ಪಾಟ್ನಾ: ಉತ್ತರ ಪ್ರದೇಶದ ಮೌ ಜಿಲ್ಲೆಯ ಮದರಸಾವೊಂದರಲ್ಲಿ ಕಲಿಯುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿಯೊಬ್ಬ, ತಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪೋಷಕರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದ ಹೈಡ್ರಾಮಾಕ್ಕೆ ಇದೀಗ ತೆರೆ ಬಿದ್ದಿದೆ. ತನಗೆ ಓದಲು ಇಷ್ಟವಿಲ್ಲದ ಕಾರಣ ಪೋಷಕರನ್ನು ಹೆದರಿಸಲು ತಾನೇ ಈ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾಗಿ ಆ ವಿದ್ಯಾರ್ಥಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಉತ್ತರ ಪ್ರದೇಶದ ಘೋಷಿ ಪ್ರದೇಶದಲ್ಲಿರುವ ‘ದಾರುಲ್ ಉಲೂಮ್ ಅಮ್ಜದಿಯಾ’ ಮದರಸಾದಲ್ಲಿ ಕಲಿಯುತ್ತಿದ್ದ ಮೊಹಮ್ಮದ್ ಫೈಜಾನ್ ರಜಾ ಎಂಬ ವಿದ್ಯಾರ್ಥಿ ಬಕ್ರೀದ್ ರಜೆಯ ನಿಮಿತ್ತ ಬಿಹಾರದಲ್ಲಿದ್ದ ತನ್ನ ಮನೆಗೆ ರೈಲಿನಲ್ಲಿ ಹಿಂತಿರುಗುತ್ತಿದ್ದನು. ಈ ವೇಳೆ ತಂದೆಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಆತ, ರೈಲಿನಲ್ಲಿ ಕೆಲವರು ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದನು. ಈ ಸಂದೇಶ ಬಂದ ಕೆಲವೇ ಕ್ಷಣಗಳಲ್ಲಿ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಮತ್ತು ಆತ ನಾಪತ್ತೆಯಾಗಿದ್ದನು. ಇದರಿಂದ ತೀವ್ರ ಆತಂಕಗೊಂಡ ಕುಟುಂಬಸ್ಥರು ಮಗನ ಸುರಕ್ಷತೆಯ ಬಗ್ಗೆ ಭೀತಿಗೊಳಗಾಗಿದ್ದರು.
ಯಾವುದೇ ಹಲ್ಲೆ ನಡೆದಿಲ್ಲ ಎಂದ ತಂದೆ: ಪೊಲೀಸರು ತನಿಖೆ ನಡೆಸಿ ವಿದ್ಯಾರ್ಥಿಯನ್ನು ಪತ್ತೆಹಚ್ಚಿದ ಬಳಿಕ ಇಡೀ ಪ್ರಕರಣಕ್ಕೆ ಸಂಪೂರ್ಣ ತಿರುವು ಸಿಕ್ಕಿದೆ. ವಿದ್ಯಾರ್ಥಿಯ ಕುಟುಂಬ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆಯಲ್ಲಿ ಫೈಜಾನ್ ತಂದೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಪೊಲೀಸರ ತೀವ್ರ ವಿಚಾರಣೆಯ ವೇಳೆ ರೈಲಿನಲ್ಲಿ ತನ್ನ ಮೇಲೆ ಯಾವುದೇ ರೀತಿಯ ದಾಳಿ ಅಥವಾ ಹಲ್ಲೆ ನಡೆದಿಲ್ಲ ಎಂದು ಫೈಜಾನ್ ಒಪ್ಪಿಕೊಂಡಿದ್ದಾನೆ.
“ನನ್ನ ಮಗನಿಗೆ ಮದರಸಾದಲ್ಲಿ ಮುಂದೆ ಓದಲು ಇಷ್ಟವಿರಲಿಲ್ಲ, ಆ ಕಾರಣಕ್ಕಾಗಿ ಆತ ಇಂತಹ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ. ಪೋಷಕರಾದ ನಾವು ತನ್ಮನ್ನು ಮತ್ತೆ ಮದರಸಾಗೆ ಕಳುಹಿಸಬಾರದು ಎಂಬ ಉದ್ದೇಶದಿಂದ ನಮ್ಮನ್ನು ಹೆದರಿಸಲು ಆತನೇ ಈ ಕಥೆಯನ್ನು ಹೆಣೆದಿದ್ದನು,” ಎಂದು ಫೈಜಾನ್ ತಂದೆ ವಿಡಿಯೋದಲ್ಲಿ ತಿಳಿಸಿದ್ದಾರೆ.
ಸ್ವಂತ ಇಚ್ಛೆಯಿಂದಲೇ ಕತಿಹಾರ್ ತಲುಪಿದ್ದ ವಿದ್ಯಾರ್ಥಿ: ಪೊಲೀಸ್ ವಿಚಾರಣೆಯ ವೇಳೆ ಫೈಜಾನ್ ತಾನು ಗೋರಖ್‌ಪುರ ಜಂಕ್ಷನ್‌ನಿಂದ ಬಿಹಾರದ ಕತಿಹಾರ್‌ಗೆ ತನ್ನ ಸ್ವಂತ ಇಚ್ಛೆಯಿಂದಲೇ ಪ್ರಯಾಣ ಬೆಳೆಸಿದ್ದಾಗಿ ಹೇಳಿದ್ದಾನೆ. ಆರಂಭದಲ್ಲಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ ಆತ, ರೈಲಿನಲ್ಲಿ ಯಾರೋ ತನಗೆ ಅಮಲು ಪದಾರ್ಥ (ಡ್ರಗ್ಸ್) ನೀಡಿದ್ದರು ಎಂದು ಪರಸ್ಪರ ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ್ದನು. ಆದರೆ, ಪೊಲೀಸರು ತಾಂತ್ರಿಕವಾಗಿ ತನಿಖೆ ನಡೆಸಿ ಪ್ರಶ್ನಿಸಿದಾಗ ಹಲ್ಲೆಯ ಕಥೆ ಸಂಪೂರ್ಣ ಸುಳ್ಳು ಎಂದು ಆತ ಬಾಯಿಬಿಟ್ಟಿದ್ದಾನೆ.
ಓದಲು ಸಾಧ್ಯವಾಗದೆ ಹೆಣೆದಿದ್ದ ಸಂಚು: ಕುಟುಂಬದ ಮೂಲಗಳ ಪ್ರಕಾರ, ಫೈಜಾನ್ ಮದರಸಾದಲ್ಲಿ ಕುರಾನ್ ಪಾಠಗಳನ್ನು ಕಲಿಯಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ತುಂಬಾ ಕಷ್ಟಪಡುತ್ತಿದ್ದನು. ತನಗೆ ಇನ್ನು ಮುಂದೆ ಅಲ್ಲಿ ಓದಲು ಸಾಧ್ಯವಿಲ್ಲ ಎಂಬ ವಿಷಯವನ್ನು ಪೋಷಕರಿಗೆ ನೇರವಾಗಿ ಹೇಳಲು ಆತನಿಗೆ ಧೈರ್ಯವಿರಲಿಲ್ಲ. “ತನಗೆ ಓದಲು ಆಗುತ್ತಿಲ್ಲ ಎಂಬ ವಿಷಯವನ್ನು ನಮಗೆ ನೇರವಾಗಿ ಹೇಗೆ ಹೇಳಬೇಕೆಂದು ತಿಳಿಯದೆ, ಆತ ಈ ರೀತಿಯ ಹಲ್ಲೆಯ ನಾಟಕವಾಡಿದ್ದಾನೆ,” ಎಂದು ತಂದೆ ವಿಷಾದಿಸಿದ್ದಾರೆ.
ವಿದ್ಯಾರ್ಥಿಯ ನಾಪತ್ತೆ ಮತ್ತು ರೈಲಿನಲ್ಲಿ ಹಲ್ಲೆಯ ಆರೋಪ ಸಾರ್ವಜನಿಕವಾಗಿ ತೀವ್ರ ಆತಂಕ ಮೂಡಿಸಿತ್ತಾದರೂ, ಪೊಲೀಸರ ಸಮಯೋಚಿತ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ. ಸದ್ಯ ವಿದ್ಯಾರ್ಥಿ ಸುರಕ್ಷಿತವಾಗಿದ್ದು, ಈ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ.
