Thursday, June 13, 2024

ಸತ್ಯ | ನ್ಯಾಯ |ಧರ್ಮ

ಕರಣ್‌ ಥಾಪರ್‌ ಹೆಸರಿನಲ್ಲಿ ಬಿಟ್‌ಕಾಯಿನ್‌ ಸ್ಕ್ಯಾಮ್‌! ಮೋಸ ಹೋಗದಿರಿ

ಬೆಂಗಳೂರು: “ಹೇಯ್….ನೀವು ನಿಮ್ಮ ಹಣವನ್ನು ಡಬಲ್‌ ಮಾಡ್ಬೇಕಾ? ಇಪ್ಪತ್ತಾರು ಸಾವಿರ ಹಾಕಿ ನಿಮ್ಮ ಹಣ ಡಬಲ್‌ ಮಾಡಬಹುದು. ಬಿಟ್‌ ಕಾಯಿನ್‌ ಮೇಲೆ ಇನ್ವೆಸ್ಟ್‌ ಮಾಡಿ…” ಎಂಬ ನಿಮ್ಮ ಫೇಸ್ಬುಕ್‌, ಇನ್ಸ್ಟಾ ಎಲ್ಲಾ ಕಡೆ ಪಾಪಪ್‌ ಅಗುವ ಮೆಸೆಜ್‌ಗಳನ್ನು ನೀವು ನೋಡಿರಬಹುದು.

ನೀವು ಇದನ್ನು ನಂಬಿ ದುಡ್ಡು ಹಾಕಿದರೆ, ಪಂಗನಾಮ ಗ್ಯಾರಂಟಿ.

ಈ ಬಾರಿ, ಈ ಸ್ಕ್ಯಾಮರ್‌ಗಳು ತಮ್ಮ ಸ್ಕ್ಯಾಮನ್ನು ಪ್ರಚಾರ ಮಾಡಲು ಬಳಸಿಕೊಂಡದ್ದು ಬೇರೆ ಯಾರನ್ನೂ ಅಲ್ಲ, ತನ್ನ ಪ್ರಶ್ನೆಗಳ ಮೂಲಕವೇ ಬೆವರಿಳಿಸಿ, ನೀರು ಕುಡಿಸುತ್ತಿದ್ದ ಖ್ಯಾತ ಸಂದರ್ಶಕ ಕರಣ್‌ ಥಾಪರ್!‌ ಕರಣ್‌ ಥಾಪರ್‌ರವರು ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರನ್ನು, ಸಾಹಿತಿಗಳನ್ನು, ಸಿನೇಮಾ ತಾರೆಗಳನ್ನು, ನೋಬೆಲ್‌ ಪುರಸ್ಕೃತರನ್ನು ಸಂದರ್ಶನ ಮಾಡಿ ಹೆಸರಾದವರು. ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಅವರ ಜೊತೆಗಿನ ʼಪುಲ್ವಾಮ ದಾಳಿʼಯ ಬಗೆಗಿನ ಸಂದರ್ಶನ ದೇಶದಾದ್ಯಂತ ಚರ್ಚೆಯಾಗಿತ್ತು. ಇನ್ಫೋಟೈನ್‌ಮೆಂಟ್ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಅಧ್ಯಕ್ಷರಾಗಿರುವ ಥಾಪರ್, ಸದ್ಯ ದಿ ವೈರ್‌ನಲ್ಲಿ ಸಂದರ್ಶನಗಳನ್ನು ನಡೆಸಿಕೊಡುತ್ತಾರೆ.

ಕರಣ್‌ ಥಾಪರ್‌ರನ್ನು ಪತ್ರಕರ್ತೆ ಪೂಜಿತಾ ದೇವರಾಜು ಸನ್‌ ಟಿವಿಯಲ್ಲಿ ಸಂದರ್ಶನ ಮಾಡಿರುವುದಾಗಿ, ಈ ಸಂದರ್ಶನದ ಪಠ್ಯವನ್ನು ಹಾಗೂ ತಿರುಚಲ್ಪಟ್ಟ ಫೋಟೋಗಳನ್ನು ಬಳಸಿ BBC.INDIA ಹಾಗೂ SUNTV ಹೆಸರಿನಲ್ಲಿ ಫೇಕ್‌ ವೆಬ್‌ಸೈಟ್‌ ಸೃಷ್ಟಿಸಿ ಪ್ರಕಟಿಸಲಾಗಿದೆ. ಈ ಸುಳ್ಳು ವರದಿಯಲ್ಲಿ ಸ್ಕ್ಯಾಮರ್‌ಗಳು ತಮ್ಮ Immediate Bitwave  ವೆಬ್‌ಸೈಟ್‌ನ (octshareb.com) ಲಿಂಕ್‌ ಅನ್ನು ಮಧ್ಯೆ ಮಧ್ಯೆ ಉಲ್ಲೇಖಿಸಿದ್ದಾರೆ.

