Saturday, June 15, 2024

ಸತ್ಯ | ನ್ಯಾಯ |ಧರ್ಮ

“ಬಿಸಿಯೂಟದ ಕಾರ್ಯಕರ್ತರು ಕೈಬಳೆ ತೊಡುವಂತಿಲ್ಲ!” ; ಸತ್ಯ ಎಷ್ಟು ಸುಳ್ಳೆಷ್ಟು?

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿದೆ ಎನ್ನಲಾದ ಮಾರ್ಗಸೂಚಿ ಬಗ್ಗೆ ಹಲವಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಹೆಚ್ಚಿನ ಮಂದಿ ಅದಕ್ಕೆ ವಿರೋಧ ವ್ಯಕ್ತಪಡಿಸಿ ಧಾರ್ಮಿಕ ಲೇಪನ ಹಚ್ಚುವ ಪ್ರಯತ್ನದಲ್ಲಿದ್ದರು. ಆದರೆ ಅಧಿಕೃತವಾಗಿ ಸರ್ಕಾರವೇ ಇದೊಂದು ಸುಳ್ಳು ಸುದ್ದಿ ಎನ್ನುವ ಮೂಲಕ ವಿರೋಧಿಗಳ ಬೆಂಕಿಗೆ ನೀರು ಸುರಿದು ತಣ್ಣಗೆ ಮಾಡಿದೆ.

ರಾಜ್ಯದ ಅಂಗನವಾಡಿ ಕೇಂದ್ರ ಹಾಗೂ ಬಿಸಿಯೂಟದ ಅಡುಗೆ ಕೆಲಸ ಮಾಡುವ ಹೆಂಗಸರು ಕೈಗೆ ಬಳೆ ತೊಡುವಂತಿಲ್ಲ ಎನ್ನುವ ಮಾರ್ಗಸೂಚಿ ಬಗ್ಗೆ ಎರಡು ದಿನಗಳಿಂದ ಬಿಸಿ ಬಿಸಿ ಸುದ್ದಿ ಹರಿದಾಡಿತ್ತು. ರಾಜ್ಯ ಶಿಕ್ಷಣ ಇಲಾಖೆಯೇ ಈ ಒಂದು ಮಾರ್ಗಸೂಚಿ ಹೊರಡಿಸಿದೆ. ಇದು ಸ್ಪಷ್ಟವಾಗಿ ಹಿಂದೂ ಧರ್ಮದ ವಿರೋಧಿ ಸರ್ಕಾರ ಎನ್ನುವ ಮೂಲಕ ಕಾಂಗ್ರೆಸ್ ವಿರೋಧಿಗಳು ಜಾಲತಾಣಗಳಲ್ಲಿ ದೊಡ್ಡ ವಿರೋಧವನ್ನೇ ವ್ಯಕ್ತಪಡಿಸಿದ್ದರು.

ಇಲ್ಲಿ ಕಾಂಗ್ರೆಸ್ ವಿರೋಧಿಗಳು ಮಾತ್ರವಲ್ಲದೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಗುರುತಿಸಿಕೊಂಡಿರುವ ಮಾಧ್ಯಮದ ಅನೇಕರು ಈ ಸುದ್ದಿಯ ಸತ್ಯಾಸತ್ಯತೆ ಅರಿಯದೇ ಇದೇ ಸತ್ಯ ಎಂಬಂತಹ ವರದಿ ಬಿತ್ತರಿಸಿದ್ದವು. ಮಾಧ್ಯಮಗಳೇ ವರದಿ ಮಾಡಿದ ಮೇಲೆ ಇನ್ನು ಜನ ಹಿಂದು ಮುಂದು ಯೋಚಿಸದೇ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು. ಆದರೆ ಅಸಲಿ ವಿಚಾರದ ಬಗ್ಗೆ ಸರ್ಕಾರವೇ ಈಗ ಮಾಹಿತಿಯನ್ನು ಸ್ಪಷ್ಟಪಡಿಸಿದೆ.

ಅಷ್ಟೆ ಅಲ್ಲದೆ ಮುಖ್ಯಮಂತ್ರಿಗಳ ಕಚೇರಿ ಸಹ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದು ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ ಎಂಬ ಮಾರ್ಗಸೂಚಿ ಸುಳ್ಳು ಎಂದು ಕರ್ನಾಟಕ ರಾಜ್ಯ ಸರ್ಕಾರ ಹೇಳಿದೆ. ಆದರೆ ಈ ಮಾರ್ಗಸೂಚಿ ಹೊರಡಿಸಿದ್ದು ಕೇಂದ್ರ ಸರ್ಕಾರ ಎಂಬುದನ್ನೂ ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅಸಲಿ ವಿಚಾರ ಹೊರಹಾಕಿದೆ.

ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಅಡಿಯಲ್ಲಿ 2020 ರ ಅಕ್ಟೋಬರ್ ತಿಂಗಳಿನಲ್ಲೇ ಇಂತದ್ದೊಂದು ಮಾರ್ಗಸೂಚಿ ಹೊರಡಿಸಿತ್ತು. ಬಿಸಿಯೂಟದ ಕಾರ್ಯಕರ್ತೆಯರು ಅಡುಗೆ ಮಾಡುವಾಗ ಮತ್ತು ಬಡಿಸುವಾಗ ಏನೇನು ಇರಬಾರದು ಎಂದು ಮಾಹಿತಿ ನೀಡುವ ಮಾರ್ಗಸೂಚಿ ನೀಡಿತ್ತು. ಸುಮಾರು ಏಳೆಂಟು ಅಂಶಗಳನ್ನು ಒಳಗೊಂಡಂತಹ ಮಾರ್ಗಸೂಚಿಯಲ್ಲಿ ನೈಲ್ ಪಾಲಿಷ್, ಕೃತಕ ಉಗುರನ್ನು ಅಡುಗೆ ಮಾಡುವಾಗ ಮತ್ತು ಊಟ ಬಡಿಸುವಾಗ ಬಳಸಬಾರದು ಎಂದಾಗಿದೆ‌. ಜೊತೆಗೆ ಕೈಗಡಿಯಾರ, ಉಂಗುರ, ಬಂಗಾರ, ಕೈಬಳೆ ಇವುಗಳನ್ನೂ ಸಹ ಕೆಲಸ ಮಾಡುವಾಗ ತಗೆದಿಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

2020 ರಲ್ಲೇ ಕೇಂದ್ರ ಸರ್ಕಾರ ಹೊರಡಿಸಿದ ಈ ಸುತ್ತೋಲೆ ಈಗ ಚರ್ಚೆಗೆ ಬಂದಿದೆ. ಆದರೆ ಚರ್ಚೆ ರಾಜ್ಯ ಸರ್ಕಾರವನ್ನು ಗುರಿ ಮಾಡಿ ನಡೆದದ್ದು ಮಾತ್ರ ವಿಪರ್ಯಾಸವೇ ಸರಿ. ಸತ್ಯಾಸತ್ಯತೆಯನ್ನು ಅಳೆದು ತೂಗಿ ವರದಿ ಮಾಡಬೇಕಾದ ಮಾಧ್ಯಮಗಳು ಕೂಡಾ ಇತ್ತೀಚೆಗೆ Biased ಆಗಿರುವುದನ್ನು ಈ ಸುದ್ದಿಯನ್ನು ನೋಡಿ ಉದಾಹರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು