Wednesday, June 19, 2024

ಸತ್ಯ | ನ್ಯಾಯ |ಧರ್ಮ

ʼಇವತ್ತು, ಮತ್ತೆ ಉಸಿರಾಡುತ್ತಿದ್ದೇನೆ!ʼ – ಬಿಲ್ಕಿಸ್ ಬಾನೋ ಹೃದಯಸ್ಪರ್ಶಿ ಪತ್ರ!

ಬಿಲ್ಕಿಸ್ ಬಾನೊ ಅವರು ಒಂದೂವರೆ ವರ್ಷಗಳ ನಂತರ ಮೊದಲ ಬಾರಿಗೆ ಮುಗುಳ್ನಗೆ ಸೂಸಿದ್ದಾರೆ. 2002 ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿ, ತನ್ನ ಕುಟುಂಬ ಸದಸ್ಯರನ್ನು ಕೊಂದ ಪಾಪಿಗಳನ್ನು ಬಿಡುಗಡೆ ಮಾಡಿದ್ದು, ಬಹುಶಃ ಎಷ್ಟು ದೊಡ್ಡ ಶಾಕ್‌ ಹಾಗೂ ಭಯವನ್ನು ಸೃಷ್ಟಿಸಿರಬಹುದು ಯೋಚಿಸಿ. ಈಗ ಸುಪ್ರೀಂ ಕೋರ್ಟ್ ತೀರ್ಪು ಅವರಿಗೆ ಆತ್ಮ ಸಂತೋಷವನ್ನು ತಂದಿದೆ. ಇವರು ತಮ್ಮ ವಕೀಲೆ ಶೋಭಾ ಗುಪ್ತಾ ಮೂಲಕ ಬರೆದ ಪತ್ರದಲ್ಲಿ ಏನು ಹೇಳಿದ್ದಾರೆ ಓದಿ.

“ಇಂದು ನನಗೆ ನಿಜವಾದ ಹೊಸ ವರ್ಷ ಬಂದಿದೆ. ನಾನು ಸಮಾಧಾನದ ಕಣ್ಣೀರು ಹಾಕಿದ್ದೇನೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡು ಸಂಭ್ರಮಿಸಿದ್ದೇನೆ,” ಎಂದು ಬಾನೊ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ವಿಭಾಗೀಯ ಪೀಠವು ಜನವರಿ 8, ಸೋಮವಾರ ಗರ್ಭಿಣಿ ಬಾನೊ ಮೇಲೆ ಅತ್ಯಾಚಾರ ಎಸಗಿ ಕುಟುಂಬದ 14 ಮಂದಿಯನ್ನು ಅಮಾನುಷವಾಗಿ ಕೊಂದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ಹೇಳಿದೆ.

“ನನ್ನ ಎದೆಯ ಮೇಲಿದ್ದ ಬೆಟ್ಟ ಗಾತ್ರದ ಕಲ್ಲನ್ನು ಎತ್ತಿ ಎಸೆದಂತೆ ಭಾಸವಾಗುತ್ತಿದೆ. ನಾನು ಮತ್ತೆ ಉಸಿರಾಡುತ್ತೇನೆ. ಇದು ನ್ಯಾಯಯುತ ಭಾವನೆ. ನನಗೆ, ನನ್ನ ಮಕ್ಕಳು ಮತ್ತು ಮಹಿಳೆಯರಿಗೆ ಎಲ್ಲೆಡೆ, ಎಲ್ಲರಿಗೂ ಸಮಾನ ನ್ಯಾಯದ ಭರವಸೆಯನ್ನು ನೀಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಾನು ಧನ್ಯವಾದ ಹೇಳುತ್ತೇನೆ,” ಎಂದು ಹೇಳಿದ್ದಾರೆ.

ಈ ಸಂಕಷ್ಟದ ಹಾದಿಯಲ್ಲಿ ತನ್ನ ಪಕ್ಕವೇ ಇದ್ದು ಧೈರ್ಯ ತುಂಬಿದ ತಮ್ಮ ಪತಿಗೆ, ತಮ್ಮ ಸ್ನೇಹಿತರಿಗೆ “ಪ್ರತಿ ಕಷ್ಟದ ತಿರುವಿನಲ್ಲಿ ತನ್ನ ಕೈಯನ್ನು ಹಿಡಿದಿದ್ದಕ್ಕಾಗಿ” ಧನ್ಯವಾದ ಹೇಳಿದ್ದಾರೆ. ನ್ಯಾಯಾಂಗದ ಮೇಲೆ ಎಂದಿಗೂ ಬರವಸೆ ಕಳೆದುಕೊಳ್ಳದಂತೆ ಮಾಡಿದ ತಮ್ಮ ವಕೀಲರಾದ ಗುಪ್ತಾ ಅವರಿಗೆ ಬಾನೋ ಧನ್ಯವಾದ ಅರ್ಪಿಸಿದ್ದಾರೆ.

“ಒಂದೂವರೆ ವರ್ಷಗಳ ಹಿಂದೆ, ಆಗಸ್ಟ್ 15, 2022 ರಂದು, ನನ್ನ ಕುಟುಂಬವನ್ನು ನಾಶಪಡಿಸಿದ ಮತ್ತು ನನ್ನ ಅಸ್ತಿತ್ವವನ್ನು ಅಲುಗಾಡಿಸಿದವರಿಗೆ ಆರಂಭಿಕ ಬಿಡುಗಡೆಯನ್ನು ನೀಡಿದಾಗ, ನಾನು ಕುಸಿದು ಬಿದ್ದಿದ್ದೆ. ಒಂದು ಮಿಲಿಯನ್ ಐಕಮತ್ಯದ ಬೆಂಬಲ ನನ್ನ ದಾರಿಯಲ್ಲಿ ಬರುವವ ವರೆಗೆ ನನ್ನ ಧೈರ್ಯವೆಲ್ಲಾ ಮುಗಿದು ನಾನು ದಣಿದಿದ್ದೇನೆ ಎಂದುಕೊಂಡಿದ್ದೆ”

ಸಾವಿರಾರು ಸಾಮಾನ್ಯ ಜನರು ಸುಪ್ರೀಂ ಕೋರ್ಟ್‌ಗೆ ಹೋಗಿ ಒಗ್ಗಟ್ಟಿನಿಂದ ಮೇಲ್ಮನವಿಗಳು ಮತ್ತು ಬಹಿರಂಗ ಪತ್ರಗಳನ್ನು ಸಲ್ಲಿಸಿದರು. ಬಾನೊ “ನ್ಯಾಯದ ಪರಿಕಲ್ಪನೆಯನ್ನು ಉಳಿಸುವ” ಇಚ್ಛೆಯನ್ನು ಭಾರತದ ಪ್ರತಿಯೊಬ್ಬ ಮಹಿಳೆಗೆ ನೀಡಿದ್ದಾರೆ.

ಅಪರಾಧಿಗಳೆಲ್ಲಾ ಆಡಳಿತಾರೂಢ ಬಿಜೆಪಿಯ ಸದಸ್ಯರು. ಇವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ತಾನು ಸ್ಥಾಪಿಸಿದ ಅಧಿಕಾರಿಗಳು ಮತ್ತು ‘ಸಮಾಜಿಕ ಕಾರ್ಯಕರ್ತರು’ ಒಳಗೊಂಡ ಸಮಿತಿ ಮಾಡಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.

ಸೋಮವಾರ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗುಜರಾತ್ ಸರ್ಕಾರವು “ಅಪರಾಧಿಗಳ ಪರವಾಗಿ ವರ್ತಿಸಿದೆ” ಎಂದು ಹೇಳಿದೆ ಮತ್ತು ಅಪರಾಧಿಗಳು “ತಮ್ಮ ಶಿಕ್ಷೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸಾಧ್ಯವಾದರೆ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಕಡಿಮೆಯಾಗುತ್ತದೆಯಾಗಿ ಚಿಮೇರಾ…ಅಂದರೆ ಬೆಂಕಿಯುಗುಳುವ ರಕ್ಕಸನಾಗುತ್ತದೆ” ಎಂದು ಹೇಳಿದರು.

ಈ ತೀರ್ಪು ಬಂದ ನಂತರ ಕಾನೂನಿನ ಮೇಲೆ ತಮ್ಮ ನಂಬಿಕೆ ದೃಢವಾಗಿದೆ ಎಂದು ಬಾನೊ ಹೇಳಿದ್ದಾರೆ. “ಈ ತೀರ್ಪಿನ ಸಂಪೂರ್ಣ ಅರ್ಥವನ್ನು ನನ್ನ ಸ್ವಂತ ಬದುಕಿಗಾಗಿ ಮತ್ತು ನನ್ನ ಮಕ್ಕಳ ಜೀವನಕ್ಕಾಗಿ ನಾನು ಹೀರಿಕೊಳ್ಳುವಾಗ, ಇಂದು ನನ್ನ ಹೃದಯದಿಂದ ಹೊರಹೊಮ್ಮುವ ದುವಾ ಪ್ರಾರ್ಥನೆ ಇಷ್ಟೇ – ಕಾನೂನಿನ ನಿಯಮ ಎಲ್ಲರಿಗೂ ಒಂದೇ, ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು,” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಅವರ ಸಂಪೂರ್ಣ ಹೇಳಿಕೆಯನ್ನು ಗುಜರಾತ್ ಮತ್ತು ಹಿಂದಿಯಲ್ಲಿಯೂ ನೀಡಲಾಗಿತ್ತು, ಇಲ್ಲಿ ಕನ್ನಡದಲ್ಲಿ ನೀಡಲಾಗಿದೆ.

****

ಜನವರಿ 8, 2024

ಇಂದು ನನಗೆ ನಿಜವಾದ ಹೊಸ ವರ್ಷ ಬಂದಿದೆ. ನಾನು ಸಮಾಧಾನದ ಕಣ್ಣೀರು ಹಾಕಿದ್ದೇನೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡಿದ್ದೇನೆ. ನನ್ನ ಎದೆಯ ಮೇಲಿದ್ದ ಬೆಟ್ಟ ಗಾತ್ರದ ಕಲ್ಲನ್ನು ಎತ್ತಿ ಎಸೆದಂತೆ ಭಾಸವಾಗುತ್ತಿದೆ. ನಾನು ಮತ್ತೆ ಉಸಿರಾಡುತ್ತೇನೆ. ಇದು ನಿಜವಾದ ನ್ಯಾಯ. ನನಗೆ, ನನ್ನ ಮಕ್ಕಳು ಮತ್ತು ಮಹಿಳೆಯರಿಗೆ ಎಲ್ಲೆಡೆ, ಎಲ್ಲರಿಗೂ ಸಮಾನ ನ್ಯಾಯದ ಭರವಸೆಯನ್ನು ನೀಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಾನು ಧನ್ಯವಾದ ಹೇಳುತ್ತೇನೆ.

ನಾನು ಹಿಂದೆಯೇ ಹೇಳಿದ್ದೆ, ಈಗ ಮತ್ತೊಮ್ಮೆ ಹೇಳುತ್ತೇನೆ, ನಾನು ನಡೆದ ದಾರಿಯಲ್ಲಿ ಎಂದಿಗೂ ಏಕಾಂಗಿಯಾಗಿ ನಡೆಯಲು ಸಾಧ್ಯವಿಲ್ಲ. ನನ್ನ ಪತಿ ಮತ್ತು ನನ್ನ ಮಕ್ಕಳು ನನ್ನ ಪಕ್ಕದಲ್ಲಿಯೇ ಇದ್ದರು. ಅಂತಹ ದ್ವೇಷದ ಸಮಯದಲ್ಲಿ ನನಗೆ ತುಂಬಾ ಪ್ರೀತಿಯನ್ನು ನೀಡಿದ ನನ್ನ ಸ್ನೇಹಿತರು ನನ್ನ ಜೊತೆಗೆ ಇದ್ದಾರೆ ಮತ್ತು ಪ್ರತಿ ಕಷ್ಟದ ತಿರುವಿನಲ್ಲಿ ನನ್ನ ಕೈಯನ್ನು ಹಿಡಿದಿದ್ದಾರೆ. ನಾನು ಅಸಾಧಾರಣ ವಕೀಲರನ್ನು ಹೊಂದಿದ್ದೇನೆ, ವಕೀಲ ಶೋಭಾ ಗುಪ್ತಾ 20 ವರ್ಷಗಳ ಕಾಲ ನನ್ನೊಂದಿಗೆ ಅಚಲವಾಗಿ ನಡೆದಿದ್ದಾರೆ ಮತ್ತು ನ್ಯಾಯದ ಪರಿಕಲ್ಪನೆಯಲ್ಲಿ ನಾನು ಭರವಸೆ ಕಳೆದುಕೊಳ್ಳಲು ಅವರು ಅವಕಾಶವೇ ನೀಡಲಿಲ್ಲ.

ಒಂದೂವರೆ ವರ್ಷಗಳ ಹಿಂದೆ, ಆಗಸ್ಟ್ 15, 2022 ರಂದು, ನನ್ನ ಕುಟುಂಬವನ್ನು ನಾಶಪಡಿಸಿದ ಮತ್ತು ನನ್ನ ಅಸ್ತಿತ್ವವನ್ನು ಭಯಪಡಿಸಿದವರಿಗೆ ಆರಂಭಿಕ ಬಿಡುಗಡೆಯನ್ನು ನೀಡಿದಾಗ, ನಾನು ಕುಸಿದು ಬಿದ್ದೆ. . ಒಂದು ಮಿಲಿಯನ್ ಐಕಮತ್ಯದ ಬೆಂಬಲ ನನ್ನ ದಾರಿಯಲ್ಲಿ ಜೊತೆಯಾಗುವ ವರೆಗೆ ನನ್ನ ಧೈರ್ಯವೆಲ್ಲಾ ಮುಗಿದು ನಾನು ದಣಿದಿದ್ದೇನೆ ಎಂದುಕೊಂಡಿದ್ದೆ. ಭಾರತದ ಸಾವಿರಾರು ಜನ ಸಾಮಾನ್ಯರು ಮತ್ತು ಮಹಿಳೆಯರು ಮುಂದೆ ಬಂದರು. ನನ್ನೊಂದಿಗೆ ನಿಂತರು, ನನ್ನ ಪರವಾಗಿ ಮಾತನಾಡಿದರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಅರ್ಜಿಗಳನ್ನು ಸಲ್ಲಿಸಿದರು. ಎಲ್ಲೆಡೆಯಿಂದ 6000 ಜನ, ಮುಂಬೈನಿಂದ 8500 ಜನ ಮನವಿಗಳನ್ನು ಬರೆದರು; ಕರ್ನಾಟಕದ 29 ಜಿಲ್ಲೆಗಳಿಂದ 40,000 ಜನರು, 10,000 ಜನರು ಮುಕ್ತ ಪತ್ರ ಬರೆದಿದ್ದಾರೆ. ಈ ಪ್ರತಿಯೊಬ್ಬರಿಗೂ, ನಿಮ್ಮ ಅಮೂಲ್ಯವಾದ ಒಗ್ಗಟ್ಟು ಮತ್ತು ಶಕ್ತಿಯನ್ನು ನನಗೆ ನೀಡಿದಕ್ಕಾಗಿ ನನ್ನ ಕೃತಜ್ಞತೆಗಳು. ನನಗೆ ಮಾತ್ರವಲ್ಲ, ಭಾರತದ ಪ್ರತಿಯೊಬ್ಬ ಮಹಿಳೆಗೂ ನ್ಯಾಯದ ಪರಿಕಲ್ಪನೆಯನ್ನು ಕಾಪಾಡಲು ನೀವು ಹೋರಾಟ ಮಾಡುವ ಇಚ್ಛೆಯನ್ನು ನನಗೆ ನೀಡಿದ್ದೀರಿ. ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನನ್ನ ಸ್ವಂತ ಜೀವನಕ್ಕಾಗಿ ಮತ್ತು ನನ್ನ ಮಕ್ಕಳ ಬದುಕಿಗಾಗಿ ಈ ತೀರ್ಪಿನ ಸಂಪೂರ್ಣ ವ್ಯಾಖ್ಯಾನವನ್ನು ನಾನು ಹೀರಿಕೊಳ್ಳುವಾಗ, ಇಂದು ನನ್ನ ಹೃದಯದಿಂದ ಹೊರಹೊಮ್ಮುವ ದುವಾ (ಪ್ರಾರ್ಥನೆ) ಸರಳ, ಇಷ್ಟೇ – ಕಾನೂನಿನ ನಿಯಮ ಎಲ್ಲರಿಗೂ ಒಂದೇ, ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು.

ಬಿಲ್ಕಿಸ್ ಬಾನೋ, ಜನವರಿ 8, 2024

(ಪತ್ರವನ್ನು ಶೋಭಾ ಗುಪ್ತಾ ಮೂಲಕ ಹಸ್ತಾಂತರಿಸಲಾಗಿದೆ)

Related Articles

ಇತ್ತೀಚಿನ ಸುದ್ದಿಗಳು