octshareb.com ಎಂಬ ಲಿಂಕ್‌ನಲ್ಲಿ ಇರುವ ಬಿಬಿಸಿ ನ್ಯೂಸನ್ನು ಹೋಲುವ ವೆಬ್‌ಸೈಟ್‌ ಒಂದನ್ನು ಇವರು ಸೃಷ್ಟಿಸಿದ್ದಾರೆ. ಈ ಲಿಂಕನ್ನು ತೆರೆದಾಗ ನಾವು ಸಹಜವಾಗಿಯೇ ಇದು ಬಿಬಿಸಿ ಇಂಡಿಯಾದ ವೆಬ್‌ ಪೋರ್ಟಲ್‌ ಎಂಬಂತೆ ತೋರುತ್ತದೆ. ಆದರೆ, ಬಿಬಿಸಿಯ ಲೋಗೋ ಮೇಲೆ ನಾವು ಕ್ಲಿಕ್‌ ಮಾಡಿದರೆ ಅದು ಹೋಮ್‌ ಪೇಜಿಗೆ ತೆರೆದುಕೊಳ್ಳುವುದಿಲ್ಲ.

ಮಾತ್ರವಲ್ಲ, ಈ ಬಿಬಿಸಿ ಪೇಕ್‌ ವೆಬ್‌ಸೈಟ್‌ ನಲ್ಲಿ ಬಿಬಿಸಿ ಎಪ್ರಿಲ್‌  10ರಂದು ಪ್ರಕಟಿಸಿದ China aircraft carrier ‘seals off’ Taiwan in drill, Nashville council to hold vote on expelled lawmaker, What does the huge leak of Ukraine war documents tell us? ಎಂಬ ಮೂರು ವರದಿಗಳನ್ನು ಕ್ರಮವಾಗಿ ಒಂದು ಗಂಟೆ, 29 ನಿಮಿಷ, ಐದು ಗಂಟೆಗಳ ಹಿಂದಿನ ಪ್ರಕಟಣೆ ಎಂಬಂತೆ ಎಡಿಟ್‌ ಮಾಡಲಾಗಿದೆ. ಆದರೆ ಈ ವರದಿಗಳ ಮೇಲೆ ಕ್ಲಿಕ್‌ ಮಾಡಿದರೆ, ಇದು ತೆರೆದುಕಳ್ಳುವುದಿಲ್ಲ. ಬದಲಾಗಿ, ಈ ವರದಿಗಳ ಹೆಡ್‌ಲೈನ್‌ಗಳನ್ನು ಕಾಪಿ ಮಾಡಿ ಸರ್ಚ್‌ ಇಂಜಿನ್‌ನಲ್ಲಿ ಹುಡುಕಿದರೆ, ಬಿಬಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಎಪ್ರಿಲ್‌ 10ರಂದು ಪ್ರಕಟಿಸಿರುವ ಈ ವರದಿಗಳನ್ನು ಓದಬಹುದು.

ಪೂಜಿತಾರವರು ಕರಣ್‌ರನ್ನು ಸಂದರ್ಶನ ಮಾಡಿದ್ದಾರೆ ಎಂದು ಬಿಂಬಿಸಲಾಗಿರುವ ಈ ವರದಿಯಲ್ಲಿ ಪೂಜಿತಾ, “ನೀವು ತುಂಬಾ ಲೇಜೀ, ಒಂದು ವರ್ಷದ ಹಿಂದೆ ನಿಮ್ಮಲ್ಲಿ ಹಳೇಯ ಕಾರು, ಸಣ್ಣ ಅಪಾರ್ಟ್‌ಮೆಂಟ್‌ ಇತ್ತು. ಈಗ ದೊಡ್ಡ ಅಪಾರ್ಟ್‌ ಮೆಂಟ್‌, ಹೊಸ ಕಾರು ಎಲ್ಲಾ ಇದೆ. ಎಲ್ಲಿಂದ ಬಂತು ಕಾಸು?” ಎಂದು ಕೇಳುತ್ತಾರೆ.

