ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ವಾರ್ಷಿಕ ಆದಾಯ ದಿನೇ ದಿನೇ ಹೆಚ್ಚುತ್ತಿದೆ. ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಾರ್ಚ್ 31, 2024 ರ ವೇಳೆಗೆ ಬಿಜೆಪಿ ಬಳಿ 7,113.80 ಕೋಟಿ ರೂ. ನಿಧಿ ಇದೆ. ಕಾಂಗ್ರೆಸ್ 857 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2023-24ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 1754 ಕೋಟಿ ರೂ. ಖರ್ಚು ಮಾಡಿತ್ತು. ಈ ಮೊತ್ತವು 2022-23 ರಲ್ಲಿ ಖರ್ಚು ಮಾಡಿದ 1092 ರೂ.ಗಳಿಗಿಂತ ಶೇ. 60ರಷ್ಟು ಹೆಚ್ಚು. ಕಾಂಗ್ರೆಸ್ ಪಕ್ಷವು 2023-24 ರಲ್ಲಿ 619.67 ಕೋಟಿ ರೂ. ಮತ್ತು 2022-23 ರಲ್ಲಿ 192.56 ಕೋಟಿ ರೂ. ಖರ್ಚು ಮಾಡಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಅತಿ ಹೆಚ್ಚು ಆದಾಯ
ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಅತಿ ಹೆಚ್ಚು ಆದಾಯವನ್ನು ಗಳಿಸಿದೆ. 2022-23ರಲ್ಲಿ 2,360.8 ಕೋಟಿ ರೂ.ಗಳಷ್ಟಿದ್ದ ಪಕ್ಷದ ಆದಾಯವು ಮರುವರ್ಷ ಶೇ. 83 ರಷ್ಟು ಹೆಚ್ಚಾಗಿ 4,340.5 ಕೋಟಿ ರೂ.ಗಳಿಗೆ ತಲುಪಿದೆ. ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಇತ್ತೀಚಿನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಇದರಲ್ಲಿ 1,685.6 ಕೋಟಿ ರೂ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಂದಿದೆ.
ಬೇರೆ ಯಾವುದೇ ಪಕ್ಷವು ಬಾಂಡ್‌ಗಳ ರೂಪದಲ್ಲಿ ಇಷ್ಟು ದೊಡ್ಡ ವಾರ್ಷಿಕ ಆದಾಯವನ್ನು ಪಡೆದಿಲ್ಲ. ಇದೇ ಅವಧಿಯಲ್ಲಿ ಕಾಂಗ್ರೆಸ್ ಆದಾಯವು 452.4 ಕೋಟಿ ರೂ.ಗಳಿಂದ 1,225 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಶೇ. 170 ರಷ್ಟು ಹೆಚ್ಚಳ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಚುನಾವಣಾ ಬಾಂಡ್‌ಗಳ ರೂಪದಲ್ಲಿ ತನ್ನ ಆದಾಯವನ್ನು ಶೇಕಡಾ 384 ರಷ್ಟು ಹೆಚ್ಚಿಸಿಕೊಂಡಿದೆ. 2022-23ರಲ್ಲಿ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ 171 ಕೋಟಿ ರೂ. ಆದಾಯವನ್ನು ಪಡೆದಿದ್ದರೆ, 2023-24ರಲ್ಲಿ 828.4 ಕೋಟಿ ರೂ. ಆದಾಯವನ್ನು ಪಡೆದಿದೆ. ಬಾಂಡ್‌ಗಳ ವಿಷಯದಲ್ಲಿ, ಬಿಜೆಪಿ ನಂತರ ಕಾಂಗ್ರೆಸ್ ಅತಿ ಹೆಚ್ಚು ಆದಾಯ ಗಳಿಸಿದೆ.
2023-24 ರಲ್ಲಿ, ಬಿಆರ್‌ಎಸ್ ಬಾಂಡ್‌ಗಳಿಂದ ರೂ. 685.5 ಕೋಟಿ ಆದಾಯವನ್ನು ಪಡೆದಿದೆ ಮತ್ತು ತೃಣಮೂಲ ಕಾಂಗ್ರೆಸ್ ರೂ. 612.4 ಕೋಟಿ ಆದಾಯವನ್ನು ಪಡೆದಿದೆ. ವೆಚ್ಚದ ವಿಷಯಕ್ಕೆ ಬಂದರೆ, ಕಳೆದ ಹಣಕಾಸು ವರ್ಷದಲ್ಲಿ ಬಿಜೆಪಿ 2,211.7 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದು 2022-23 ರಲ್ಲಿ ಮಾಡಿದ ವೆಚ್ಚಕ್ಕಿಂತ ಶೇ. 62 ರಷ್ಟು ಹೆಚ್ಚಾಗಿದೆ. ಇದರಲ್ಲಿ ಪಕ್ಷವು ಚುನಾವಣೆ ಮತ್ತು ಸಾಮಾನ್ಯ ಪ್ರಚಾರಕ್ಕಾಗಿ 1,754 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ವಾರ್ಷಿಕ ಖರ್ಚು 1,025.20 ಕೋಟಿ ರೂ.ಗಳಷ್ಟಿತ್ತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾರು ಯಾತ್ರೆಗೆ ಪಕ್ಷವು 49.6 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಭಾರತ್ ಜೋಡೋ ಯಾತ್ರೆಯ ಮೊದಲ ಹಂತಕ್ಕೆ 71.8 ಕೋಟಿ ರೂ. ವೆಚ್ಚವಾಗಿದೆ.
2023-24ರ ಲೆಕ್ಕಪರಿಶೋಧನಾ ವರದಿಯಲ್ಲಿ ಬಿಜೆಪಿ ಘೋಷಿಸಿದ ಸ್ವಯಂಪ್ರೇರಿತ ದೇಣಿಗೆಗಳು 3,967 ಕೋಟಿ ರೂ.ಗಳಾಗಿವೆ. ಇದರಲ್ಲಿ 1,685.6 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ, 236.3 ಕೋಟಿ ರೂ.ಗಳನ್ನು ಆಜೀವನ್ ಸಹಯೋಗ್ ನಿಧಿ ಮೂಲಕ ಮತ್ತು 2,042.7 ಕೋಟಿ ರೂ.ಗಳನ್ನು ಇತರ ದೇಣಿಗೆಗಳ ಮೂಲಕ ಸಂಗ್ರಹಿಸಲಾಗಿದೆ. ವೈಯಕ್ತಿಕ ದಾನಿಗಳು ಪಕ್ಷಕ್ಕೆ 240 ಕೋಟಿ ರೂ., ಕಾರ್ಪೊರೇಟ್‌ಗಳು 1,890 ಕೋಟಿ ರೂ., ಸಂಸ್ಥೆಗಳು ಮತ್ತು ಕಲ್ಯಾಣ ಸಂಘಗಳು 101.2 ಕೋಟಿ ರೂ., ಮತ್ತು ಇತರರು 50 ಕೋಟಿ ರೂ. ನೀಡಿದ್ದಾರೆ. ಕಳೆದ ವರ್ಷ ಮಾರ್ಚ್ 31 ರ ಹೊತ್ತಿಗೆ ಬಿಜೆಪಿ ಕೈಯಲ್ಲಿ 109.2 ಕೋಟಿ ರೂ., ಬ್ಯಾಂಕ್‌ಗಳಲ್ಲಿ 1,627.2 ಕೋಟಿ ರೂ. ಮತ್ತು ಸ್ಥಿರ ಠೇವಣಿ ರೂಪದಲ್ಲಿ 5,377.3 ಕೋಟಿ ರೂ. ಇತ್ತು.