Sunday, June 23, 2024

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣದಲ್ಲಿ ಬಿಜೆಪಿಗೆ ಪ್ರಥಮ ಸ್ಥಾನ! -ಎಡಿಆರ್‌ ವರದಿ: ಕರ್ನಾಟಕದಲ್ಲಿ ಯಾರು ವಿಜೇತರು?

ಬೆಂಗಳೂರು, ಅಕ್ಟೋಬರ್‌.06:  ಒಟ್ಟು 107 ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿದ್ದು, ಅವರಲ್ಲಿ  ಸುಮಾರು 40% ಮಂದಿ ಬಿಜೆಪಿಯವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

Association of Democratic Reforms (ADR) ಮತ್ತು National Election Watch (New) ತಯಾರಿಸಿರುವ ಈ ವರದಿ ಅಕ್ಟೋಬರ್‌ 3, ಮಂಗಳವಾರದಂದು ಬಿಡುಗಡೆಯಾಗಿದ್ದು, ಇದನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ಹಾಲಿ ಸಂಸದ, ಶಾಸಕರು ಸಲ್ಲಿಸಿರುವ ಅಫಿಡವಿಟ್‌ನ ಮಾಹಿತಿಗಳಿಂದ ತಯಾರು ಮಾಡಲಾಗಿದೆ.  

ವರದಿಯನ್ನು ಇಲ್ಲಿ ಓದಿ: Analysis of Sitting MPs/MLAs with Declared Cases Related to Hate Speech

ಭಾರತೀಯ ಕಾನೂನಿನಲ್ಲಿ ದ್ವೇಷಕಾರಿ ಭಾಷಣಕ್ಕೆ ಸಂಬಂಧ ಪಟ್ಟ ಯಾವುದೇ ವ್ಯಾಖ್ಯಾನಗಳಿಲ್ಲ. ಆದರೆ ಕಾನೂನು ಆಯೋಗದ ವರದಿ ಸಂಖ್ಯೆ 267 ರ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(A), 153(B), 295(A), 298, 505(1) ಮತ್ತು 505 (2) ದ್ವೇಷದ ಭಾಷಣಕ್ಕೆ ಸಂಬಂಧಿಸಿದೆ. ಅಲ್ಲದೇ ಸೆಕ್ಷನ್ 8, ಸೆಕ್ಷನ್ 123 (3A) ಮತ್ತು ಸೆಕ್ಷನ್ 125 ಸೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್, 1951‌ ಮೂಲಕ ದ್ವೇಷ ಭಾಷಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಕಾನೂನು ಆಯೋಗದ ವರದಿ-267ಯನ್ನು ಇಲ್ಲಿ ಓದಿ: Law Commission Report No. 267- on Hate Speech

ಏನಿದೆ ವರದಿಯಲ್ಲಿ?

ಎಡಿಆರ್‌ ವರದಿಯ ಪ್ರಕಾರ, ಒಟ್ಟು 763 ಹಾಲಿ ಸಂಸದರಲ್ಲಿ 33 ಮತ್ತು ಒಟ್ಟು 4,005 ಹಾಲಿ ಶಾಸಕರ ಪೈಕಿ 74 ಮಂದಿ ತಮ್ಮ ಅಫಿಡವಿಟ್‌ನಲ್ಲಿ ದ್ವೇಷ ಭಾಷಣಕ್ಕೆ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಬಿಜೆಪಿಯೇ ಇಂತಹ ಹೆಚ್ಚು ಶಾಸಕ ಹಾಗೂ ಸಂಸದರನ್ನು ಹೊಂದಿದೆ.

ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿರುವ 33 ಹಾಲಿ ಸಂಸದರ ಪೈಕಿ 22 ಮಂದಿ ಬಿಜೆಪಿಯವರೇ ಆಗಿದ್ದಾರೆ.

ಇತರ ಪಕ್ಷಗಳ ಸಂಸದರ ಪೈಕಿ ಕಾಂಗ್ರೆಸ್‌ನ ಇಬ್ಬರು, ಆಮ್ ಆದ್ಮಿ ಪಕ್ಷ (AAP), AIMIM, AIUDF, DMK, MDMK , ಪಟ್ಟಾಲಿ ಮಕ್ಕಳ್ ಕಚ್ಚಿ, ಶಿವಸೇನೆ (ಉದ್ಧವ್ ಠಾಕ್ರೆ), ವಿಡುತಲೈ ಚಿರುತೈಗಲ್ ಕಚ್ಚಿಯ ತಲಾ ಒಬ್ಬರು ಮತ್ತು ಮತ್ತು ಒಬ್ಬ ಸ್ವತಂತ್ರ ಸಂಸದನ ಮೇಲೆ ಈ ಪ್ರಕರಣ ದಾಖಲಾಗಿದೆ.