ಆಗ ಕರಣ್‌ ಥಾಪರ್‌ ತಮ್ಮ ಫೋನಿನಲ್ಲಿ ಇಮಿಡಿಯೆಟ್‌ ಬಿಟ್‌ ವೇವ್‌ನ ಲಿಂಕ್‌ ಓಪನ್‌ ಮಾಡಿ ತೋರಿಸುತ್ತಾರೆ. ಇದರಲ್ಲಿ ಹೇಗೆ 26 000 ಕಾಸು ಹಾಕಿ ಹಣ ಹೆಚ್ಚಿಸಿಕೊಳ್ಳಬಹುದು ಎಂದು ಹೇಳುತ್ತಾರೆ.

ಸ್ವತಃ ಪೂಜಿತಾರವರ ಫೋನನ್ನು ತೆಗೆದುಕೊಂಡು 26000 ಇನ್ವೆಸ್ಟ್‌ ಮಾಡಿ, ಸ್ವಲ್ಪ ಸಮಯಯದ ನಂತರ 31 094 ಆಗಿದ್ದನ್ನು ಅವರು ತೋರಿಸುತ್ತಾರೆ.

ಈ ವರದಿಯಲ್ಲಿ ಲಿಂಕ್‌ಅನ್ನು ಮಧ್ಯ ನೀಡಿರುವುದರಿಂದ, ಈ ವರದಿಯನ್ನು ಓದುವ ಓದುಗ ಈ ವಿಚಾರ ಸತ್ಯವೆಂದು ತಿಳಿದು, ಲಿಂಕ್‌ ತೆರೆದು ಹಣ ಹೂಡುವಂತೆ ಮಾಡುವುದು ಈ ಸ್ಕ್ಯಾಮರ್‌ಗಳ ತಂತ್ರ.

ಇದನ್ನೂ ಓದಿ: “ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!”: ವಂಚನೆಯ ಆಳ-ಅಗಲ

ಇದರ ಜೊತೆಗೆ, ಬಿಬಿಸಿ ಇಂಡಿಯಾದ ಸುದ್ದಿ ಸಂಪಾದಕ ಎಂದು ಅಮೀರ್‌ ಪಾಲೇಕರ್‌ ಎಂಬ ಫೋಟೋವನ್ನು ಬಳಸಿ, ಕರಣ್‌ ಥಾಪರ್‌ ಹೇಳಿದ ವೆಬ್‌ಸೈಟಿನಿಂದ ತಾನೂ ಹಣ ಸಂಪಾದಿಸಿದ್ದಾಗಿ ಬರೆಯಲಾಗಿದೆ. ಜೊತೆಗೆ, ಹಣ ಜಮೆಯಾದ ಸುಳ್ಳು ಬ್ಯಾಂಕ್ ವಿವರಗಳನ್ನೂ ನೀಡಲಾಗಿದೆ.

ಈ ವರದಿಯಲ್ಲಿ, ಕರಣ್ ಥಾಪರ್‌ ಹಾಗೂ ಪೂಜಿತಾರ ಫೋಟೋಗಳನ್ನು ಸನ್‌ ಟಿವಿಯ ಲೋಗೋದ ಜೊತೆಗೆ ಬಳಸಲಾಗಿದೆ. ಹೀಗಾಗಿ, ಓದುಗ ಈ ಸಂದರ್ಶನವನ್ನು ಸತ್ಯ ಎಂದು ತಿಳಿಯುತ್ತಾನೆ. ಕರಣ್‌ ಥಾಪರ್‌ರಂತಹ ಖ್ಯಾತನಾಮರು ಇಂತಹ ಬಿಟ್‌ ಕಾಯಿನ್‌ ಹೂಡಿಕೆಯನ್ನು ಮಾಡುವಾಗ ತಾವೂ ಮಾಡಬಹುದು ಎಂಬಂತೆ ಪ್ರೇರೇಪಿಸುತ್ತದೆ.

ಕರಣ್‌ ಥಾಪರ್‌ ಸ್ಪಷ್ಟೀಕರಣ

ಆದರೆ, ಈ ಸಂದರ್ಶನ ಒಂದು ಅಪ್ಪಟ ಸುಳ್ಳು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕರಣ್‌ ಥಾಪರ್‌, ತಾವು ಅಂತಹ ಹಣ ಸಂಪಾದಿಸುವ ವೆಬ್‌ಸೈಟ್‌ ಬಳಿಸಿಲ್ಲ, ಇದೊಂದು ಸುಳ್ಳು ವೆಬ್‌ಸೈಟ್‌ ಮತ್ತು ಸುಳ್ಳು ವರದಿ ಎಂದು ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರಣ್‌ ಥಾಪರ್‌, “ ನಕಲಿ ವೆಬ್‌ಪುಟಗಳು ತಮ್ಮ ಮೇಲೆ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡುತ್ತಿವೆ ಮತ್ತು ಅವುಗಳನ್ನು ನಂಬಬೇಡಿ,” ಎಂದು ಹೇಳಿದ್ದಾರೆ.

