Home ವಿದೇಶ ರಿಯಾದ್ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: 12 ಮಂದಿ ಸಾವು, 309 ಜನರಿಗೆ ಗಾಯ;...

ರಿಯಾದ್ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: 12 ಮಂದಿ ಸಾವು, 309 ಜನರಿಗೆ ಗಾಯ; ಹೊಣೆ ಹೊತ್ತ ಹೌತಿ ಬಂಡುಕೋರರು

0

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಕ್ಟೋಬರ್ 10 ರಂದು ನಡೆದ ಭೀಕರ ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 309 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ (GACA) ದೃಢಪಡಿಸಿದೆ. ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಮೃತಪಟ್ಟವರಲ್ಲಿ ಸೌದಿ ಅರೇಬಿಯಾದ ನಾಲ್ವರು, ಬಾಂಗ್ಲಾದೇಶದ ಇಬ್ಬರು ಹಾಗೂ ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ, ಪ್ಯಾಲೆಸ್ಟೈನ್ ಮತ್ತು ಸುಡಾನ್ ದೇಶಗಳ ತಲಾ ಒಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಅಧಿಕಾರಿಗಳು ಆಸ್ತಿಪಾಸ್ತಿ ನಷ್ಟದ ಅಂದಾಜು ನಡೆಸುತ್ತಿದ್ದಾರೆ.

ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಒಂದೇ ವಾರದಲ್ಲಿ ನಡೆದ ಮೂರನೇ ದಾಳಿ ಇದಾಗಿದೆ. ಈ ವಾರದ ಆರಂಭದಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಮೃತಪಟ್ಟಿದ್ದರು ಹಾಗೂ ಟಾರ್ಮ್ಯಾಕ್‌ನಲ್ಲಿ ನಿಲ್ಲಿಸಲಾಗಿದ್ದ ಸೌದಿ ವಾಣಿಜ್ಯ ವಿಮಾನವೊಂದು ತೀವ್ರ ಹಾನಿಗೊಳಗಾಗಿತ್ತು.

ರಾಯಿಟರ್ಸ್ ವರದಿಯ ಪ್ರಕಾರ, ದಾಳಿ ನಡೆದ ತಕ್ಷಣ ಆಂಬ್ಯುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ವಿಮಾನ ನಿಲ್ದಾಣದೊಳಗೆ ಪ್ರಬಲ ಸ್ಫೋಟ ಸಂಭವಿಸಿದ ನಂತರ ನಿರ್ಗಮನ ದ್ವಾರದ (Departure gate) ಸೀಲಿಂಗ್ ಕುಸಿದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೌದಿ ಅರೇಬಿಯಾದ ಮುನ್ನೆಚ್ಚರಿಕೆ ವ್ಯವಸ್ಥೆಯು ಯಾವುದೇ ಎಚ್ಚರಿಕೆಯನ್ನು ನೀಡುವ ಮೊದಲೇ ಈ ದಿಢೀರ್ ದಾಳಿ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ಬೆನ್ನಲ್ಲೇ ರಿಯಾದ್‌ಗೆ ಬರುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಅಥವಾ ಇತರ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳದಂತೆ ಸೂಚಿಸಿದೆ. ಬ್ರಿಟನ್, ಐರ್ಲೆಂಡ್ ಮತ್ತು ಕೆನಡಾ ರಾಯಭಾರ ಕಚೇರಿಗಳು ಸಹ ಭದ್ರತಾ ಸಲಹೆಗಳನ್ನು ಬಿಡುಗಡೆ ಮಾಡಿವೆ.

ಮತ್ತೊಂದೆಡೆ, “ನಾವು ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದ್ದೇವೆ” ಎಂದು ಹೌತಿ ಮಾಧ್ಯಮ ಮುಖ್ಯಸ್ಥರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಸೌದಿ ವಾಯುಪ್ರದೇಶವನ್ನು ಮಿಲಿಟರಿ ಕಾರ್ಯಾಚರಣೆ ವಲಯವೆಂದು ಘೋಷಿಸಿರುವ ಹೌತಿಗಳು, ವಿಮಾನಯಾನ ಸಂಸ್ಥೆಗಳು ಸೌದಿ ವಾಯುಪ್ರದೇಶ ಪ್ರವೇಶಿಸದಂತೆ ಎಚ್ಚರಿಕೆ ರವಾನಿಸಿದ್ದಾರೆ.

You cannot copy content of this page

Exit mobile version