Home ದೇಶ ಇಂಟರ್ನೆಟ್ ಬಳಕೆ ಮಕ್ಕಳ ಮೂಲಭೂತ ಹಕ್ಕು, ಸಂಪೂರ್ಣ ನಿಷೇಧ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ಇಂಟರ್ನೆಟ್ ಬಳಕೆ ಮಕ್ಕಳ ಮೂಲಭೂತ ಹಕ್ಕು, ಸಂಪೂರ್ಣ ನಿಷೇಧ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

0

ದೆಹಲಿ: ಮಕ್ಕಳು ಇಂಟರ್ನೆಟ್ (ಅಂತರ್ಜಾಲ) ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇಂಟರ್ನೆಟ್ ಬಳಕೆ ಮಕ್ಕಳ ಮೂಲಭೂತ ಹಕ್ಕಿನ ಭಾಗವಾಗಿದ್ದು, ಸಂವಿಧಾನದ ಪರಿಚ್ಛೇದ 21 (ಜೀವಿಸುವ ಹಕ್ಕು) ಹಾಗೂ ಪರಿಚ್ಛೇದ 19(1)(ಎ) (ಅಭಿವ್ಯಕ್ತಿ ಸ್ವಾತಂತ್ರ್ಯ) ಅಡಿಯಲ್ಲಿ ಇದು ಅಂತರ್ಗತವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಅವರನ್ನು ಡಿಜಿಟಲ್ ಜಗತ್ತಿನಿಂದ ಸಂಪೂರ್ಣವಾಗಿ ದೂರವಿಡುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಕ್ಕಳ ಸುರಕ್ಷತೆ ಮತ್ತು ಅವರ ಹಕ್ಕುಗಳ ಸ್ವಾತಂತ್ರ್ಯದ ನಡುವೆ ಯಾವುದೇ ಸಂಘರ್ಷವಿಲ್ಲ, ಇವೆರಡನ್ನೂ ಏಕಕಾಲದಲ್ಲಿ ರಕ್ಷಿಸಬೇಕಾದ ಸಾಂವಿಧಾನಿಕ ಹೊಣೆಗಾರಿಕೆ ಇದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತಿಳಿಸಿದೆ.

ಸೋಷಿಯಲ್ ಮೀಡಿಯಾ ವೇದಿಕೆಗಳು ಹಾಗೂ ಆನ್‌ಲೈನ್ ಸೇವೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ, ನಿಂದನೆ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಪತ್ತೆಹಚ್ಚಿ ತಕ್ಷಣವೇ ತೆಗೆದುಹಾಕುವ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸುವಂತೆ ನಿರ್ದೇಶನ ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಇಂಟರ್ನೆಟ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಜತೆಗೆ ಅಗತ್ಯ ಮಾಹಿತಿ ಪಡೆಯುವ, ಹೊಸ ವಿಷಯಗಳನ್ನು ಅನ್ವೇಷಿಸುವ ಮತ್ತು ಹಂಚಿಕೊಳ್ಳುವ ಹಕ್ಕೂ ಅಡಕವಾಗಿದೆ ಎಂದು ಪೀಠ ವಿವರಿಸಿದೆ.

ಇಂಟರ್ನೆಟ್ ಜ್ಞಾನ, ಕಲ್ಪನೆ ಮತ್ತು ಸೃಜನಶೀಲತೆಯ ವಿನಿಮಯಕ್ಕೆ ಪ್ರಮುಖ ವೇದಿಕೆಯಾಗಿದೆ. ವಿಶೇಷವಾಗಿ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಮಕ್ಕಳಿಗೆ ಶೈಕ್ಷಣಿಕ ಮಾಹಿತಿ ಲಭಿಸಲು ಅಂತರ್ಜಾಲವೇ ಮುಖ್ಯ ಆಸರೆಯಾಗಿದೆ. ಇದರೊಂದಿಗೆ ವಿಶೇಷ ಚೇತನ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳು ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಆನ್‌ಲೈನ್ ನೆರವಾಗುತ್ತದೆ.

ಪ್ರಸ್ತುತ ಇಂಟರ್ನೆಟ್ ಮಕ್ಕಳಿಗೆ ಸಂಪೂರ್ಣ ಸುರಕ್ಷಿತ ತಾಣವಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡ ಪೀಠ, ಆ ಕಾರಣಕ್ಕಾಗಿಯೇ ಅವರನ್ನು ಅದರಿಂದ ಸಂಪೂರ್ಣವಾಗಿ ವಂಚಿಸುವುದು ಶಾಶ್ವತ ಪರಿಹಾರವಲ್ಲ ಎಂದಿದೆ. ವಯಸ್ಸಿಗೆ ತಕ್ಕಂತೆ ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟಿರುವ ನ್ಯಾಯಾಲಯ, ಹಾನಿಕಾರಕ ಅಡಲ್ಟ್ ಕಂಟೆಂಟ್ ವೆಬ್‌ಸೈಟ್‌ಗಳ ಮೇಲಿನ ನಿರ್ಬಂಧಕ್ಕೆ ತಮ್ಮ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆನ್‌ಲೈನ್‌ನಲ್ಲಿ ಮಕ್ಕಳ ಶೋಷಣೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಡೇಟಾಬೇಸ್ ರಚನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶಿಸಿದೆ.

You cannot copy content of this page

Exit mobile version