Home ದೇಶ “ಬಿಹಾರದ ಆಡಳಿತ ಪ್ರಗತಿ ಉತ್ತಮವಾಗಿದೆ” : ಎನ್‌ಡಿಎ ಆಡಳಿತವನ್ನು ಹಾಡಿ ಹೊಗಳಿದ ಶಶಿ ತರೂರ್

“ಬಿಹಾರದ ಆಡಳಿತ ಪ್ರಗತಿ ಉತ್ತಮವಾಗಿದೆ” : ಎನ್‌ಡಿಎ ಆಡಳಿತವನ್ನು ಹಾಡಿ ಹೊಗಳಿದ ಶಶಿ ತರೂರ್

0

ನಳಂದ: ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ‘ಮನ್ರೇಗಾ’ ಯೋಜನೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರು ಕೈಬಿಡುವ ವಿಚಾರವಾಗಿ ಎನ್‌ಡಿಎ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೀಗ ಮತ್ತೆ ಎನ್‌ಡಿಎ ಸರ್ಕಾರದ ಆಡಳಿತದ ಅಡಿಯಲ್ಲಿ ಬಿಹಾರದಲ್ಲಿ ಕಂಡುಬಂದ ಪ್ರಗತಿಯನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ.

ಬಿಹಾರದ ನಳಂದ ವಿಶ್ವವಿದ್ಯಾಲಯದಲ್ಲಿ ನಡೆದ ಮೊದಲ ನಳಂದ ಸಾಹಿತ್ಯೋತ್ಸವದ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, “ಬಿಹಾರದಲ್ಲಿ ಮೂಲಸೌಕರ್ಯಗಳು ಈ ಹಿಂದೆ ನಾನು ಕೇಳಿದ್ದಕ್ಕಿಂತ ಬಹಳ ಉತ್ತಮವಾಗಿವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದರು.

“ರಸ್ತೆಗಳು ಸುಧಾರಿತವಾಗಿವೆ. ಜನರು ತಡರಾತ್ರಿಯಲ್ಲೂ ಬೀದಿಗಳಲ್ಲಿ ನಿರಾಳವಾಗಿ ಓಡಾಡುತ್ತಾರೆ. ಇದು ಹಿಂದೆ ಕಾಣದ ದೃಶ್ಯ. ವಿದ್ಯುತ್, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಪೂರೈಕೆ ಸಮರ್ಪಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು ನಡೆದಿವೆ” ಎಂದು ಅವರು ವಿವರಿಸಿದರು.

ಬಿಹಾರದಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೈತ್ರಿ ಸರ್ಕಾರ ಆಡಳಿತದಲ್ಲಿರುವ ಹಿನ್ನೆಲೆಯಲ್ಲಿ, ಈ ಪ್ರಶಂಸೆಗೆ ರಾಜಕೀಯ ಅರ್ಥ ಕಲ್ಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ತರೂರ್ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.

“ನನ್ನನ್ನು ಇಲ್ಲಿ ರಾಜಕೀಯಕ್ಕೆ ಸೇರಿಸಬೇಡಿ. ನಾನು ಕಂಡ ಪ್ರಗತಿಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಇದನ್ನು ನೋಡಿ ನನಗೆ ಸಂತೋಷವಾಗಿದೆ. ಬಿಹಾರದ ಜನರು ಮತ್ತು ಅವರ ಪ್ರತಿನಿಧಿಗಳು ಈ ಸಾಧನೆಗೆ ಕ್ರೆಡಿಟ್ ಅರ್ಹರು” ಎಂದಷ್ಟೇ ಹೇಳಿದರು.

ಮನ್ರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದ ತರೂರ್ ಅವರ ಈ ಹೇಳಿಕೆ, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version