ಕಾಂತಾರ ಚಿತ್ರದ ಕುರಿತ ವಿಮರ್ಶೆಗಳ ಸುರಿಮಳೆ ನಿಲ್ಲುತ್ತಿಲ್ಲ. ಕರಾವಳಿಯ ಬೂತಾರಾಧನೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ, ಸಾಹಿತಿ-ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ಕಾಂತಾರ ನೋಡಿದ ನಂತರ ಬರೆದಿರುವ ಬರೆಹ ಇಲ್ಲಿದೆ.
ಕೊನೆಗೂ ಕಾಂತಾರ ಸಿನೇಮಾವನ್ನು ಕನ್ನಡದಲ್ಲಿಯೇ ನೋಡಿದೆ. ನನಗೆ ಖುಷಿಯಾಯಿತು. ಕರಾವಳಿಯ ಬದುಕಿನ ಎರಡು ಕಣ್ಣುಗಳಂತಿರುವ ಭೂತಾರಾಧನೆ ಮತ್ತು ಯಕ್ಷಗಾನಗಳನ್ನು ಅತ್ಯಂತ ಸೃಜನಶೀಲವಾಗಿ ಮರು ಸೃಷ್ಟಿಸಿದವರು ಕಡಿಮೆ ಎಂದೇ ಹೇಳಬೇಕು. ಎಷ್ಟೋ ಬಾರಿ ಈ ಪ್ರಕಾರಗಳು ಎಷ್ಟು ಸಶಕ್ತವಾಗಿರುತ್ತವೆ ಎಂದರೆ ಸೃಜನಶೀಲತೆಯ ಅನೇಕ ಸಾಧ್ಯತೆಗಳನ್ನು ಅವುಗಳೇ ಸೂರೆಗೊಂಡಿರುತ್ತವೆ. ಈ ನಿಟ್ಟಿನಲ್ಲಿ ಕಾಂತಾರವು ಕರಾವಳಿಯ ಬದುಕಿನ ಕೆಲವು ಆಯಾಮಗಳನ್ನು ಮೊದಲಬಾರಿಗೆ ತೆರೆಯಮೇಲೆ ತಂದಿದೆ.
ಪಂಜುರ್ಲಿ ದೈವ, ಅದರ ಗಗ್ಗರದ ನಿಗೂಢ ದನಿ, ಸೂಟೆ ( ದೊಂದಿ), ಹಸಿರು ಕಾಡು, ಕಂಬಳ, ಹೊಡೆದಾಟ, ಬೀಡಿ, ಶರಾಬು, ಕೋಳಿಕಟ್ಟ, ಯಕ್ಷಗಾನ, ಮೀನು, ವಿಭಿನ್ನ ಕನ್ನಡ ಇತ್ಯಾದಿಗಳನ್ನು ನಿರ್ದೇಶಕ_ರಿಷಭ್ ಶೆಟ್ಟಿಯವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಕರಾವಳಿಯ ಕಡಲಿನ ಅಬ್ಬರ, ದೈವ ನರ್ತಕರೇ ಸೃಷ್ಟಿಸುವ ಸಂಗೀತ, ಕಾಡೇ ಹುಟ್ಟಿಸುವ ನಿಗೂಢ ಧ್ವನಿ ಇತ್ಯಾದಿಗಳನ್ನು ಇಲ್ಲಿ ಹೆಚ್ಚಾಗಿ ಬಳಸಿಕೊಂಡಿಲ್ಲ. ಪಾಡ್ದನದ, ಕಬಿತಗಳ ಲಯಗಾರಿಕೆಯ ಮಾಧುರ್ಯವನ್ನು ಇಲ್ಲಿ ಕೇಳಲಾರೆವು. ಮೂಲತ: ಈ ಲಯಗಳು ದೈವವೊಂದರ ದುರಂತಕ್ಕೆ ಪರಿಣಾಮಕಾರಿಯಾದ ಹಿನ್ನೆಲೆಯನ್ನು ಒದಗಿಸಿಕೊಡುತ್ತವೆ. ಬಹುಶ: ಕಮರ್ಶಿಯಲ್ ಸಿನೇಮಾವೊಂದು ಇವನ್ನೆಲ್ಲ ಬಳಸಿಕೊಳ್ಳುವುದೂ ಕಷ್ಟ.
