Home ವಿದೇಶ ಅಮೆರಿಕದಲ್ಲಿ ‘ಆಪರೇಷನ್ ಚೆಕ್‌ಮೇಟ್’: ಅಕ್ರಮವಾಗಿ ಟ್ರಕ್ ಚಾಲನೆ ಮಾಡುತ್ತಿದ್ದ 30 ಭಾರತೀಯರ ಬಂಧನ; ಶೀಘ್ರದಲ್ಲೇ ಗಡಿಪಾರು!

ಅಮೆರಿಕದಲ್ಲಿ ‘ಆಪರೇಷನ್ ಚೆಕ್‌ಮೇಟ್’: ಅಕ್ರಮವಾಗಿ ಟ್ರಕ್ ಚಾಲನೆ ಮಾಡುತ್ತಿದ್ದ 30 ಭಾರತೀಯರ ಬಂಧನ; ಶೀಘ್ರದಲ್ಲೇ ಗಡಿಪಾರು!

0

ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸುತ್ತಾ ಕಮರ್ಷಿಯಲ್ (ವಾಣಿಜ್ಯ) ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಕ್ಕೂ ಹೆಚ್ಚು ಭಾರತೀಯರನ್ನು ಅಲ್ಲಿನ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲಿನ ಫೆಡರಲ್ ಸರ್ಕಾರ ನಡೆಸಿದ ವಿಶೇಷ ಜಂಟಿ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮವಾಗಿ ಸಿಕ್ಕಿಬಿದ್ದಿರುವ ಈ ಎಲ್ಲಾ ಟ್ರಕ್ ಚಾಲಕರನ್ನು ಶೀಘ್ರದಲ್ಲೇ ಭಾರತಕ್ಕೆ ಗಡಿಪಾರು (ಡಿಪೋರ್ಟ್) ಮಾಡಲಾಗುವುದು ಎಂದು ಅಮೆರಿಕದ ಕಸ್ಟಮ್ಸ್ ಅಂಡ್ ಬೋರ್ಡರ್ ಪ್ರೊಟೆಕ್ಷನ್ (CBP) ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಮೇ 11 ರಿಂದ ಮೇ 15 ರ ನಡುವೆ ನಡೆದ ‘ಆಪರೇಷನ್ ಚೆಕ್‌ಮೇಟ್’ (Operation Checkmate) ಎಂಬ ವಿಶೇಷ ಭದ್ರತಾ ಕಾರ್ಯಾಚರಣೆಯ ಭಾಗವಾಗಿ ಈ ಅಕ್ರಮ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಅರಿಜೋನಾ ರಾಜ್ಯದ ‘ಯುಮಾ ಸೆಕ್ಟರ್’ನಲ್ಲಿರುವ ಗಡಿ ಭದ್ರತಾ ಏಜೆಂಟ್‌ಗಳು ಈ ಟ್ರಕ್ ಚಾಲಕರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 52 ಜನರನ್ನು ಅಕ್ರಮವಾಗಿ ನೆಲೆಸಿರುವುದಕ್ಕಾಗಿ ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ 36 ಜನರನ್ನು ಸೆಮಿ-ಟ್ರಕ್ ಚಾಲಕರು ಎಂದು ಗುರುತಿಸಲಾಗಿದೆ. ಈ 36 ಟ್ರಕ್ ಚಾಲಕರಲ್ಲಿ ಬರೋಬ್ಬರಿ 30 ಜನ ಭಾರತೀಯರೇ ಆಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನುಳಿದ ಆರು ಜನ ಚಾಲಕರು ಮೆಕ್ಸಿಕೋ, ಎಲ್ ಸಾಲ್ವಡಾರ್ ಮತ್ತು ರಷ್ಯಾ ದೇಶಗಳಿಗೆ ಸೇರಿದವರಾಗಿದ್ದಾರೆ. ಬಂಧಿತರಲ್ಲಿ ಕೆಲವು ಅಕ್ರಮ ವಲಸಿಗರು ಈಗಾಗಲೇ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ವಾಷಿಂಗ್ಟನ್ ಮತ್ತು ವರ್ಜೀನಿಯಾ ರಾಜ್ಯಗಳ ಅಧಿಕೃತ ಕಮರ್ಷಿಯಲ್ ಡ್ರೈವಿಂಗ್ ಲೈಸೆನ್ಸ್ (CDL) ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.

You cannot copy content of this page

Exit mobile version