ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದರಾಗಿ ಮಾಜಿ ಸಚಿವ ಕೆ.ಸುಧಾಕರ್ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮದ್ಯ ಹಂಚಿದ ಕಾರಣಕ್ಕಾಗಿ ಬಿಜೆಪಿ ನೆಲಮಂಗಲ ಘಟಕದ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಮಂಗಳವಾರ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಚೌಧರಿ ಅವರನ್ನು ಬಿಜೆಪಿ ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ರಾಮಕೃಷ್ಣ ಅವರು ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿ ಪಕ್ಷದಿಂದ ಆರು ವರ್ಷಗಳ ಕಾಲ ಹೊರಹಾಕಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಆದೇಶದ ಮೇರೆಗೆ ನೆಲಮಂಗಲ ಘಟಕದ ಅಧ್ಯಕ್ಷ ಸ್ಥಾನದಿಂದ ಚೌಧರಿ ಅವರನ್ನು ಉಚ್ಚಾಟಿಸಲಾಗಿದೆ. ಭಾನುವಾರದ ಕಾರ್ಯಕ್ರಮದಲ್ಲಿ ಮದ್ಯ ಹಂಚಿದ್ದು ಮುಜುಗರಕ್ಕೆ ಕಾರಣವಾಗಿದ್ದು, ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಉಚ್ಚಾಟನೆ ಆದೇಶದಲ್ಲಿ ತಿಳಿಸಲಾಗಿದ್ದು, ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ ಎಂದೂ ಹೇಳಲಾಗಿದೆ.
ಸಿಎಂ ಪ್ರತಿಕ್ರಿಯೆ
ಸಮಾರಂಭದಲ್ಲಿ ಮದ್ಯ ವಿತರಣೆಗೆ ಅಬಕಾರಿ ಇಲಾಖೆ ಅನುಮತಿ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಂಸ್ಕೃತಿ ಬಗ್ಗೆ, ಧರ್ಮದ ಬಗ್ಗೆ, ನೈತಿಕತೆ ಬಗ್ಗೆ ಮಾತಾಡುವವರು ಈಗ ಹಗಲಲ್ಲೇ ಮದ್ಯ ಹಂಚಿದ್ದಾರೆ, ಇದು ನೈತಿಕತೆಯಾ ?” ಎಂದು ಪ್ರಶ್ನಿಸಿದ್ದಾರೆ