ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ನಡೆಸುತ್ತಿರುವ ಬೆದರಿಕೆ, ಕಿರುಕುಳ, ಅಕ್ರಮ ಕೂಟ ರಚನೆ ಮತ್ತು ದ್ವೇಷ ಹರಡುವ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಹೋರಾಟಗಾರರ ನಿಯೋಗವೊಂದು ಶುಕ್ರವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG&IGP) ಎಂ.ಎ. ಸಲೀಂ ಮತ್ತು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
“ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಪುನೀತ್ ಕೆರೆಹಳ್ಳಿ, ವಲಸೆ ಕಾರ್ಮಿಕರ ಶೆಡ್‌ಗಳಿಗೆ ಪದೇ ಪದೇ ಅಕ್ರಮವಾಗಿ ನುಗ್ಗಿ, ಅವರ ರಾಷ್ಟ್ರೀಯತೆಯನ್ನು ಪ್ರಶ್ನಿಸುತ್ತಿದ್ದಾನೆ. ಬೆದರಿಕೆ ಹಾಕಿ ಗುರುತಿನ ಚೀಟಿಗಳನ್ನು ಕೇಳುವ ಮೂಲಕ ದೌರ್ಜನ್ಯ ಎಸಗುತ್ತಿದ್ದು, ಈ ಆತಂಕಕಾರಿ ವರ್ತನೆಯನ್ನು ನಿಮ್ಮ ತುರ್ತು ಗಮನಕ್ಕೆ ತರುತ್ತಿದ್ದೇವೆ. ಇಂತಹ ಕೃತ್ಯಗಳು ಕಾನೂನುಬಾಹಿರವಾಗಿದ್ದು, ಕಾರ್ಮಿಕರ ಗೌರವ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿವೆ. ಜೊತೆಗೆ ಇವು ಗುಂಪು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಪಾಯವಿದೆ,” ಎಂದು ನಿಯೋಗ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ನಿಯೋಗದಲ್ಲಿ ಗೀತಾ ಮೆನನ್, ರಾಧಾ ಕೆ., ಗೀತಾ ಬಿ., ಮೊಹಮ್ಮದ್ ಹಯಾನ್ ಮತ್ತು ತನ್ವೀರ್ ಅಹ್ಮದ್ ಇದ್ದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ ಎಂದು ನಿಯೋಗ ತಿಳಿಸಿದೆ.
