ಬಿಹಾರದ ಸಾಸಾರಾಮ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 6 ರಲ್ಲಿದ್ದ, ಪಾಟ್ನಾಕ್ಕೆ ಹೊರಡಲು ಸಿದ್ಧವಾಗುತ್ತಿದ್ದ ‘ಸಾಸಾರಾಮ್-ಪಾಟ್ನಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್’ ರೈಲಿನಲ್ಲಿ ಮುಂಜಾನೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಜನರಲ್ ಬೋಗಿಯೊಂದರ ಶೌಚಾಲಯದ ಭಾಗದಿಂದ ಮೊದಲಿಗೆ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಬೋಗಿಗೆ ವ್ಯಾಪಿಸಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಪ್ರಾಣಭಯದಿಂದ ತಕ್ಷಣವೇ ರೈಲಿನಿಂದ ಕೆಳಗೆ ಇಳಿದು ಓಡಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೇ ಸಿಬ್ಬಂದಿ, ಬೆಂಕಿ ಹೊತ್ತಿಕೊಂಡಿದ್ದ ಬೋಗಿಯನ್ನು ರೈಲಿನ ಉಳಿದ ಭಾಗದಿಂದ ಪ್ರತ್ಯೇಕಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಮತ್ತು ಆರ್‌ಪಿಎಫ್ (RPF) ಪಡೆಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ಹದೋಟಿಗೆ ತಂದಿದ್ದಾರೆ.
ಈ ಅಪಘಾತದಲ್ಲಿ ರೈಲಿನ ಒಂದು ಜನರಲ್ ಬೋಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆಯಾದರೂ, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅಗ್ನಿಪ್ರಮಾದ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ರೈಲ್ವೇ ಉನ್ನತಾಧಿಕಾರಿಗಳು ಈ ಕುರಿತು ಪೂರ್ಣ ಪ್ರಮಾಣದ ತಾಂತ್ರಿಕ ತನಿಖೆಗೆ ಆದೇಶಿಸಿದ್ದಾರೆ.
