Home ಅಪಘಾತ ಮುಂಬೈ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಆಕಸ್ಮಿಕ: ಮಗು ಸೇರಿದಂತೆ ಇಬ್ಬರು ಸಾವು, ಆರು ಜನರಿಗೆ...

ಮುಂಬೈ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಆಕಸ್ಮಿಕ: ಮಗು ಸೇರಿದಂತೆ ಇಬ್ಬರು ಸಾವು, ಆರು ಜನರಿಗೆ ಗಾಯ

0

ಮುಂಬೈ: ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿರುವ ಬಹುಮಹಡಿ ವಸತಿ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದು, ಸದ್ಯ ಸ್ಥಳದಲ್ಲಿ ಕೂಲಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದಲ್ಲಿ ಗಾಯಗೊಂಡ ಇಬ್ಬರನ್ನು ಕೂಪರ್ ಆಸ್ಪತ್ರೆಗೆ ಹಾಗೂ ಇನ್ನು ಆರು ಮಂದಿಯನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನಾವತಿ ಆಸ್ಪತ್ರೆಗೆ ಕರೆದೊಯ್ಯಲಾದ 2.5 ವರ್ಷದ ಮಗು ಅಭೀರ್ ಹಾಗೂ 23 ವರ್ಷದ ಅಂಕಿತಾ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದ್ದಾರೆ. ಇನ್ನುಳಿದ ಗಾಯಾಳುಗಳಾದ ಪಾರ್ಥ್ (32), ಹಿರೇನ್ (64), ಯಶಸ್ವಿ ಮತ್ತು ಅಭಿಷೇಕ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಮನೋಜ್ ಸೋನಾವಣೆ ಹಾಗೂ ಶಿವಂ ದ್ವಿವೇದಿ (25) ಎಂಬುವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.

ನೆಲಮಹಡಿ ಸೇರಿದಂತೆ 11 ಮಹಡಿಗಳನ್ನು ಹೊಂದಿರುವ ಈ ಕಟ್ಟಡದ 11ನೇ ಮಹಡಿಯಲ್ಲಿದ್ದ 1101 ಮತ್ತು 1102 ಸಂಖ್ಯೆಯ ಫ್ಲ್ಯಾಟ್‌ಗಳಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಸುಮಾರು 4,000 ಚದರ ಅಡಿ ವ್ಯಾಪ್ತಿಯಲ್ಲಿ ಹರಡಿದ್ದ ಬೆಂಕಿಯಿಂದಾಗಿ ವೈರಿಂಗ್, ಎಸಿ ಯೂನಿಟ್‌ಗಳು, ಪೀಠೋಪಕರಣಗಳು ಹಾಗೂ ಅಡುಗೆಮನೆಯ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

You cannot copy content of this page

Exit mobile version