ಬೆಂಗಳೂರು: ತೋಡೋ ಪಿತಾಮಹನ ಮರಿಮಗನಿಂದ ಭಾರತ ಜೋಡಿಸಲು ಸಾಧ್ಯವೇ? ಎಂದು ಭಾರತೀಯ ಜನತಾ ಪಕ್ಷವು ಕನ್ನಡ ದಿಪತ್ರಿಕೆಯೊಂದರಲ್ಲಿ ಜಾಹಿರಾತು ನೀಡಿರುವುದರ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕವು ತಿರುಗೇಟು ನೀಡಿದೆ.
ಕನ್ನಡ ದಿನಪತ್ರಿಕೆಯೊಂದರ ಮುಖಪುಟದ ಜಾಹಿರಾತುವಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡಲಾಗಿದ್ದು, ಭಾರತ ಐಕ್ಯತಾ ಯಾತ್ರೆಯ ನಿಜವಾದ ಅಜೆಂಡಾ ಬಾರತ ವಿಭಜನೆಯೇ ಆಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಭಾರತ ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ಕನ್ನಡ ಪತ್ರಿಕೆಯೊಂದರಲ್ಲಿ ಎಂದಿನಂತೆ ಇತಿಹಾಸ ತಿರುಚುವ ಮುಖಪುಟದ ಜಾಹೀರಾತು ನೀಡಿದೆ ಎಂದು ತಿರುಗೇಟು ನೀಡಿದೆ.
ಸಾವರ್ಕರ್ ಎರಡು ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು, ಜಿನ್ನಾ ಅದನ್ನು ಪೂರೈಸಿಕೊಂಡರು. ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಬಂಗಾಳದ ವಿಭಜನೆಯಲ್ಲಿ ಮುಂದಾಳತ್ವ ವಹಿಸಿದ್ದರು ಎಂದು ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.
ರಾಜಕೀಯ ಪಕ್ಷಗಳು ಸಹಜವಾಗಿ ತಮ್ಮ ಸಾಧನೆ ಹೇಳಲು, ಸಕಾರಾತ್ಮಕ ಸಂದೇಶ ನೀಡಲು ಪತ್ರಿಕೆಗಳ ಮುಖಪುಟದ ಜಾಹೀರಾತು ನೀಡುವುದು ವಾಡಿಕೆ. ಆದರೆ ಬಿಜೆಪಿ ಪಕ್ಷವು ಕೋಟಿ ಕೋಟಿ ಖರ್ಚು ಮಾಡಿ ನಕಾರಾತ್ಮಕ ಜಾಹೀರಾತು ನೀಡಿದೆ ಎಂದರೆ ಅವರಲ್ಲಿ ಅದೆಷ್ಟು ಭಯ, ಆತಂಕ, ಅಭದ್ರತೆಯನ್ನು ಭಾರತ ಐಕ್ಯತಾ ಯಾತ್ರೆ ಮೂಡಿಸಿರಬಹುದೆಂದು ಊಹಿಸಬಹುದು. ಬಿಜೆಪಿ ತನ್ನೊಳಗಿನ ಭಯ, ಆತಂಕ, ಅಭದ್ರತೆಯನ್ನು ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರು ಮಾಡಿಕೊಂಡಿದೆ. ಅದೂ ಕೂಡ ಹಣ ಖರ್ಚು ಮಾಡಿ! ಎಂದು ವ್ಯಂಗಿಸಿದೆ.