ಬೆಂಗಳೂರು: ಮುಡಾದ 142 ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕೆಂದು ಬಿಜೆಪಿ ಶನಿವಾರ ಒತ್ತಾಯಿಸಿದೆ.
ಸಿದ್ದರಾಮಯ್ಯ ಮತ್ತು ಇತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಸುಮಾರು 300 ಕೋಟಿ ರೂ. ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ತಿಳಿಸಿದೆ.
ಸಿದ್ದರಾಮಯ್ಯ ಮತ್ತು ಇತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಇಡಿ ಹೇಳಿದೆ.
“ಮುಡಾ ವ್ಯೂಹದಿಂದ ಹೊರಬರಲು ಪ್ರಾರಂಭಿಕ ಹಂತದಲ್ಲಿ ನಿಮಗೆ ಮುಕ್ತ ಅವಕಾಶವಿತ್ತು, ಆದರೆ ಅದನ್ನು ಬದಿಗೊತ್ತಿ ವಿತಂಡವಾದ ಮೆರೆದಿರಿ, ಈಗಲೂ ಕನಿಷ್ಠ ನೈತಿಕತೆಯನ್ನು ಉಳಿಸಿಕೊಳ್ಳಲು ಕೊನೆ ಅವಕಾಶ ನಿಮಗಿದೆ, ನೀವು ರಾಜೀನಾಮೆ ನೀಡಿ ಕರ್ನಾಟಕದ ಗೌರವವನ್ನು ಕನಿಷ್ಠವಾದರೂ ಉಳಿಸುವ ಕೊನೆ ಅವಕಾಶ ಕಳೆದುಕೊಳ್ಳಬೇಡಿ, ಇದು ರಾಜಕೀಯ ದ್ವೇಷವಿಲ್ಲದ ನನ್ನ ಕಾಳಜಿಯ ಸಲಹೆ. ಸ್ವೀಕರಿಸುವುದು ಅಥವಾ ಧಿಕ್ಕರಿಸುವುದು ನಿಮಗೇ ಬಿಟ್ಟಿದ್ದು” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ‘X’ ವೇದಿಕೆಯಲ್ಲಿ ಮಾಡಿರುವ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣದ ವಿರುದ್ಧದ ಹೋರಾಟದಲ್ಲಿ ಶಿಕಾರಿಪುರ ಶಾಸಕ ವಿಜಯೇಂದ್ರ ಇದನ್ನು ಪ್ರಮುಖ ಗೆಲುವು ಎಂದು ಬಣ್ಣಿಸಿದ್ದಾರೆ.
ಮುಡಾ ಹಗರಣವನ್ನು ವಿವರಿಸಿದ ಇಡಿ, “ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ್ಮ ಪತ್ನಿ ಶ್ರೀಮತಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿ 14 ನಿವೇಶನಗಳ (ಪ್ಲಾಟ್‌ಗಳು) ಪರಿಹಾರವನ್ನು ಪಡೆಯಲು ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೂಮಿಯನ್ನು ಮೂಲತಃ ಮುಡಾ 3,24,700 ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಐಷಾರಾಮಿ ಪ್ರದೇಶದಲ್ಲಿ 14 ನಿವೇಶನಗಳ ರೂಪದಲ್ಲಿ ಪರಿಹಾರವು 56 ಕೋಟಿ ರೂ. (ಅಂದಾಜು) ಮೌಲ್ಯದ್ದಾಗಿದೆ.” ಪಾರ್ವತಿಗೆ ಪರಿಹಾರ ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್ ಪಾತ್ರ ಪ್ರಮುಖ ಪಾತ್ರ ವಹಿಸಿದೆ ಎಂದು ಇಡಿ ಹೇಳಿದೆ.
ಇಡಿ ತನಿಖೆಯು ಸಿದ್ದರಾಮಯ್ಯ ಅವರ ಮೇಲೆ ನಡೆಸಿರುವ ಗಮನಾರ್ಹ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ. ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ತಮ್ಮ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.