74 ಶಾಸಕರ ಪೈಕಿ 20 ಮಂದಿ ಬಿಜೆಪಿಯವರು, ಕಾಂಗ್ರೆಸ್‌ನ 13, ಎಎಪಿಯ 6, ಸಮಾಜವಾದಿ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ತಲಾ 5, ಡಿಎಂಕೆ ಮತ್ತು ಆರ್‌ಜೆಡಿಯ ತಲಾ 4, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಮೂರು ಶಾಸಕರ ಮೇಲೆ ದ್ವೇಷ ಭಾಷಣದ ಕೇಸ್‌ ದಾಖಲಾಗಿದೆ.

AIUDFನ ಇಬ್ಬರು ಮತ್ತು AIMIM, CPI(M), NCP, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ, ಟಿಡಿಪಿ, ಟಿಪ್ರ ಮೋಥಾ ಪಾರ್ಟಿ ಮತ್ತು ಬಿಆರ್‌ಎಸ್‌ನ ತಲಾ ಒಬ್ಬರ ಹಾಗೂ ಇಬ್ಬರು ಸ್ವತಂತ್ರ ಶಾಸಕರ ವಿರುದ್ಧವೂ ದ್ವೇಷ ಭಾಷಣದ ಪ್ರಕರಣಗಳಿವೆ.

ಯಾವ ರಾಜ್ಯಕ್ಕೆ ಪ್ರಥಮ ಸ್ಥಾನ?

ದ್ವೇಷಕಾರುವ ಭಾಷಣ ಮಾಡುವ ಹೆಚ್ಚು ಸಂಸದರನ್ನು ಹೊಂದಿರುವ ಉತ್ತರ ಪ್ರದೇಶ ಪ್ರಥಮ ಸ್ಥಾನವನ್ನು ಪಡೆದಿದೆ. ಇಲ್ಲಿನ ಏಳು ಹಾಲಿ ಸಂಸದರ ಮೇಲೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ದ್ವಿತೀಯ ಸ್ಥಾನ ಪಡೆದಿರುವ ತಮಿಳುನಾಡಿನ ನಾಲ್ಕು ಸಂಸದರ, ಬಿಹಾರ, ಕರ್ನಾಟಕ ಮತ್ತು ತೆಲಂಗಾಣದ ತಲಾ ಮೂರು ಸಂಸದರ ಮೇಲೆ ಈ ಕೇಸುಗಳಿವೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಸಂಸದರಿದ್ದು, ಈ ರಾಜ್ಯಗಳು ತೃತೀಯ ಸ್ಥಾನ ಪಡೆದಿವೆ.  ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್‌ನಿಂದ ತಲಾ ಒಬ್ಬ ಸಂಸದರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದ್ವೇಷ ಕಾರುವ ಭಾಷಣ ಮಾಡುವ ಶಾಸಕರ ಪೈಕಿ ತಲಾ ಒಂಬತ್ತು ಮಂದಿ ಬಿಹಾರ ಮತ್ತು ಉತ್ತರ ಪ್ರದೇಶದವರಾಗಿದ್ದು, ಈ ರಾಜ್ಯಗಳು ಶಾಸಕರ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದಿವೆ.

ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದ ಆರು ಶಾಸಕರು ತಮ್ಮ ರಾಜ್ಯಗಳನ್ನು ದ್ವಿತೀಯ ಸ್ಥಾನಕ್ಕೆ ತಂದಿದ್ದಾರೆ, ಅಸ್ಸಾಂ ಮತ್ತು ತಮಿಳುನಾಡಿನ ತಲಾ ಐವರು ಹಾಗೂ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳದ ತಲಾ ನಾಲ್ಕು ಜನ ಶಾಸಕರು ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಜಾರ್ಖಂಡ್ ಮತ್ತು ಉತ್ತರಾಖಂಡದಿಂದ ತಲಾ ಮೂವರು ಶಾಸಕರು, ಕರ್ನಾಟಕ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರದ ತಲಾ ಇಬ್ಬರು ಶಾಸಕರು ಹಾಗೂ ಮಧ್ಯಪ್ರದೇಶ, ಒಡಿಶಾದ ತಲಾ ಓರ್ವ ಶಾಸಕರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಫಿಡವಿಟ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.

ಎಡಿಆರ್‌ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ದ್ವೇಷ ಭಾಷಣದ ಪ್ರಕರಣವನ್ನು ಹೊಂದಿರುವ ಒಟ್ಟು 480 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗಳು, ಲೋಕಸಭೆ ಮತ್ತು ರಾಜ್ಯಸಭೆಯ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ.

“ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಮತೀಯ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯಗಳನ್ನು ಎಸಗುವ ಆರೋಪ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಪಕ್ಷಗಳು ಗುಂಪುಗಳ ನಡುವೆ ಹಿಂಸಾಚಾರ – ಕೋಮುಗಲಭೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ,” ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ ದ್ವೇಷ ಭಾಷಣ ಸ್ಪರ್ಧೆಯ ವಿಜೇತರು ಯಾರ್ಯಾರು?

ಕರ್ನಾಟಕದಲ್ಲಿ ಕಾರ್ಕಳ ಶಾಸಕ ವಿ ಸುನೀಲ್‌ ಕುಮಾರ್‌ ಅವರ ಮೇಲೆ ದ್ವೇಷಕಾರಿ ಭಾಷಣಕ್ಕಾಗಿ IPC Sections – 153A, 505A ಅಡಿಯಲ್ಲಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (FIR No. – Crime No.16/2018)

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರ ಮೇಲೆ ಎಂಟು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಶ್ಲೀಲ ಪುಸ್ತಕ, ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ IPC Section-292, ಮಹಿಳೆಯ ಮೇಲೆ ಹಲ್ಲೆ IPC Section-354B, ಲೈಂಗಿಕ ದೌರ್ಜನ್ಯ IPC Section-354A, ಮೋಸ IPC Section420, ಫೋರ್ಜರಿ IPC Section-468, ಲಂಚ IPC Section-171B ಇತ್ಯಾದಿ ಕೇಸುಗಳೂ ಮುನಿರತ್ನ ಮೇಲೆ ದಾಖಲಾಗಿವೆ.

 “ದ್ವೇಷ ಭಾಷಣವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಂಕೀರ್ಣ ಸವಾಲು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸಲು ಐಪಿಸಿಯಲ್ಲಿ ಹೊಸ ನಿಬಂಧನೆಗಳನ್ನು ಸೇರಿಸುವ ಅಗತ್ಯವಿದೆ. IPC, 1860 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 (the Code of Criminal Procedure, 1973) ಗೆ ತಿದ್ದುಪಡಿಗಳು, ಕೆಲವು ಪ್ರಕರಣಗಳಲ್ಲಿ ಹಿಂಸಾಚಾರದ ಪ್ರಚೋದನೆಯನ್ನು ‘ದ್ವೇಷಕ್ಕೆ ಪ್ರಚೋದನೆಯನ್ನು ನಿಷೇಧಿಸುವುದು – Prohibiting incitement to hatred’ ಎಂಬ ಹೊಸ ನಿಬಂಧನೆಗಳನ್ನು ಸೇರಿಸುವ ಮೂಲಕ IPC ಸೆಕ್ಷನ್ 505 ಅನ್ನು ಅನುಸರಿಸಿ, ಮತ್ತು ಅದಕ್ಕೆ ಅನುಗುಣವಾಗಿ CrPC ಯ ಮೊದಲ ಪರಿಚ್ಛೇದದಲ್ಲಿ ತಿದ್ದುಪಡಿ ಮಾಡಬೇಕು,” ಎಂಬ ಕಾನೂನು ಆಯೋಗದ ವರದಿಯ ಶಿಫಾರಸ್ಸನ್ನು ಎಡಿಆರ್‌ ವರದಿ ಒಪ್ಪಿಕೊಂಡಿದೆ.

ಚುನಾವಣೆಯ ಮೊದಲು, ಚುನಾವಣಾ ಸಮಯದಲ್ಲಿ ಮತ್ತು ನಂತರ ದ್ವೇಷಪೂರಿತ ಭಾಷಣ ಮಾಡುವ ಅಭ್ಯರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. “ಕಾನೂನುಬಾಹಿರ” ಹೇಳಿಕೆಗಳನ್ನು ನೀಡಲು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅದು ಎಡಿಆರ್ ಹೇಳಿದೆ. “ಆದ್ದರಿಂದ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿರುವ ಇಂತಹ ಕಾನೂನುಬಾಹಿರ ಹೇಳಿಕೆಗಳನ್ನು ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಬೇಕು” ಎಂದು ಎಡಿಆರ್ ಶಿಫಾರಸು ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು