(ಈ ವರೆಗೆ)
ಗಂಗೆ ಊರಿನವರಿಗೆ ಆತ್ಮೀಯಳಾಗುತ್ತಿದ್ದಂತೆ ಮೋಹನನಿಗೂ, ಅವನ ಅಮ್ಮನಿಗೂ ಗಂಗೆಯ ಮೇಲೆ ಅಸಹನೆ ಆರಂಭವಾಗುತ್ತದೆ. ಒಂದು ದಿನ ಅಮ್ಮ ಇವರಿಬ್ಬರನ್ನೂ ಮನೆಯಿಂದ ಆಚೆಗೆ ತಳ್ಳುತ್ತಾಳೆ. ಮೋಹನನ ಮನಸು ಮತ್ತೆ ದಂಧೆಯತ್ತ ವಾಲುತ್ತದೆ. ಬಹಳಷ್ಟು ಲೆಕ್ಕಾಚಾರದೊಂದಿಗೆ ತನಗೆ ಪರಿಚಯವಾದ ಸುಂದರಿ ಸುಕನ್ಯಾಳನ್ನು ಕರೆದುಕೊಂಡು ಗಂಗೆಯೊಂದಿಗೆ ಬೆಂಗಳೂರು ತಲಪುತ್ತಾನೆ. ಮೋಹನ ಅಂದುಕೊಂಡಂತೆ ನಡೆಯಿತೇ ? ಓದಿ.. ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಒಂಭತ್ತನೆಯ ಕಂತು.
ವಿರಾಜಪುರದಂತಹ ದೊಡ್ಡಪೇಟೆಯೊಳಗೆ ಹುಟ್ಟಿ ಕಾಲೇಜು, ಗೆಳತಿಯರೆಂದು ಟಾಕುಟೀಕಾಗಿ ಬೆಳೆದಿದ್ದ ಈ ಸುಕನ್ಯಾ, ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು, ಶ್ರೀಮಂತ ಮನೆತನವಾಗಿದ್ದ ಸಾತುಗಳ್ಳಿಯ ಗುಡಿಗೌಡನ ಮನೆಗೆ ಸೊಸೆಯಾಗಿ ಹೋಗಿದ್ದಳು. ಅಪ್ಪನ ಮನೆಯಲ್ಲಿ ಬಿಡುಬೀಸಾಗಿ ಬೆಳೆದಿದ್ದ ಇವಳನ್ನು ಆ ಹಳ್ಳಿಗಾಡಿನ ವಾತಾವರಣ ಮತ್ತು ಆ ಮನೆಯ ಕಟ್ಟು ಪಾಡುಗಳು ಉಸಿರು ಕಟ್ಟಿಸ ತೊಡಗಿದವು. ಹಾಗೂ ಹೀಗೂ ಒಂದೆರಡು ವರ್ಷಗಳ ಕಾಲ ತನ್ನ ಬಯಕೆಗಳನ್ನೆಲ್ಲಾ ಹತ್ತಿಕ್ಕಿ ಗುಡಿಗೌಡನ ಮನೆಯ ಘನತೆ ಕಾಯ್ದ ಸುಕನ್ಯಾ, ಒಂದು ದಿನ ರೋಸಿ ಎಲ್ಲ ಸಂಬಂಧಗಳನ್ನು ಕಿತ್ತೊಗೆದು ವರ್ಷದ ತನ್ನೆರಡು ಅವಳಿ ಮಕ್ಕಳನ್ನು ತೊರೆದು, ಯಾರಿಗೂ ಕಾಣದಂತೆ ಈ ಸೋಪಾನಪೇಟೆಗೆ ಬಂದು ಸ್ವಚ್ಛಂದ ಹಕ್ಕಿಯಂತೆ ವಾಸಿಸತೊಡಗಿದ್ದಳು.
