Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ‘ರಾವಣ್’, ‘ಮೋದಾನವ್’ ; ಹೊಸ ವಿವಾದ ಹುಟ್ಟು ಹಾಕಿದ ಬಿಜೆಪಿ

‘ರಾವಣ್’, ‘ಮೋದಾನವ್’ ; ಹೊಸ ವಿವಾದ ಹುಟ್ಟು ಹಾಕಿದ ಬಿಜೆಪಿ

0

ಇನ್ನೇನು 2024 ರ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಟ್ವಿಟ್ ವಾರ್ ಶುರು ಮಾಡಿವೆ. ನಿನ್ನೆಯ ದಿನ (ಗುರುವಾರ) ಬಿಜೆಪಿ ಮತ್ತು ಕಾಂಗ್ರೆಸ್ ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿಯವರ ಫೋಟೋ ಟ್ವಿಟ್ ಮಾಡುವ ಮೂಲಕ ಟ್ವಿಟ್ ಮತ್ತು ಪೋಸ್ಟರ್ ವಾರ್ ಗೆ ಮುಂದಾಗಿವೆ.

ಈ ಪೋಸ್ಟರ್ ಸಮರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನವಯುಗದ ‘ರಾವಣ’ ಎಂದು ಉಲ್ಲೇಖಿಸಿದ ಪೋಸ್ಟರ್‌ನೊಂದಿಗೆ ಶುರುವಾಗಿದೆ. ಇದಕ್ಕೆ ಪ್ರತಿಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮೋದಾನವ್’ ಎಂದು ಉಲ್ಲೇಖಿಸುವ ಪೋಸ್ಟರ್ ಮೂಲಕ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಬಿಜೆಪಿ ಶುರುಮಾಡಿದ ಪೋಸ್ಟರ್ ಸಮರಕ್ಕೆ ಕಾಂಗ್ರೆಸ್ ನಾಯಕ ಬಿ ವಿ ಶ್ರೀನಿವಾಸ್, ಜೈರಾಮ್ ರಮೇಶ್, ಗುರುದೀಪ್ ಸಿಂಗ್ ಸಪ್ಪಲ್ ಮುಂತಾದವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಶೇರ್ ಮಾಡಿದ ಟ್ವೀಟ್‌ನಲ್ಲಿ, ಇದು ನವಯುಗದ ರಾವಣ. ದುಷ್ಟ, ಧರ್ಮ ವಿರೋಧಿ, ರಾಮ ವಿರೋಧಿ. ಭಾರತವನ್ನು ನಾಶ ಮಾಡುವುದೇ ಆತನ ಗುರಿ ಎಂಬ ಶೀರ್ಷಿಕೆಯೊಂದಿಗೆ, ಪೋಸ್ಟರ್ ಒಂದನ್ನು ಶೇರ್ ಮಾಡಿದೆ.

‘ಭಾರತ್ ಖತ್ರೆ ಮೇ ಹೈ’ (ಭಾರತ ಅಪಾಯದಲ್ಲಿದೆ) ಎಂಬ ತಲೆಬರಹದೊಂದಿಗೆ 10 ತಲೆಗಳನ್ನು ಹೊಂದಿರುವ ಗಡ್ಡಧಾರಿ ರಾಹುಲ್‌ ಗಾಂಧಿಯನ್ನು ಬಿಜೆಪಿಯ ಪೋಸ್ಟರ್‌ನಲ್ಲಿ ತೋರಿಸಲಾಗಿದೆ. ಅದರ ಕೆಳಗೆ ‘ರಾವಣ’ ಎಂದು ದೊಡ್ಡ ಫಾಂಟ್‌ಗಳಲ್ಲಿ ತೋರಿಸಲಾಗಿದೆ. ಜಾರ್ಜ್ ಸೊರೊಸ್ ನಿರ್ದೇಶನ, ನಿರ್ಮಾಣ ಕಾಂಗ್ರೆಸ್ ಪಕ್ಷ ಎಂಬ ಟಿಪ್ಪಣಿಯನ್ನೂ ಅದರಲ್ಲಿ ಸೇರಿಸಲಾಗಿದೆ.