ಈ ಚಿತ್ರವು 1870, 1970 ಮತ್ತು 1990 ರ ಮೂರು ಅವಧಿಗಳಲ್ಲಿ ಕರಾವಳಿ ಕಂಡ ಸ್ತಿತ್ಯಂತರಗಳನ್ನು ಒಂದು ಚೌಕಟ್ಟಾಗಿ ಇರಿಸಿಕೊಂಡಿದೆ. ವಸಾಹತು ಕಾಲಘಟ್ಟದಲ್ಲಿ ಥಾಮಸ್ ಮುನ್ರೋ ಮೊದಲ ಬಾರಿಗೆ ಕಾಡಿನ ಮೇಲೆ ಪ್ರಭುತ್ವ ಸಾಧಿಸುವಂತ ಕಾನೂನುಗಳನ್ನು ತಂದ. ಈಸ್ಟ್ ಇಂಡಿಯಾ ಕಂಪೆನಿಯ ಹಡಗುಗಳು ಮರಗಳನ್ನು ಹೊತ್ತು ಸಾಗಿಸಲು ಸದಾ ಸಿದ್ಧವಾಗಿರುವಾಗ ಅದಕ್ಕೆ ಬೇಕಾದ ಕಾನೂನನ್ನು ಅವರೇ ತಂದುಕೊಂಡಿರುವುದು ಆಶ್ಚರ್ಯದ ವಿಷಯವೇನೂ ಅಲ್ಲ. ಕಾಡಿನ ಒತ್ತುವರಿ, ಕಾಡಿನ ಮಕ್ಕಳು ತಮ್ಮದೇ ಕಾಡಿನಲ್ಲಿ ಅನಾಥರಾಗುವುದು ಈ ಸಿನೇಮಾದಲ್ಲಿಯೂ ಬಂದಿದೆ.
೧೯೭೦ರ ದಶಕದಲ್ಲಿ ಭೂಮಸೂದೆ ಜ್ಯಾರಿಗೆ ಬಂದಾಗ ಭೂ ಸಂಬಂಧಗಳಲ್ಲಿ ಅಮೂಲಾಗ್ರ ಬದಲಾವಣೆಯಾಯಿತು. ದೈವ ನರ್ತಕರೂ ಅದರಿಂದ ಕೆಲವು ತೊಂದರೆಗಳಿಗೆ ಒಳಗಾದರು. ಸಿನೇಮಾದಲ್ಲಿ ಗುರುವನ ಕೊಲೆ ಅಂಥದ್ದರ ಒಂದು ಸಂಕೇತ. ಆ ಕಾಲದಲ್ಲಿ ಸ್ವಲ್ಪ ಬಿಕ್ಕಟ್ಟನ್ನೆದುರಿಸಿದ ಭೂತಾರಾಧನೆಯು, ೧೯೯೦ರ ಆನಂತರ ಮತ್ತೆ ವೈಭವದ ದಿನಗಳನ್ನು ಕಂಡಿತು. ತುಳುನಾಡಿನ ಹೊರಗಡೆಗೆ, ಮುಖ್ಯವಾಗಿ ಮುಂಬೈಗೆ ವಲಸೆ ಹೋದ ತುಳುವರು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿ ಮತ್ತೆ ಹುಟ್ಟಿದೂರಿನ ಭೂತಾರಾಧನೆ ಮತ್ತು ನಾಗಾರಾಧನೆಗೆ ಹಣದ ತೊಂದರೆಯಾಗದಂತೆ ನೋಡಿಕೊಂಡರು. ಇದರಿಂದ ಅವರಿಗೆಲ್ಲ ಊರಿನಲ್ಲೊಂದು ಗುರುತು ಕೂಡಾ ಪ್ರಾಪ್ತಿಸಿತು. ಈ ಹಿನ್ನಲೆಯಲ್ಲಿ ಕಾಂತಾರವು ಆಯ್ದುಕೊಂಡ ಕಾಲದ ಚೌಕಟ್ಟು ಅರ್ಥಪೂರ್ಣವಾಗಿದೆ.
ಸಿನೇಮಾವನ್ನು ಈಗಾಗಲೇ ಬಹುತೇಕ ಎಲ್ಲರೂ ನೋಡಿರುವುದರಿಂದ ಮತ್ತೆ ನಾನು ಕತೆ ಹೇಳುವುದಿಲ್ಲ.
