Home ಬ್ರೇಕಿಂಗ್ ಸುದ್ದಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ BLO ಜೊತೆಗೆ ಬಿಜೆಪಿ ಕರಪತ್ರ ಹಂಚಿಕೆ ; ಕಾಂಗ್ರೆಸ್ ಕಾರ್ಯಕರ್ತರ...

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ BLO ಜೊತೆಗೆ ಬಿಜೆಪಿ ಕರಪತ್ರ ಹಂಚಿಕೆ ; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

0

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ವಿವಾದಾತ್ಮಕ ಘಟನೆೊಂದು ಬೆಳಕಿಗೆ ಬಂದಿದೆ. ಬೂತ್ ಲೆವೆಲ್ ಅಧಿಕಾರಿ (BLO) ಸಿಬ್ಬಂದಿಯೊಂದಿಗೆ ಬಂದಿದ್ದಾನೆ ಎನ್ನಲಾದ ಬಿಜೆಪಿ ಕಾರ್ಯಕರ್ತನೊಬ್ಬ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯದ ವೇಳೆ ಪಕ್ಷದ ಪ್ರಚಾರ ಕರಪತ್ರಗಳನ್ನು ಹಂಚುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

ವೀಡಿಯೋದಲ್ಲಿರುವ ದೃಶ್ಯಗಳ ಪ್ರಕಾರ, ಮತದಾರರ ಪಟ್ಟಿ ಪರಿಷ್ಕರಣೆಯ ಅಧಿಕೃತ ಕಾರ್ಯಕ್ಕಾಗಿ ಮನೆಮನೆಗೆ ಭೇಟಿ ನೀಡುತ್ತಿದ್ದ ಬಿಎಲ್‌ಓ ಸಿಬ್ಬಂದಿಯೊಂದಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಕೂಡ ತೆರಳಿದ್ದಾನೆ ಎನ್ನಲಾಗಿದೆ. ಆತನ ಬಳಿ ಬಿಜೆಪಿ ನಾಯಕರ ಭಾವಚಿತ್ರಗಳಿರುವ ಕರಪತ್ರಗಳು ಕಂಡುಬಂದಿದ್ದು, ಅಧಿಕೃತ ಫಾರಂಗಳು ಹಾಗೂ ಪಕ್ಷದ ಪ್ರಚಾರ ಸಾಮಗ್ರಿಗಳನ್ನು ಒಂದೇ ವೇಳೆ ಹಂಚಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, “ನೀವು ಸರ್ಕಾರಿ ಕರ್ತವ್ಯ ನಿರ್ವಹಿಸಲು ಬಂದಿದ್ದೀರಾ ಅಥವಾ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡಲು ಬಂದಿದ್ದೀರಾ?” ಎಂದು ಪ್ರಶ್ನಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರಿ ಪ್ರಕ್ರಿಯೆಯೊಂದಿಗೆ ರಾಜಕೀಯ ಪ್ರಚಾರ ನಡೆಸುವುದು ಚುನಾವಣಾ ನಿಯಮಗಳ ಉಲ್ಲಂಘನೆಯಾಗಬಹುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸಿದ ಬಿಜೆಪಿ ಕಾರ್ಯಕರ್ತ, “ಅವರು ಎಸ್‌ಐಆರ್ ಕಾರ್ಯ ಮಾಡುತ್ತಿದ್ದಾರೆ, ನಾನು ಅವರ ಜತೆಯಲ್ಲಿ ಬಂದಿದ್ದೇನೆ” ಎಂದು ಹೇಳಿದ್ದಾನೆ. ಬಳಿಕ “ನಾನು ಪ್ರತ್ಯೇಕವಾಗಿ ಬಂದಿದ್ದೇನೆ” ಎಂದು ಮತ್ತೊಂದು ಉತ್ತರ ನೀಡಿದ್ದಾನೆ ಎನ್ನಲಾಗಿದೆ. ಈ ಧ್ವಂದ್ವ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ಅಲ್ಲದೆ, ಕಾರ್ಯಕರ್ತರು ಆತನ ಗುರುತಿನ ಚೀಟಿಯನ್ನು ಪರಿಶೀಲಿಸಿ, ಕೈಯಲ್ಲಿದ್ದ ಬಿಜೆಪಿ ಕರಪತ್ರಗಳನ್ನು ವಶಪಡಿಸಿಕೊಂಡು ಅಲ್ಲಿಂದ ತೆರಳುವಂತೆ ಸೂಚಿಸಿರುವುದು ವೀಡಿಯೋದಲ್ಲಿ ಕಂಡುಬರುತ್ತದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಚುನಾವಣಾ ಅಧಿಕಾರಿಗಳು ಅಥವಾ ಸಂಬಂಧಿತ ಇಲಾಖೆಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆ ನಡೆಸುವಂತೆ ವಿರೋಧ ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

You cannot copy content of this page

Exit mobile version