ಇದುವರೆಗೂ ತನ್ನ ದೇಹಸಿರಿಯನ್ನೆಲ್ಲ ಒತ್ತೆ ಇಟ್ಟು ನೀರಸವಾಗಿ ಬದುಕಿದ್ದ ಸುಕನ್ಯಾಳನ್ನು, ಸೋಪಾನಪೇಟೆಗೆ ಬಂದ ಮೊದಲ ದಿನವೇ ಅಲ್ಲಿನ ದೊಡ್ಡ ಫ್ಯಾನ್ಸಿ ಅಂಗಡಿಯೊಂದು ತನ್ನತ್ತ ಸೆಳೆದುಕೊಂಡು ಬಿಟ್ಟಿತ್ತು. ಸೀದಾ ಅದರೊಳಗೆ ನುಗ್ಗಿದವಳೆ, ಅಲ್ಲಿ ತನಗೊಂದು ಕೆಲಸ ಗಿಟ್ಟಿಸಿಕೊಂಡು ಹೊರ ಬಂದಿದ್ದಳು. ತನ್ನ ಪ್ರತೀ ತಿಂಗಳ ಸಂಬಳದಲ್ಲಿ ಮತ್ತಷ್ಟು ಆಕರ್ಷಕವಾಗಿ ಬದಲಾಗಿ ಮತ್ತೆ ಕಾಲೇಜಿನ ದಿನಗಳಿಗೆ ಮರಳಿದವಳಂತೆ ಟಾಕು ಟೀಕಾಗಿ ಓಡಾಡಲಾರಂಭಿಸಿದ್ದಳು.
ಇಂತಹ ದಿನಗಳಲ್ಲಿಯೇ ಬಟ್ಟೆ ಅಂಗಡಿಯೊಂದರಲ್ಲಿ ಮೋಹನನ ಕಣ್ಣಿಗೆ ಬಿದ್ದಿದ್ದ ಸುಕನ್ಯಾ ಅವನ ಮೋಹಕ ನೋಟಕ್ಕೆ ಮನಸೋತಳು. ಗಂಡನ ಒರಟುತನದೊಳಗೆ ಮರೆಯಾಗಿದ್ದ ಅವಳೊಳಗಿನ ನವಿರು ಭಾವ ಆ ಕ್ಷಣದಲ್ಲಿಯೇ ಎಚ್ಚೆತ್ತು, ಅವನನ್ನು ಹಿಂಬಾಲಿಸಿ ಬರುವಂತೆ ಮಾಡಿತ್ತು. ಆ ಹಳ್ಳಿಗಾಡಿನ ವಾತಾವರಣದಲ್ಲಿ ದೊರಗಿನಂತಾಗಿದ್ದ ಅವಳ ಮೈ, ಮೋಹನನ ನಯನಾಜೂಕಿನ ಸ್ಪರ್ಶಕ್ಕೆ ಬೆಣ್ಣೆಯಂತೆ ಕರಗಿ ಘಮಗುಟ್ಟಿತು. ಹೀಗೆ ನಾಲ್ಕೈದು ಭೇಟಿಯಲ್ಲೇ ಮರ ಬಳ್ಳಿಯಂತೆ ತಬ್ಬಿ ಬೆಳೆದ ಇವರ ಒಲವಿಗೆ ತಮ್ಮಿಬ್ಬರ ಪೂರ್ವಾಪರಗಳಾವುದು ತೊಡುಕೆನಿಸಲೇ ಇಲ್ಲ.
ಒಂದು ದಿನ ಸೋಪಾನ ಪೇಟೆಯ ಕೋಣಮಾರಮ್ಮನ ಗುಡಿಯಲ್ಲಿ ಅವಳ ಕುತ್ತಿಗೆಗೆ ಅರಿಶಿಣದ ಕೊನೆ ಕಟ್ಟಿದ ಮೋಹನ, ತನ್ನ ಮೇಲಿನ ಅವಳ ನಂಬಿಕೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡ. ಅಂದಿನ ಮೊದಲ ರಾತ್ರಿಯ ಸಿಹಿ ಅಪ್ಪುಗೆಯೊಳಗೆ, ತಾನು ಮಾಡಬೇಕೆಂದಿರುವ ದಂಧೆ ಮತ್ತು ತನ್ನ ಹೆಗಲೆಣೆಯಾಗಿ ನಿಲ್ಲಬೇಕಾದ ಅವಳ ಪಾತ್ರವನ್ನೆಲ್ಲ ರಸವತ್ತಾಗಿ ವರ್ಣಿಸಿ ಅವಳ ಸಮ್ಮತಿ ಪಡೆದ. ಇಡೀ ರಾತ್ರಿ ಮೋಹನನ ಕಲ್ಪಿತ ಸಾಮ್ರಾಜ್ಯದ ರಾಣಿಯಾಗಿ ನಲಿದ ಸುಕನ್ಯಾ, ಅವನ ನಿರ್ದೇಶನದಂತೆ ಮತ್ತಷ್ಟು ರಂಗುರಂಗಾಗಿ ತನ್ನ ಸಮಾನು ಸರಂಜಾಮುಗಳನ್ನೆಲ್ಲ ಗಂಟು ಕಟ್ಟಿಕೊಂಡು ಬೆಂಗಳೂರಿನತ್ತ ಪಯಣ ಬೆಳೆಸಿದ್ದಳು.