ಕಾಂಗ್ರೆಸ್ ಪೋಸ್ಟರ್‌ನಲ್ಲಿ ದಾನವ್ ಆಗಿ ಮೋದಿ

ಬಿಜೆಪಿಯ ಪೋಸ್ಟರ್‌ ನೋಡಿದ ಕೂಡಲೇ ಕಾಂಗ್ರೆಸ್ ಅದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದೆ. ಇಂಡಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಶೇರ್ ಮಾಡಿದರು. ಅದರ ಶೀರ್ಷಿಕೆ ‘ಹಿಂದೂಸ್ತಾನ್ ಖತ್ರೆ ಮೇ ಹೇ’ (ಹಿಂದೂಸ್ತಾನ ಅಪಾಯದಲ್ಲಿದೆ). ಜತೆಗೆ ಡೆವಿಲ್ ರೀತಿ ಕಾಣುವಂತೆ ಫೋಟೋ ಶಾಪ್ ಮಾಡಿದ ಪಿಎಂ ಮೋದಿ ಅವರ ಫೋಟೋ ಇರುವ ಪೋಸ್ಟರ್ ಅದು.

ಇಲ್ಲಿರುವುದು ಹೊಸ ಯುಗದ ಮೋದಾನವ್. ಆತ ದುಷ್ಟ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಜನ ವಿರೋಧಿ, ಮಾನವೀಯತೆಯ ವಿರೋಧಿ. ಭಾರತವನ್ನು ಮತ್ತು ಇಂಡಿಯಾ ಎಂಬ ಚಿಂತನೆಯನ್ನು ನಾಶ ಮಾಡುವುದೇ ಆತನ ಏಕೈಕ ಗುರಿ ಎಂದು ಬಿ.ವಿ.ಶ್ರೀನಿವಾಸ್ ಟೀಕಿಸಿದ್ದಾರೆ.

ಪೋಸ್ಟರ್ ಅನ್ನು ‘ಭ್ರಷ್ಟ್ ಜುಮ್ಲೇಬಾಜ್ ಪಾರ್ಟಿ’ಯ ‘ನಿರ್ಮಾಣ’ ಮತ್ತು ‘ಪರಮ ಮಿತ್ರ ಅದಾನಿ’ಯ ‘ನಿರ್ದೇಶನ’ ಎಂದು ಕಾಂಗ್ರೆಸ್ ಬರೆದಿದೆ.

“ಬಿಜೆಪಿಯ ಅಧಿಕೃತ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯನ್ನು ರಾವಣನಂತೆ ಚಿತ್ರಿಸುವ ಕ್ರೂರ ಗ್ರಾಫಿಕ್‌ ಶೇರ್ ಮಾಡಿದ್ದರ ನಿಜವಾದ ಉದ್ದೇಶವೇನು? ಭಾರತವನ್ನು ವಿಭಜಿಸಲು ಬಯಸುವ ಶಕ್ತಿಗಳಿಂದ ಅವರ ತಂದೆ ಮತ್ತು ಅಜ್ಜಿಯ ಹತ್ಯೆ ಆಗಿದೆ. ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಮಾಜಿ ಅಧ್ಯಕ್ಷರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಇದರ ಉದ್ದೇಶ ಸ್ಪಷ್ಟವಾಗಿದೆ. ರೋಗಶಾಸ್ತ್ರೀಯವಾಗಿ ಸುಳ್ಳುಗಾರ ಮತ್ತು ನಾರ್ಸಿಸಿಸ್ಟಿಕ್ ವ್ಯಕ್ತಿತ್ವದ ಅಸ್ವಸ್ಥತೆಯಿಂದ ಬಳಲುತ್ತಿರುವ ಬಗ್ಗೆ ಪ್ರಧಾನಿ ಪ್ರತಿದಿನ ಸಾಕ್ಷ್ಯವನ್ನು ನೀಡುವುದು ಒಂದು ವಿಷಯ. ಆದರೆ ಅವರ ಪಕ್ಷವು ಈ ಅಸಹ್ಯಕರವಾದದ್ದನ್ನು ಮಾಡುವುದು ಸ್ವೀಕಾರಾರ್ಹವಲ್ಲ, ಇದು ಬಹಳ ಅಪಾಯಕಾರಿ. ನಾವು ಹೆದರುವುದಿಲ್ಲ! “ಎಂದು ಹಿರಿಯ ನಾಯಕ ಜೈರಾಮ್‌ ರಮೇಶ್ ಬರೆದಿದ್ದಾರೆ.

You cannot copy content of this page

Exit mobile version