Home ದೇಶ 2018ರ ಮಾನಹಾನಿ ಪ್ರಕರಣ: ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ ದೆಹಲಿ...

2018ರ ಮಾನಹಾನಿ ಪ್ರಕರಣ: ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ ದೆಹಲಿ ಕೋರ್ಟ್

0

ದೆಹಲಿ: ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ 2018ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ನ್ಯಾಯಾಲಯವು ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ. ಸಾಕೇತ್ ನ್ಯಾಯಾಲಯದ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಈ ಆದೇಶವನ್ನು ಹೊರಡಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ನಿಗದಿಪಡಿಸಿದ್ದಾರೆ. ಧ್ರುವ್ ರಾಠಿ ಅವರಿಗೆ ನ್ಯಾಯಾಲಯದ ನೋಟಿಸ್ ಕಳುಹಿಸಲಾಗಿದ್ದರೂ, ಆ ವಿಳಾಸಕ್ಕೆ ಬೀಗ ಹಾಕಲ್ಪಟ್ಟಿದ್ದ ಕಾರಣ ನೋಟಿಸ್ ತಲುಪಿಸಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದರು.

ವಿಕಾಸ್ ಸಾಂಕೃತ್ಯಾಯನ್ ಎಂಬುವವರು ಸಲ್ಲಿಸಿರುವ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಧ್ರುವ್ ರಾಠಿ ಅವರು ‘ಬಿಜೆಪಿ ಐಟಿ ಸೆಲ್ ಪಾರ್ಟ್ 2’ ಹೆಸರಿನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಹಾಗೂ ಆ ವಿಡಿಯೋದಲ್ಲಿ ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಹೊರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಸಾಮಾನ್ಯವಾಗಿ ಜರ್ಮನಿಯಲ್ಲಿ ನೆಲೆಸಿರುವ ಧ್ರುವ್ ರಾಠಿ ಅವರು ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗಾಗಿ ಭಾರತಕ್ಕೆ ಆಗಮಿಸಿದ್ದರಿಂದ, ವಿಚಾರಣೆ ದಿನಾಂಕವನ್ನು ಮುಂದಕ್ಕೆ ತಂದು ಅವರಿಗೆ ತ್ವರಿತವಾಗಿ ಸಮನ್ಸ್ ಜಾರಿ ಮಾಡಬೇಕೆಂದು ದೂರುದಾರರು ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹೊಸದಾಗಿ ಸಮನ್ಸ್ ಜಾರಿ ಮಾಡಿತ್ತಾದರೂ, ಅದು ತಲುಪದ ಕಾರಣ ಇದೀಗ ವಾರಂಟ್ ಹೊರಡಿಸಲಾಗಿದೆ.

ಇನ್ನೊಂದೆಡೆ, ಅಕ್ಟೋಬರ್ 10ರ ಪ್ರತಿಭಟನೆ ವೇಳೆ ಗುರುಗ್ರಾಮ್‌ನಲ್ಲಿ ಪೊಲೀಸರಿಂದ ಸುಮಾರು 20-23 ಗಂಟೆಗಳ ಕಾಲ ವಶದಲ್ಲಿದ್ದು ನಂತರ ಬಿಡುಗಡೆಗೊಂಡಿದ್ದ ಧ್ರುವ್ ರಾಠಿ, ಈಗಾಗಲೇ ದೇಶ ತೊರೆದು ಲಂಡನ್ ತಲುಪಿದ್ದಾರೆ. ಮತಗಳ್ಳತನ ಹಾಗೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಲಂಡನ್‌ನಲ್ಲಿರುವ ಬ್ರಿಟನ್ ಸಂಸತ್ತಿನ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದ ಬೆನ್ನಲ್ಲೇ, ದೆಹಲಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿರುವುದು ಮಹತ್ವದ ತಿರುವು ಪಡೆದುಕೊಂಡಿದೆ.

You cannot copy content of this page

Exit mobile version