ಮೋಹನನೊಂದಿಗೆ ಬೆಂಗಳೂರು ಸೇರಿ ಅಲ್ಲಿನ ತಳುಕು ಬಳುಕಿನ ವಾತಾವರಣಕ್ಕೆ ಸರಾಗವಾಗಿ ಒಗ್ಗಿಕೊಂಡ ಸುಕನ್ಯಾ, ತಿಂಗಳು ಎನ್ನುವುದರೊಳಗೆ ಗಿರಾಕಿಗಳನ್ನು ಹಿಡಿದು ಹಾಕುವ ಕಲೆಯನ್ನು ಕರಗತ ಮಾಡಿಕೊಂಡಳು. ಶ್ರೀಮಂತ ಗಿರಾಕಿಗಳ ಐಶಾರಾಮಿ ಮೋಜಿನಾಟದಲ್ಲಿ ಮಿಂದೇಳುತ್ತಿದ್ದವಳನ್ನು ಆ ದಂಧೆ ಬಹು ಬೇಗ ತನ್ನ ವಶಮಾಡಿಕೊಂಡಿತು. ಮೋಹನ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಆ ದಂಧೆಗೆ ಹೊಂದಿಕೊಂಡ ಸುಕನ್ಯಾ, ಬಹುಬೇಗ ಮೋಹನನ ಮೇಲೆ ತನ್ನ ಹಿಡಿತ ಸಾಧಿಸಿದಳು. ಮನೆಗೆ ತೊಡಕಾಗಿ ಕಂಡ ಗಂಗೆಯನ್ನು ತಿಂಗಳೊಪ್ಪತ್ತಿನಲ್ಲೆ ಬೇರೊಂದು ಸಣ್ಣಮನೆಗೆ ಸಾಗಹಾಕಿಸಿದಳು.
ಅಂದು ರಾತ್ರಿ ಮೋಹನ ಗಂಗೆಯನ್ನು ತಬ್ಬಿ “ನಿನ್ನ ರಾಣಿ ಹಂಗ್ ಇಟ್ಕೋಬೇಕು ಅನ್ನೋ ಆಸೆಗೆ ಬಿದ್ದು ಇಷ್ಟು ದೊಡ್ಡ ಮನೆ ಮಾಡ್ಬಿಟ್ಟೆ ಗಂಗೂ. ಈಗ ನೋಡಿದ್ರೆ ನನಗೆ ಈ ಮನೆ ಬಾಡಿಗೆನೇ ತೂಗಿಸೋಕಾಗ್ತಿಲ್ಲ. ನಾವಿಬ್ರು ಒಂದು ಪುಟ್ಟ ಮನೆ ಮಾಡಿಕೊಂಡು ಹೋಗಿ ಬಿಡೋಣ ಅನ್ನಿಸ್ತಿದೆ. ಏನ್ ಮಾಡೋದು ಗೊತ್ತಾಗ್ತಿಲ್ಲ ನೀನೆ ಹೇಳು ಗಂಗು ” ಎಂದು ದುಃಖ ತಪ್ತನಂತೆ ಗಂಗೆಯ ಬಳಿ ನಾಟಕ ಹೂಡಿದ್ದ. ಇವರ ಒಳ ಆಟಗಳ ಅರಿವಿರದ ಗಂಗೆ ಗಂಡನ ಮಾತಿಗೆ ಮರುಗಿ “ಅಯ್ಯೋ…ಅದುಕ್ಯಾಕಿಷ್ಟು ಬೇಜಾರ್ ಮಾಡ್ಕೋತಿರಿ, ನಾನು ಮೊದ್ಲುನೇ ದಪ ಈ ಮನೆ ನೋಡ್ದಾಗ್ಲೇ ಕೇಳ್ಳಿಲ್ವ ಇರೋರಿಬ್ರುಗ್ಯಾಕೆ ಇಷ್ಟು ದೊಡ್ಡ ಮನೆ ಅಂತ, ಇರ್ಲಿ ಬುಡು ಬಾಡಿಗೆ ಕಟ್ಟೋನು ನಾನು ನಿನ್ಗ್ಯಾಕ್ ಸಂಕ್ಟ ಅಂತ ಜೂರತ್ ಮಾಡಿ ನನ್ ಬಾಯಿ ಮುಚ್ಚುಸಿದ್ರಿ, ಹೋಗ್ಲಿ ಬುಡಿ ಈಗ್ಲಾದ್ರೂ ನಿಮಗೆ ಬುದ್ಧಿ ಬಂತಲ್ಲ” ಎಂದು ಗಂಡನ ಜ್ಞಾನೋದಯಕ್ಕೆ ಹಿಗ್ಗಿ, ತಿಂಗಳು ಮುಗಿಯುವುದರೊಳಗೆ ನಾಲ್ಕನೆ ಬೀದಿಯಲ್ಲಿದ್ದ ಸಣ್ಣ ಶೀಟಿನ ಮನೆಯೊಂದಕ್ಕೆ ಸ್ಥಳಾಂತರಗೊಂಡಿದ್ದಳು.
ಗಂಗೆ ಅತ್ತ ಹೋದ ಕೂಡಲೇ ಇತ್ತ ಮೋಹನನ ದಂಧೆ ಬಿರುಸು ಪಡೆದುಕೊಂಡಿತು. ಇದುವರೆಗೂ ಖಾಲಿ ಹೊಡೆಯುತ್ತಿದ್ದ ಆ ಮನೆಯ ನಾಲ್ಕೈದು ಕೋಣೆಗಳು ಈಗ ಸದಾ ಚಟುವಟಿಕೆಯಿಂದ ಇರತೊಡಗಿದವು. ಅರ್ಧ ದಿನದಿಂದ ಹಿಡಿದು ಪೂರ್ಣಾವಧಿಯವರೆಗೂ ಈ ವೃತ್ತಿಗೆ ತಮ್ಮನ್ನು ತೊಡಗಿಸಿ ಕೊಂಡ ಅನೇಕ ಹೆಣ್ಣುಗಳು ಎಡೆಬಿಡದೆ ಇತ್ತ ಬರಲಾರಂಭಿಸಿದರು. ಪೋಲಿಸಿನವರಾದಿಯಾಗಿ ದೊಡ್ಡ ದೊಡ್ಡ ಕುಳಗಳನ್ನೆಲ್ಲ ತನ್ನ ಬೆರಳ ತುದಿಯಲ್ಲಿ ಇಟ್ಟುಕೊಂಡಿದ್ದ ಸುಕನ್ಯಾಳನ್ನು ಈಗ ಹಿಡಿಯುವವರೆ ಇರಲಿಲ್ಲ.
ಈ ಎಲ್ಲದರ ನಡುವೆಯೂ ಗಂಗೆಯತ್ತ ಒಂದು ನಿಗ ಇಟ್ಟೇ ಇದ್ದ ಮೋಹನ, ತನ್ನ ರಾತ್ರಿಗಳನ್ನೆಲ್ಲ ಅವಳ ಸಂತೋಷಕ್ಕಾಗಿಯೇ ಮುಡುಪಿಟ್ಟಿದ್ದ. ” ಹಳ್ಳಿಗಾಡಿನ ಕಮಂಗಿ” ಎಂದು ಅವಳನ್ನು ಮುದ್ದು ಮುದ್ದಾಗಿ ಛೇಡಿಸುತ್ತಲೆ ಆ ನಗರದ ವಾತಾವರಣಕ್ಕೆ ಅವಳನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದ. ಪ್ರತಿ ದಿನ ಸಂಜೆ ಐದು ಆರರ ಒಳಗೆ ಮನೆ ಸೇರಿ ಒಬ್ಬ ಒಳ್ಳೆಯ ಗೃಹಸ್ಥನಂತೆ ಬದಲಾಗಿ ಬಿಡುತ್ತಿದ್ದ ಮೋಹನ, ಹೆಂಡತಿಯನ್ನು ಸಿನಿಮಾ, ಪಾರ್ಕ್, ಶಾಪಿಂಗ್ ಎಂದು ಸುತ್ತಾಡಿಸಿ ಸಂತೃಪ್ತನಾಗುತ್ತಿದ್ದ.
