Home ದೇಶ ರಸ್ತೆಯಲ್ಲಿ ಯುವತಿಗೆ ಕಿರುಕುಳ: ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಘಟನೆ, ನಾಲ್ವರ ಬಂಧನ

ರಸ್ತೆಯಲ್ಲಿ ಯುವತಿಗೆ ಕಿರುಕುಳ: ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಘಟನೆ, ನಾಲ್ವರ ಬಂಧನ

0

ಪಾಟ್ನಾ: ಬಿಹಾರದಲ್ಲಿ ಯುವತಿಯೊಬ್ಬಳಿಗೆ ನಡುರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಿರುವ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಜಮುಯಿಯಲ್ಲಿ ನಡೆದಿದ್ದ ಘಟನೆಯ ಬೆನ್ನಲ್ಲೇ, ಇದೀಗ ಸಮಸ್ತಿಪುರದಲ್ಲಿ ನಡೆದ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವಕನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಯುವತಿಯನ್ನು ಕೆಲ ಪುಂಡರು ಅಡ್ಡಗಟ್ಟಿದ್ದಾರೆ. ರಸ್ತೆಯಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ ಪುಂಡರು, ಆಕೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಹಾಗೂ ನಿಂದನೀಯ ಪದಗಳಿಂದ ಬೆದರಿಸಿದ್ದಾರೆ. ಸಮಸ್ತಿಪುರದ ಕರ್ಪೂರಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಜಗತ್‌ಸಿಂಗ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಸ್ತೆಯಲ್ಲಿ ಫೋಟೋ ತೆಗೆದುಕೊಳ್ಳಲೆಂದು ಯುವತಿ ಮತ್ತು ಯುವಕ ಬೈಕ್ ನಿಲ್ಲಿಸಿದ್ದ ಸಂದರ್ಭದಲ್ಲಿ ಸ್ಥಳೀಯ ಯುವಕರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೆಲವೇ ದಿನಗಳ ಹಿಂದೆಯಷ್ಟೇ ಜಮುಯಿಯಲ್ಲಿ ಹತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುಂಡರು ಕಿರುಕುಳ ನೀಡಿದ್ದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಸಮಸ್ತಿಪುರ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ತಿಳಿಸಿದ್ದಾರೆ.

You cannot copy content of this page

Exit mobile version