Wednesday, March 26, 2025

ಸತ್ಯ | ನ್ಯಾಯ |ಧರ್ಮ

ತಮಿಳುನಾಡಿನಲ್ಲಿ ಬಿಜೆಪಿ, ಎಐಎಡಿಎಂಕೆ ಮೈತ್ರಿ ; ಅಣ್ಣಾಮಲೈ ಸೈಡಿಗಿಟ್ಟ ಬಿಜೆಪಿ

ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಕ್ಷೇತ್ರ ಪುನರ್ ವಿಂಗಡಣೆ, ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟ, ತಮಿಳುನಾಡು ಸರ್ಕಾರ ತಿರಸ್ಕರಿಸಿದ ರೂಪಾಯಿ ಲೋಗೋ, ತ್ರಿಭಾಷಾ ಸೂತ್ರದ ವಿರುದ್ಧದ ತಂತ್ರಗಾರಿಕೆಯಂತಹ ಬಿಜೆಪಿ ಮತ್ತು ತಮಿಳುನಾಡು ಆಡಳಿತ ಪಕ್ಷ ಡಿಎಂಕೆ ನಡುವಿನ ತಿಕ್ಕಾಟಕ್ಕೆ ಈಗ ಬಿಜೆಪಿ ಪ್ರತಿತಂತ್ರಕ್ಕೆ ಮುಂದಾಗಿದೆ. ಇದಕ್ಕೆ ಸರಿಯಾಗಿ ತನ್ನ ಅನಾದಿಕಾಲದ ಮಿತ್ರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಕೇಂದ್ರ ಸಚಿವ ಅಮಿತ್ ಷಾ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ತಳವೂರಲು ಹರಸಾಹಸ ಪಡುತ್ತಿರುವ ಬಿಜೆಪಿಗೆ ರಾಜ್ಯಾಧ್ಯಕ್ಷ ಅಣ್ಣಾಮಲೈ ತಂತ್ರಗಾರಿಕೆ ಯಾವ ಮಟ್ಟಕ್ಕೂ ತೃಪ್ತಿದಾಯಕ ಎನಿಸಲ್ಲ ಎಂಬುದು ಮೇಲ್ನೋಟಕ್ಕೆ ಬಿಜೆಪಿಗೆ ಅರ್ಥವಾದಂತೆ ಕಂಡಿದೆ. ಇದಕ್ಕೆ ಸರಿಯಾಗಿ ಒಂದು ಕಾಲದಲ್ಲಿ ಎನ್ ಡಿಎ ಮಿತ್ರಪಕ್ಷಗಳಲ್ಲಿ ಒಂದಾಗಿದ್ದ ಎಐಎಡಿಎಂಕೆ ನಾಯಕರನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳುವ ಬಗ್ಗೆ ಯೋಚಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬಿಜೆಪಿಯನ್ನು ಉತ್ತರ ಭಾರತದ ಪಕ್ಷ ಎಂದು ಕರೆಯುವ ಮೂಲಕ ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ರೀತಿಯಿಂದ, ಸ್ಥಳೀಯ ಪಕ್ಷದ ಮೂಲಕವಾದರೂ ತಾನು ಅಸ್ತಿತ್ವ ಸಾಧಿಸುವುದು ಸುಲಭವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಹೀಗಾಗಿ ಎಐಎಡಿಎಂಕೆ ಜೊತೆಗೆ ಮೈತ್ರಿಗೆ ಈಗಿಂದಲೇ ಸಿದ್ಧತೆ ನಡೆಸಿದೆ.

2026ರಲ್ಲಿ ಶುರುವಾಗುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷವಾಗಿರುವ ಡಿಎಂಕೆಯು ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದರೆ, ಈ ನಡುವೆ ಪ್ರತಿಪಕ್ಷಗಳಾದ ಎಐಎಡಿಎಂಕೆ ಮತ್ತು ಬಿಜೆಪಿ ತಮ್ಮ ತಂತ್ರಗಳನ್ನು ರೂಪಿಸುತ್ತಿವೆ.

ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಸ್ವಲ್ಪ ಸಮಯದಿಂದ ಎಐಎಡಿಎಂಕೆ ಮೇಲಿನ ತಮ್ಮ ಟೀಕೆಗಳನ್ನು ಕಡಿಮೆ ಮಾಡಿದ್ದಾರೆ. ಇದು ಎಐಎಡಿಎಂಕೆ ಮತ್ತು ಬಿಜೆಪಿ ತಮ್ಮ ಮೈತ್ರಿಯನ್ನು ಗಟ್ಟಿಗೊಳಿಸಲು ಹೆಜ್ಜೆ ಇರಿಸಿದರೆ, ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಇಂಡಿಯಾ ಬಣಕ್ಕೆ ಬಲವಾದ ಸವಾಲು ಒಡ್ಡುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page