ಗಂಗೆಯ ಮೇಲಿನ ಇವನ ನಿಷ್ಠೆ ಮತ್ತು ಪ್ರೀತಿಯನ್ನು ಕಂಡು ಹೊಟ್ಟೆಗೆ ಬೆಂಕಿ ಬಿದ್ದಂತಾದ ಸುಕನ್ಯಾ ” ಮೈ ಮುರಿದು ದುಡ್ದು ಹೊಟ್ಟೆ ತುಂಬಿಸ್ತಿರೋದು ನಾವು. ನೀವು ನೋಡಿದ್ರೆ ಮೂರ್ಕಾಸಿನ ಪ್ರಯೋಜನ ಇಲ್ಲದ ಆ ಗಂಗೆನ ರಾಣಿ ಮೆರೆಸೋಹಾಗೆ ಮೆರುಸ್ತಿದ್ದೀರಲ್ಲ. ಒಂದ ಅವಳನ್ನ ಬಿಟ್ಟು ನನ್ಜೊತೆಗಿರಿ. ಇಲ್ಲ ಅವಳನ್ನು ನನ್ನ ಜೊತೆ ದಂಧೆಗಿಳಿಸಿ” ಎಂದು ಹಠಹಿಡಿದು ಕೂತಳು.
ಚಿನ್ನದ ಮೊಟ್ಟೆ ಇಡುತ್ತಿದ್ದ ಸುಕನ್ಯಾಳ ಅಸಹನೆಯನ್ನು ಹೆಚ್ಚು ದಿನ ಮುಂದುವರೆಸಲು ಅವಕಾಶ ಕೊಡದ ಮೋಹನ, ಅವಳ ಇಚ್ಛೆಯಂತೆ ಗಂಗೆಯ ಮೇಲಿನ ತನ್ನ ಮೋಹವನ್ನು ಕಡಿದುಕೊಳ್ಳತೊಡಗಿದ. ವಾರಕ್ಕೊ ಹದಿನೈದು ದಿನಕ್ಕೊ ಅತ್ತ ಹೋಗಿ, ಅವಳ ಕೈಗೊಂದಿಷ್ಟು ಹಣ ತುರುಕಿ ಅವಳ ಯಾವ ಮಾತಿಗೂ ಕಿವಿ ಕೊಡದೆ, ನಿಂತ ಕಾಲಿನ ಮೇಲೆ ಹೊರಟು ಬಂದು ಬಿಡುತ್ತಿದ್ದ. ಏಕಾಏಕಿ ಹೀಗೆ ಬದಲಾದ ಗಂಡನ ನಡೆ ಕಂಡು ಆತಂಕಕ್ಕೊಳಗಾದ ಗಂಗೆ, ಇದರ ಕಾರಣ ತಿಳಿದು ಕೊಳ್ಳುವ ಸಾಹಸಮಾಡಿ ಸೋತಳು. ಅಕ್ಕ ಪಕ್ಕದವರೊಂದಿಗೆ ಸದಾ ಚಟಪಟಿಸುತ್ತಾ ಖುಷಿಯಾಗಿರುತ್ತಿದ್ದವಳು ಗಂಡನ ಗೈರು ಹೆಚ್ಚಾದಂತೆಲ್ಲ ಮಂಕಾಗುತ್ತಾ ಮೌನಕ್ಕೆ ಶರಣಾಗ ತೊಡಗಿದಳು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಕಂತು ಓದಿದ್ದೀರಾ? ದಂಧೆಯತ್ತ ಮೋಹನನ ಚಿತ್ತ