Home ರಾಜಕೀಯ ನಿತೀಶ್ ಕುಮಾರ್‌ಗಾಗಿ ಒಂಬತ್ತು ಮಂದಿಯನ್ನು ಕೊಲೆ ಮಾಡಿಸಿದ್ದೆ ಎಂದ ಜೆಡಿಯು ಶಾಸಕ ಅನಂತ್ ಸಿಂಗ್: ವಿವಾದದ...

ನಿತೀಶ್ ಕುಮಾರ್‌ಗಾಗಿ ಒಂಬತ್ತು ಮಂದಿಯನ್ನು ಕೊಲೆ ಮಾಡಿಸಿದ್ದೆ ಎಂದ ಜೆಡಿಯು ಶಾಸಕ ಅನಂತ್ ಸಿಂಗ್: ವಿವಾದದ ಬೆನ್ನಲ್ಲೇ ಹೇಳಿಕೆ ಬದಲು!

0

ಪಾಟ್ನಾ: ಬಿಹಾರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಘಟನೆಯೊಂದರಲ್ಲಿ, ಮೊಕಾಮಾ ಕ್ಷೇತ್ರದ ಜನತಾದಳ (ಯುನೈಟೆಡ್) ಶಾಸಕ ಅನಂತ್ ಕುಮಾರ್ ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಏಳಿಗೆಗಾಗಿ ಒಂಬತ್ತು ಜನರನ್ನು ಕೊಲೆ ಮಾಡಿಸಿದ್ದಾಗಿ ಸ್ಫೋಟಕ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಮುಂಬರುವ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರಿಗೆ ಜೆಡಿಯು ಟಿಕೆಟ್ ನೀಡಿರುವುದನ್ನು ವಿರೋಧಿಸುವ ಭರದಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಯು ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆಯೇ, ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ಆರಂಭದಲ್ಲಿ ಮಾತನಾಡಿದ್ದ ಅನಂತ್ ಸಿಂಗ್, “ನನಗೂ ನಿತೀಶ್ ಕುಮಾರ್ ಅವರಿಗೂ ಹಳೆಯ ನಂಟಿದೆ; ಅವರ ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದ ಕಷ್ಟದ ದಿನಗಳಲ್ಲಿ ನಾನು ಅವರ ಪರವಾಗಿ ನಿಂತಿದ್ದೆ ಮತ್ತು ಅವರಿಗೆ ನೆರವಾಗಲು ಒಂಬತ್ತು ಜನರನ್ನು ಕೊಲೆ ಮಾಡಿಸಿದ್ದೆ,” ಎಂದು ಹೇಳಿದ್ದರು. ಆದರೆ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ನಂತರ ಸ್ಪಷ್ಟನೆ ನೀಡಿದ ಅವರು, ತಾನು ಯಾರನ್ನೂ ಕೊಲೆ ಮಾಡಿಸಿಲ್ಲ ಎಂದಿದ್ದಾರೆ.

“ಲಾಲೂ ಪ್ರಸಾದ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ ನಾವು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಲಾಲೂ ಯಾದವ್ ನನ್ನ ಒಂಬತ್ತು ಜನ ಆಪ್ತರನ್ನು ಹತ್ಯೆ ಮಾಡಿಸಿದ್ದರು. ಆ ವೇಳೆ ನನ್ನ ಮೇಲೂ ಗುಂಡಿನ ದಾಳಿ ನಡೆದಿತ್ತು ಹಾಗೂ ನನ್ನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು,” ಎಂದು ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ಬದಲಿಗೆ ಜನ ಸೂರಜ್ ಪಕ್ಷದ ಅಭ್ಯರ್ಥಿ ಅನುಜ್ ಸಿಂಗ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

ಅನಂತ್ ಸಿಂಗ್ ಅವರ ಈ ಹೇಳಿಕೆಯನ್ನು ಜೆಡಿಯು ತಳ್ಳಿಹಾಕಿದ್ದು, ನಿತೀಶ್ ಕುಮಾರ್ ಅವರ ರಾಜಕೀಯ ಬದುಕಿನಲ್ಲಿ ಹಿಂಸೆ ಅಥವಾ ಅಪರಾಧಿಗಳ ಜತೆ ಕೈಜೋಡಿಸಿದ ಇತಿಹಾಸವಿಲ್ಲ ಎಂದು ಪಕ್ಷದ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಈ ಬೆಳವಣಿಗೆಯನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ವಿರೋಧ ಪಕ್ಷ ರಾಷ್ಟ್ರೀಯ ಜನತಾದಳ (RJD), ನಿತೀಶ್ ಕುಮಾರ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

ಅನಂತ್ ಸಿಂಗ್ ಅವರ ಆರಂಭಿಕ ಹೇಳಿಕೆಯು ಕೊಲೆಯ ನೇರ ಒಪ್ಪಿಗೆಯಾಗಿದೆ ಎಂದು ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಆರೋಪಿಸಿದ್ದು, ಜೆಡಿಯು ನಾಯಕತ್ವದ ಒತ್ತಡದಿಂದಾಗಿ ಸಿಂಗ್ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ದೂರಿದ್ದಾರೆ. ಅಕ್ಟೋಬರ್ 23 ರಂದು ಬಿಹಾರ ವಿಧಾನ ಪರಿಷತ್ತಿನ ಎಂಟು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯ ಹೊಸ್ತಿಲಲ್ಲೇ ಈ ವಿವಾದ ಜೆಡಿಯು ಪಾಲಿಗೆ ತೀವ್ರ ಇಕ್ಕಟ್ಟು ತಂದಿಟ್ಟಿದೆ.

You cannot copy content of this page

Exit mobile version