ದೆಹಲಿ: ಪ್ರಧಾನಿ ಮೋದಿ ತನ್ನನ್ನು ಭ್ರಷ್ಟ ಎಂದು ಬಿಂಬಿಸಲು ಸಂಚು ಹೂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“ಬಿಜೆಪಿಯವರು ಉಚಿತ ಶಿಕ್ಷಣ, ಔಷಧ, ವಿದ್ಯುತ್ ಕೊಟ್ಟ ನನ್ನನ್ನು ಕಳ್ಳ ಎನ್ನುತ್ತಾರೆ, ಈಗ ನೀವೇ ತೀರ್ಮಾನಿಸಿ ಇದನ್ನೆಲ್ಲ ಕೊಟ್ಟ ನಾನು ಕಳ್ಳನೋ ಅಥವಾ ಸಂಚು ಮಾಡಿ ನನ್ನನ್ನು ಜೈಲಿಗೆ ಕಳುಹಿಸಿದವರು ಕಳ್ಳರೋ?” ಎಂದು ಕೇಜ್ರಿವಾಲ್ ಕೇಳಿದ್ದಾರೆ.
ಇಲ್ಲಿನ ಜಂತರ್ ಮಂತರ್ ನಲ್ಲಿ ಭಾನುವಾರ ನಡೆದ ‘ಜನತಾಕಿ ಅದಾಲತ್’ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಮಾತನಾಡಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ. ನಾನು ಮತ್ತು (ಎಎಪಿ ನಾಯಕ) ಮನೀಶ್ ಸಿಸೋಡಿಯಾ ಅವರನ್ನು ಭ್ರಷ್ಟ ಎಂದು ಸಾಬೀತುಪಡಿಸಲು ಪ್ರಧಾನಿ ಪಿತೂರಿ ನಡೆಸಿದ್ದಾರೆ” ಎಂದು ಆರೋಪಿಸಿದರು.
ಪ್ರಧಾನಿ ನಮ್ಮ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದ ಅವರು ʼಸಿಎಂ ಕುರ್ಚಿಯ ಆಸೆ ಇಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ. ಅವರು ಹಣ ಸಂಪಾದಿಸಲು ಬಂದಿಲ್ಲ, ದೇಶದ ರಾಜಕೀಯವನ್ನು ಬದಲಾಯಿಸಲು ಬಂದಿದ್ದೇನೆ ಎಂದು ಹೇಳಿದರು.
‘ಸಿಎಂ ಕುರ್ಚಿಯ ಆಸೆ ಇಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ. ನಾನು ಹಣ ಸಂಪಾದಿಸಲು ಬಂದಿಲ್ಲ, ದೇಶದ ರಾಜಕೀಯವನ್ನು ಬದಲಾಯಿಸಲು ಬಂದಿದ್ದೇನೆ. ಹತ್ತು ವರ್ಷ ಸಿಎಂ ಆಗಿದ್ದರೂ ದೆಹಲಿಯಲ್ಲಿ ಸ್ವಂತ ಮನೆ ಇಲ್ಲ. ಆದರೂ ನನ್ನನ್ನು ಬಿಜೆಪಿ ಭ್ರಷ್ಟ ಎಂದು ಕರೆದಿದೆʼ ಎಂದು ನೋವು ವ್ಯಕ್ತಪಡಿಸಿದರು.
‘ಅರವಿಂದ್ ಕೇಜ್ರಿವಾಲ್ ಅಪ್ರಾಮಾಣಿಕರಾಗಿದ್ದರೆ, ಜನರಿಗೆ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುತ್ತಿದ್ದರೇ? ಮಕ್ಕಳಿಗಾಗಿ ಶಾಲೆಗಳನ್ನು ನಿರ್ಮಿಸಿದವರು ಯಾರು? ಕೇಜ್ರಿವಾಲ್ ಭ್ರಷ್ಟನಾಗಿದ್ದರೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸುತ್ತಿದ್ದರೆ?’ ಎಂದು ಕೇಳಿದರು. 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅವರು ಯಾವುದೇ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ವಿದ್ಯುತ್ ಅಥವಾ ಉಚಿತ ಬಸ್ ಪ್ರಯಾಣವನ್ನು ನೀಡಿದ್ದಾರೆಯೇ? ಎಂದೂ ಅವರು ಕೇಳಿದರು.