“ನನ್ನ ಬಗ್ಗೆ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಚಾರಗಳೊಂದಿಗೆ BBC.INDIA ಮತ್ತು SUNTV ಹೆಸರುಗಳನ್ನು ಬಳಸಿಕೊಂಡು ನಕಲಿ ಮತ್ತು ಫೇಕ್ ವೆಬ್‌ಪೇಜ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂಬುದು ಸ್ನೇಹಿತರು ಮತ್ತು ಹಿತೈಷಿಗಳ ಮೂಲಕ ನನ್ನ ಗಮನಕ್ಕೆ ಬಂದಿದೆ” ಎಂದು ಥಾಪರ್ ಹೇಳಿಕೆಯಲ್ಲಿ ಬರೆದಿದ್ದಾರೆ.

“octequiti.com’ ಎಂಬ ವೆಬ್‌ಪೇಜ್ ನನ್ನ ಮತ್ತು SUNTV ನ ಪೂಜಿತ ದೇವರಾಜು ನಡುವಿನ ಆಪಾದಿತ ಸಂಭಾಷಣೆಯನ್ನು ಪ್ರಕಟಿಸಲಾಗಿದೆ, ಅಲ್ಲಿ ಒಂದು ನಿರ್ದಿಷ್ಟ ಮೋಸದಿಂದ ಹಣ ಮಾಡುವ ಯೋಜನೆಯ ವೆಬ್‌ಸೈಟ್ ಅನ್ನು ಕ್ಲಿಕ್ ಬೈಟ್ ಶೀರ್ಷಿಕೆಯೊಂದಿಗೆ ಪ್ರಚಾರ ಮಾಡಲಾಗುತ್ತಿದೆ” ಎಂದು ಅವರು ಬರೆದಿದ್ದಾರೆ.  

“ಜವಾಬ್ದಾರಿಯುತ ನಾಗರಿಕನಾಗಿ, ನನ್ನ ಪ್ರತಿಕ್ರಿಯೆಯನ್ನು ನೀಡುವುದು ಮತ್ತು ಈ ವಿಚಾರದಲ್ಲಿ ನಿಜವಾದ ಹಾಗೂ ನಿಖರವಾದ ಸಂಗತಿಗಳನ್ನು ಸಾರ್ವಜನಿಕರ ಮುಂದೆ ಇಡುವುದು ಅಗತ್ಯವೆಂದು ನಾನು ಭಾವಿಸುತ್ತೇನೆ. ಆದ್ದರಿಂದ, ಆರಂಭದಲ್ಲಿ, ನಾನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಚಾರವನ್ನು ಸುಳ್ಳು ಮತ್ತು ಕಟ್ಟುಕಥೆ ಎಂದು ಹೇಳುತ್ತಾ ನಿರಾಕರಿಸುತ್ತೇನೆ. ಇದನ್ನು ನಂಬಬೇಡಿ ಅಥವಾ ಅವರು ಹೇಳಿದಂತೆ ಕೇಳಬೇಡಿ ಎಂದು ಸಾರ್ವಜನಿಕರಿಗೆ ಈ ಮೂಲಕ ವಿನಂತಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಈ ಮೂಲಕ ತಾವು ಇಂತಹ “ಸಂದರ್ಶನವನ್ನು ಎಂದಿಗೂ ನೀಡಿಲ್ಲ, ಪೋಸ್ಟ್‌ಗಳು ಮತ್ತು ವೆಬ್‌ಪೇಜ್‌ಗಳಲ್ಲಿ ಉಲ್ಲೇಖಿಸಿರುವಂತಹ ಹೇಳಿಕೆಗಳನ್ನು ನೀಡಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಈಗಾಗಲೇ ವಿಚಾರವನ್ನು ಫೇಸ್‌ಬುಕ್‌ಗೆ ರಿಪೋರ್ಟ್‌ ಮಾಡಿ, ಪೋಸ್ಟನ್ನು ತೆಗೆದುಹಾಕಲು ವಿನಂತಿಸಿದ್ದೇನೆ. ಈ ಮಾನಹಾನಿಕರ ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳು/ವೆಬ್‌ಪೇಜ್‌ಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ನಾನು ಬಿಬಿಸಿ ಇಂಡಿಯಾ ಮತ್ತು SUNTV ಗೆ ವಿಚಾರದ ಬಗ್ಗೆ ಸೂಚನೆ ನೀಡಿದ್ದೇನೆ,” ಎಂದು ಥಾಪರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು