ಮೀರತ್: ಇಬ್ಬರು ಮುಸ್ಲಿಂ ಯುವಕರನ್ನು ‘ಲವ್ ಜಿಹಾದ್’ ಮತ್ತು ಸಾಮೂಹಿಕ ಅತ್ಯಾಚಾರದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದ ಹಿಂದೂ ಬಲಪಂಥೀಯ ಸಂಘಟನೆಯ ಮುಖಂಡನೊಬ್ಬನ ಭೀಕರ ಸಂಚನ್ನು ಉತ್ತರ ಪ್ರದೇಶದ ಮೀರತ್ ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಆಘಾತಕಾರಿ ಘಟನೆಯು ಶನಿವಾರ ಮೀರತ್‌ನ ಜಾಗೃತಿ ವಿಹಾರ್ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ನಡೆದಿದೆ. ವಿಶ್ವ ಹಿಂದೂ ಪರಿಷತ್ (VHP) ಸಂಘಟನೆಗೆ ಸೇರಿದ ಕೆಲವರು, ಇಬ್ಬರು ಮುಸ್ಲಿಂ ಯುವಕರು ಮತ್ತು ಒಬ್ಬ ಹಿಂದೂ ಯುವತಿ ಪ್ರಯಾಣಿಸುತ್ತಿದ್ದ ಕಾರನ್ನು ತಡೆದಿದ್ದರು. ಕಾರಿನಲ್ಲಿದ್ದ ಜೀಶನ್ ಮತ್ತು ಶಹವೇಜ್ ಎಂಬ ಯುವಕರು ಹಿಂದೂ ಯುವತಿಯನ್ನು ಅನುಮಾನಾಸ್ಪದ ಸಂದರ್ಭದಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದರು.
ಪೊಲೀಸ್ ತನಿಖೆಯಲ್ಲಿ ಬಯಲಾದ ಸಂಚು: ಆರಂಭದಲ್ಲಿ ಈ ದೂರಿನ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಮಾರು 5 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದಾಗ ಇಡೀ ಪ್ರಕರಣಕ್ಕೆ ನಾಟಕೀಯ ತಿರುವು ಸಿಕ್ಕಿತು. ಕಾರಿನಲ್ಲಿದ್ದ ಭಾವನಾ ಎಂಬ ಯುವತಿ ಪೊಲೀಸರ ಮುಂದೆ ಇಡೀ ಸುಳ್ಳು ಸಂಚಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾಳೆ. ಈ ಇಡೀ ಅಪಹರಣದ ನಾಟಕವನ್ನು ವಿಎಚ್‌ಪಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಕುಲ್ ಗುರ್ಜರ್ ಎಂಬಾತನೇ ರೂಪಿಸಿದ್ದನು ಎಂದು ಆಕೆ ಒಪ್ಪಿಕೊಂಡಿದ್ದಾಳೆ.
ಬುಲಂದ್‌ಶಹರ್‌ನ ಸ್ಯಾನಾ ನಿವಾಸಿಯಾದ ಭಾವನಾ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ತನಗೆ ಕಳೆದ ಒಂದೂವರೆ ವರ್ಷದಿಂದ ನಕುಲ್ ಪರಿಚಯವಿದ್ದನು. ಜೀಶನ್ ಮತ್ತು ಶಹವೇಜ್ ಅವರನ್ನು ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನಗೆ ಸಹಾಯ ಮಾಡಿದರೆ ಭಾರಿ ಹಣ ಮತ್ತು ಕೆಲಸ ಕೊಡಿಸುವುದಾಗಿ ನಕುಲ್ ಆಮಿಷ ಒಡ್ಡಿದ್ದನು. ಮುಸ್ಲಿಂ ಯುವಕರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ‘ಲವ್ ಜಿಹಾದ್’ ಸುಳ್ಳು ಆರೋಪ ಹೊರಿಸಿ, ಅವರ ಕುಟುಂಬದಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡುವುದು ನಕುಲ್ ಗುರ್ಜರ್‌ನ ಅಸಲಿ ಯೋಜನೆಯಾಗಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.
ಯುವಕರನ್ನು ಸಿಲುಕಿಸಲು ಹೆಣೆದಿದ್ದ ಬಲೆ: ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಯುವಕ ಜೀಶನ್ ಮನೆಗೆಲಸದವರನ್ನು (Domestic help) ಒದಗಿಸುವ ಏಜೆನ್ಸಿಯೊಂದನ್ನು ನಡೆಸುತ್ತಿದ್ದನು. ಇದನ್ನೇ ಬಂಡವಾಳ ಮಾಡಿಕೊಂಡ ನಕುಲ್ ಗುರ್ಜರ್, ಕೆಲಸದ ನಿಮಿತ್ತ ಯುವತಿಯನ್ನು ಜೀಶನ್ ಸಂಪರ್ಕಿಸುವಂತೆ ಮಾಡಿದ್ದನು. ಯೋಜನೆಯಂತೆ ಯುವಕರು ಮಹಿಳೆಯೊಂದಿಗೆ ಕಾರಿನಲ್ಲಿ ಹೊರಟಾಗ, ನಕುಲ್ ಮತ್ತು ಆತನ ಸಹಚರರು ಲವ್ ಜಿಹಾದ್ ಹೆಸರಿನಲ್ಲಿ ದಾಳಿ ನಡೆಸಿ ವಿಡಿಯೋ ಮಾಡಿ ಹಣ ವಸೂಲಿಗೆ ಸಂಚು ಹೂಡಿದ್ದರು.
ಆರೋಪಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು: ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಸುಚಿತಾ ಸಿಂಗ್, ಆರಂಭದಲ್ಲಿ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆಯಲಾಗಿತ್ತಾದರೂ ವಿಚಾರಣೆ ಮತ್ತು ತಾಂತ್ರಿಕ ತನಿಖೆಯ ಬಳಿಕ ಪ್ರಕರಣದ ದಿಕ್ಕು ಸಂಪೂರ್ಣವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಇದೀಗ ಸ್ವಯಂಪ್ರೇರಿತರಾಗಿ ಮುಖ್ಯ ಸಂಚುಗಾರ ನಕುಲ್ ಗುರ್ಜರ್ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಇದೇ ವೇಳೆ ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಆಕೆ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಯುವತಿ ತನಗೆ 16 ವರ್ಷ ಎಂದು ಸುಳ್ಳು ಹೇಳಿದ್ದಳು, ಆದರೆ ಆಕೆಯ ಶಾಲಾ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ 19 ವರ್ಷ ವಯಸ್ಸಾಗಿರುವುದು ದೃಢಪಟ್ಟಿದೆ. ಪೊಲೀಸರು ಸದ್ಯ ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದು, ತಲೆಮರೆಸಿಕೊಂಡಿರುವ ನಕುಲ್ ಗುರ್ಜರ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