ಆರ್‌ಎಸ್‌ಎಸ್‌ಗೆ ಐದು ಪ್ರಶ್ನೆಗಳು
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೇಜ್ರಿವಾಲ್ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ”ಪ್ರಧಾನಿ ಮೋದಿ ಅವರು ದೇಶದ ವಿವಿಧ ಪಕ್ಷಗಳಿಗೆ ಬೆದರಿಕೆ ಹಾಕುತ್ತಿದ್ದಾರೆ, ಇಡಿ ಮತ್ತು ಸಿಬಿಐ ಬಳಸಿ ಬೆದರಿಕೆ ಹಾಕುವ ಮೂಲಕ ಪಕ್ಷಗಳನ್ನು ಒಡೆಯುತ್ತಿದ್ದಾರೆ ಮತ್ತು ಸರ್ಕಾರಗಳನ್ನು ಪತನಗೊಳಿಸುತ್ತಿದ್ದಾರೆ. ಇದು ಸರಿಯೇ?
ಮೋದಿ ಯಾರನ್ನು ಭ್ರಷ್ಟರು ಎಂದು ಹೇಳುತ್ತಾರೋ ಅವರನ್ನೇ ಪಕ್ಷಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅಂತಹ ರಾಜಕೀಯವನ್ನು ನೀವು ಒಪ್ಪುತ್ತೀರಾ? ಬಿಜೆಪಿ ಹುಟ್ಟಿದ್ದು ಆರ್‌ಎಸ್‌ಎಸ್‌ನಿಂದ. ಮೋದಿಯವರ ತಪ್ಪು ನೀತಿಗಳನ್ನು ತಡೆಯಲು ಆರೆಸ್ಸೆಸ್ ಎಂದಾದರೂ ಪ್ರಯತ್ನಿಸಿದೆಯೇ?
ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ನ ಅಗತ್ಯವಿಲ್ಲ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಮಾತೃಸಂಸ್ಥೆಯ ಬಗ್ಗೆ ಪಕ್ಷ ತನ್ನ ಅಸಡ್ಡೆಯನ್ನು ವ್ಯಕ್ತಪಡಿಸಿದಾಗ ನಿಮಗೆ ದುಃಖವಾಗುವುದಿಲ್ಲವೇ? 75 ವರ್ಷಕ್ಕೆ ನಿವೃತ್ತಿಯ ನಿಯಮವನ್ನು ನಿಮ್ಮವರು (ಬಿಜೆಪಿ) ಮಾಡಿದ್ದಾರೆ. ಈ ನಿಬಂಧನೆ ಮೋದಿಗೆ ಅನ್ವಯಿಸುವುದಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಅಡ್ವಾಣಿಗೆ ಅನ್ವಯಿಸಿದ ಈ ನಿಯಮ ಮೋದಿಗೆ ಏಕೆ ಅನ್ವಯಿಸುವುದಿಲ್ಲ?” ಎಂದು ಕೇಳಿದರು.
ಬಿಜೆಪಿ ಸೇರಲು ಆಫರ್: ಸಿಸೋಡಿಯಾ
ಇಡಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 10 ಲಕ್ಷ ರೂ.ಗಳನ್ನು ಫ್ರೀಝ್ ಮಾಡಿದ ಕಾರಣ, ತನ್ನ ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಹಾಯಕ್ಕಾಗಿ ಭಿಕ್ಷೆ ಬೇಡಬೇಕಾಯಿತು ಎಂದು ಹಿರಿಯ ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದುಃಖ ವ್ಯಕ್ತಪಡಿಸಿದರು.
ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಒಂದೂವರೆ ವರ್ಷ ಜೈಲು ವಾಸ ಅನುಭವಿಸಿ ಹಲವು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದಾಗಿ ಅವರು ಹೇಳಿದರು. ಬಿಜೆಪಿಗೆ ಬರುವಂತೆ ಹಲವು ಆಫರ್‌ಗಳು ಬಂದಿದ್ದು, ಪಕ್ಷ ಬದಲಾಯಿಸದಿದ್ದರೆ ಜೈಲಿನಲ್ಲಿಯೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದೂ ಆರೋಪಿಸಿದರು.
ತಾನು ಕೂಡ ಚುನಾವಣೆಯ ಸಾರ್ವಜನಿಕ ತೀರ್ಪಿನ ನಂತರವೇ ಕೇಜ್ರಿವಾಲ್ ಅವರಂತೆ ದೆಹಲಿ ಸರ್ಕಾರದಲ್ಲಿ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅತಿಶಿ ಮಾರ್ಗೇನಾ, ಸಚಿವರಾದ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಮುಖೇಶ್ ಅಹ್ಲಾವತ್, ಇಮ್ರಾನ್ ಹುಸೇನ್, ಆಪ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.