ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜೀವನಾಡಿಯಾಗಿರುವ ದ್ವಿಚಕ್ರ ವಾಹನಗಳ ಅಪಘಾತ ಸಾವುಗಳ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2019 ರಿಂದ 2023ರ ನಡುವೆ ದೇಶದಲ್ಲಿ ಬರೋಬ್ಬರಿ 3.35 ಲಕ್ಷ ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ.
ಇದೇ 5 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ನಡೆದ ಎಲ್ಲಾ ರೀತಿಯ ರಸ್ತೆ ಅಪಘಾತಗಳಲ್ಲಿ ಒಟ್ಟು 7.78 ಲಕ್ಷ ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ದ್ವಿಚಕ್ರ ವಾಹನ ಸವಾರರ ಪಾಲೇ ಹೆಚ್ಚಿದೆ. ದೇಶದಲ್ಲಿ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಏರುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಮಾಹಿತಿಯಂತೆ, 2023ರಲ್ಲಿ ಸಂಭವಿಸಿದ ಒಟ್ಟು ರಸ್ತೆ ಅಪಘಾತ ಸಾವುಗಳಲ್ಲಿ ಶೇ. 45 ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ. ದೆಹಲಿಯ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ವಲಯ) ವ್ಯಾಪ್ತಿಯಲ್ಲಿಯೂ ಒಟ್ಟು ಸಾವುಗಳಲ್ಲಿ ಶೇ. 38 ರಷ್ಟು ಪಾಲು ಬೈಕ್ ಸವಾರರದೇ ಆಗಿದೆ ಎಂದು ವರದಿ ತಿಳಿಸಿದೆ.
