅವುಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದೆ.

ಆರ್ಥಿಕ ವರ್ಷವು ಅಂತ್ಯಗೊಳ್ಳುವ ಮಾರ್ಚ್ ತಿಂಗಳ ಕೊನೆಯಲ್ಲಿ ಸರ್ಕಾರವು ಹಲವಾರು ಸಾರ್ವಜನಿಕ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಭಾರಿ ಮೊತ್ತದ ಹಣವನ್ನು ವ್ಯಯಿಸಿದೆ. ಬಿಹಾರ ಸರ್ಕಾರವು ಕೇಂದ್ರದ ಅನುದಾನದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದಿಂದ ವರ್ಗಾವಣೆಯಾಗಬೇಕಿರುವ 8,500 ಕೋಟಿ ರೂಪಾಯಿಗಳ ನಿಧಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ. ಅಷ್ಟೇ ಅಲ್ಲದೆ, ಹೊಸದಾಗಿ ಮುಖ್ಯಮಂತ್ರಿ ಪದವಿ ಅಲಂಕರಿಸಿರುವ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ರಿಸರ್ವ್ ಬ್ಯಾಂಕ್‌ನಿಂದ 12,000 ಕೋಟಿ ರೂಪಾಯಿಗಳ ಸಾಲ ನಿರೀಕ್ಷಿಸುತ್ತಿದ್ದಾರೆ. ಈ ಹಣ ಬಂದರೆ ಸದ್ಯಕ್ಕಂತೂ ಉದ್ಯೋಗಿಗಳ ವೇತನದ ಗಂಡಾಂತರದಿಂದ ಸರ್ಕಾರ ಪಾರಾಗಬಹುದು ಎಂದು ಭಾವಿಸಲಾಗಿದೆ.

ಸಾಲದ ಹೊರೆಯಿಂದ ಕುಸಿತ

ಪ್ರಸ್ತುತ ಬಿಹಾರವು ಭಾರಿ ಸಾಲದ ಹೊರೆಯಿಂದ ತತ್ತರಿಸುತ್ತಿದೆ. 2026-27ನೇ ಸಾಲಿಗೆ ರಾಜ್ಯದ ಒಟ್ಟು ಸಾಲದ ಪ್ರಮಾಣ ಸುಮಾರು 4 ಲಕ್ಷ ಕೋಟಿ ರೂಪಾಯಿಗಳಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯಕ್ಕೆ ಬರುವ ಆದಾಯಕ್ಕಿಂತ ಸಾಲದಾತರಿಗೆ ಪಾವತಿಸಬೇಕಾದ ಅಸಲು ಮತ್ತು ಬಡ್ಡಿಯೇ ಹೆಚ್ಚಾಗಿದೆ. ಬಿಹಾರ ಸರ್ಕಾರವು ಹಿಂದೆಂದೂ ಕಂಡರಿಯದ ರೀತಿಯಲ್ಲಿ 2026-27ರ ಆರ್ಥಿಕ ವರ್ಷಕ್ಕೆ 3.47 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಅನ್ನು ಅನುಮೋದಿಸಿದೆ. ಬಿಹಾರದ ಬಜೆಟ್‌ನ ಸಿಂಹಪಾಲು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೇ ವ್ಯಯವಾಗುತ್ತಿದೆ.

ಶಾಲಾ ಬಾಲಕಿಯರಿಗೆ ಉಚಿತ ಸೈಕಲ್ ನೀಡುವ ‘ಮುಖ್ಯಮಂತ್ರಿ ಸೈಕಲ್ ಯೋಜನೆ’, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಧನಸಹಾಯ ನೀಡುವ ‘ಕನ್ಯಾ ಉತ್ಥಾನ್ ಯೋಜನೆ’, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ 4 ಲಕ್ಷ ರೂಪಾಯಿಗಳವರೆಗೆ ಸಾಲ ನೀಡುವ ‘ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್’ ಮತ್ತು ಉಚಿತ ವಿದ್ಯುತ್ ಸಂಪರ್ಕದಂತಹ ಯೋಜನೆಗಳ ಜಾರಿಗೆ ಸರ್ಕಾರದ ಬಳಿ ನಿಧಿಯ ಅವಶ್ಯಕತೆ ತುಂಬಾ ಇದೆ. ಜನರಿಂದ ಸಂಗ್ರಹವಾಗುವ ತೆರಿಗೆಯು ಈ ಯೋಜನೆಗಳ ಜಾರಿಗೆ ಸಾಕಾಗುತ್ತಿಲ್ಲ. ಇದರಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಪ್ರಸ್ತುತ ಉದ್ಯೋಗಿಗಳಿಗೆ ವೇತನವನ್ನೂ ನೀಡಲಾಗದ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಎದುರಿಸುತ್ತಿದೆ.

You cannot copy content of this page

Exit mobile version