ಚಿತ್ರದ ಕೊನೆಯಲ್ಲಿ ರಿಷಭ್ ಶೆಟ್ಟಿಯವರು ಮಾಡಿದ ಅಭಿನಯ ಅಮೋಘ. ದೈವಾರಾಧನೆಯಲ್ಲೂ ನಾಯಕರು ಅರ್ಧವಯಸ್ಸಿನಲ್ಲಿ ಸತ್ತು, ಆಮೇಲೆ ಮಾಯಕಗಳಾಗಿ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಉದಾಹರಣಗೆ ಕಲ್ಕುಡ -ಕಲ್ಲುರ್ಟಿಯವರು, ʼಜೀವ ಇರುವಾಗ ನೋಡಲಿಕ್ಕೆ ಆಗಲಿಲ್ಲ, ಸತ್ತು ನೋಡಿಕೊಳ್ಳುತ್ತೇವೆ; ಎಂದು ಹೇಳಿ ಮಾಯಕದಲ್ಲಿ ಅರಸನ ಮನೆಗೆ ಬೆಂಕಿ ಇಡುತ್ತಾರೆ, ಅರಸಿಯರಿಗೆ ಹುಚ್ಚು ಹಿಡಿಸುತ್ತಾರೆ. ಪಾಡ್ದನಗಳಲ್ಲಿ ಈ ಭಾಗ ಉಗ್ರವೇ ಆಗಿರುತ್ತದೆ. ಈ ವಿಷಯದಲ್ಲಿ ಅದು ಹಿಂದೂ ದೇವರುಗಳಿಗಿಂತ ಭಿನ್ನವೇ ಹೌದು. ನನಗೆ ಗೊತ್ತಿರುವ ಯಾವ ಹಿಂದೂ ದೇವರು ಕೂಡಾ ಅರ್ಧ ವಯಸ್ಸಿನಲ್ಲಿ ಸತ್ತು ಆನಂತರ ಮಾಯಕದಲ್ಲಿ ಸೇಡು ತೀರಿಸಿಕೊಳ್ಳುವುದನ್ನು ನಾನು ಓದಿಲ್ಲ. ದೈವವೊಂದರ ಮಾಯಕದ ಸೇಡಿನ ಭಾಗ , ಅದನ್ನು ಶೆಟ್ಟಿ ಅಭಿನಯಿಸಿದ ರೀತಿ ಕಾಂತಾರದ ಉತ್ಕೃಷ್ಟ ಭಾಗ ಎಂದು ನನ್ನ ಭಾವನೆ.
ಸಿನೇಮಾ ನೋಡಿ ಬಂದ ಮೇಲೆ ಈ ಸಿನೇಮಾ ಯಾಕಿಷ್ಟು ಚರ್ಚೆಗೆ ಒಳಗಾಯಿತು ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಪಂಜುರ್ಲಿಯನ್ನು ಕೊನೆಗೆ ವರಾಹ ರೂಪಿ ಎಂದು ಸಂಸ್ಕೃತದಲ್ಲಿ ನುತಿಸಿದ್ದು ಮತ್ತು ಅದಕ್ಕೆ ಪೂರಕವಾಗಿ ಪಾಡ್ದನಗಳಲ್ಲಿ ಇಲ್ಲದೇ ಇರುವ ಶಾಸ್ತ್ರೀಯಕ್ಕೆ ಹತ್ತಿರವಿರುವ ಸಂಗೀತ ಬಳಸಿದ್ದು ವಾಸ್ತವವಾಗಿ ಸಿನೇಮಾದ ಅತ್ಯಂತ ದುರ್ಬಲ ಭಾಗ. ಅದು ಆ ಕತೆಯ ಅಲ್ಲಿವರೆಗಣ ಬೆಳವಣಿಗೆಗೆ ಹೊಂದುವುದೇ ಇಲ್ಲ. ಆದರೆ ಈ ನಿಟ್ಟಿನಲ್ಲಿ ಸೃಜನಶೀಲ ಕಲಾವಿದನಿಗೆ ಇರಬೇಕಾದ ಸ್ವಾತಂತ್ರ್ಯವನ್ನು ನಾನಂತೂ ಪ್ರಶ್ನಿಸಲಾರೆ.
ಹೊಡೆದಾಟ, ಬಡಿದಾಟ, ಕೊಲೆ ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಸ್ವಲ್ಪ ಹೆಚ್ಚೇ ಇರುವುದರಿಂದಾಗಿ ರಿಷಭ ಶೆಟ್ಟಿಯವರು ಅದನ್ನು ಸ್ವಲ್ಪ ಜಾಸ್ತೀಯೇ ತೋರಿಸಿದಂತಿದೆ.
ಎಂಚಿನಲಾ ಆವಡ್, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