Home ದೇಶ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ಕೇಂದ್ರ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಹೊತ್ತಿ ಉರಿದ ಬೆಂಕಿ: ಸತತ...

ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ಕೇಂದ್ರ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಹೊತ್ತಿ ಉರಿದ ಬೆಂಕಿ: ಸತತ 2 ಗಂಟೆಗಳ ಕಾಲ ಬೆಂಕಿ ಆರಿಸಲು ಪ್ರಯತ್ನ

0

ದೆಹಲಿ: ದೇಶಾದ್ಯಂತ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳು ಭುಗಿಲೆದ್ದಿರುವ ಬೆನ್ನಲ್ಲೇ, ದೆಹಲಿಯಲ್ಲಿರುವ ಕೇಂದ್ರ ಶಿಕ್ಷಣ ಸಚಿವಾಲಯದ (Union Education Ministry) ಕಚೇರಿ ಕಟ್ಟಡದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಬೆಂಕಿ ಹೊತ್ತಿಕೊಂಡಿದೆ.

ನೀಟ್ ಮತ್ತು ಸಿಯುಇಟಿ ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ತೀವ್ರ ಒತ್ತಾಯ ಹೇರುತ್ತಿರುವ ಆತಂಕದ ಸಮಯದಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಐಟಿಒ (ITO) ವ್ಯಾಪ್ತಿಯಲ್ಲಿರುವ ‘ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್’ (SPA) ಕ್ಯಾಂಪಸ್‌ನ ಶಿಕ್ಷಣ ಇಲಾಖೆಯ ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿ ಈ ಅಕಸ್ಮಿಕ ಅವಘಡ ಸಂಭವಿಸಿದ್ದು, ಒಮ್ಮೆಲೇ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ವಿಷಯ ತಿಳಿಯುತ್ತಿದ್ದಂತೆಯೇ ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಒಟ್ಟು 8 ಅಗ್ನಿಶಾಮಕ ವಾಹನಗಳು (ಫೈರ್ ಇಂಜಿನ್) ಸ್ಥಳಕ್ಕೆ ಧಾವಿಸಿದವು. ಸುಮಾರು ಎರಡು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಚೇರಿಯಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುತ್ತಿರುವುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version