Home ದೇಶ ವಿಕಲಚೇತನರ ಪಿಂಚಣಿ ಮೇಲಿನ ತೆರಿಗೆ ರದ್ದುಪಡಿಸಿ: ಹಣಕಾಸು ಸಚಿವೆ ಸೀತಾರಾಮನ್‌ಗೆ ರಾಹುಲ್ ಗಾಂಧಿ ಪತ್ರ

ವಿಕಲಚೇತನರ ಪಿಂಚಣಿ ಮೇಲಿನ ತೆರಿಗೆ ರದ್ದುಪಡಿಸಿ: ಹಣಕಾಸು ಸಚಿವೆ ಸೀತಾರಾಮನ್‌ಗೆ ರಾಹುಲ್ ಗಾಂಧಿ ಪತ್ರ

0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಸಶಸ್ತ್ರ ಪಡೆಗಳ ವಿಕಲಚೇತನ ಪಿಂಚಣಿ (Disability Pension) ಮೇಲೆ ವಿಧಿಸಲಾಗಿರುವ ಹೊಸ ಆದಾಯ ತೆರಿಗೆಯನ್ನು ಹಿಂಪಡೆಯುವಂತೆ ಮತ್ತು ಮಾಜಿ ಸೈನಿಕರ ಆರೋಗ್ಯ ಯೋಜನೆಗೆ (ECHS) ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಮಾಜಿ ಸೈನಿಕರ ನಿಯೋಗವೊಂದನ್ನು ಭೇಟಿ ಮಾಡಿದ್ದ ರಾಹುಲ್, ಸರ್ಕಾರ ತಮ್ಮನ್ನು ಕೈಬಿಟ್ಟಿದೆ ಎಂಬ ಸೈನಿಕರ ಅಳಲು ಕೇಳಿ ತಮಗೆ ನೋವಾಗಿದ್ದು, ದೇಶ ಸೇವೆ ಮಾಡಿದವರಿಗೆ ಸಲ್ಲಬೇಕಾದ ಗೌರವ ಮತ್ತು ಬೆಂಬಲದ ಬಗ್ಗೆ ಸಚಿವರು ಸಹಮತ ವ್ಯಕ್ತಪಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಯು (ECHS) ಸದ್ಯ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಸುಮಾರು 12,000 ಕೋಟಿ ರೂಪಾಯಿಗಳ ವೈದ್ಯಕೀಯ ಬಿಲ್‌ಗಳು ಬಾಕಿ ಉಳಿದಿವೆ ಎಂದು ರಾಹುಲ್ ದೂರಿದ್ದಾರೆ. ಬಜೆಟ್ ಹಂಚಿಕೆಯು ಅಗತ್ಯಕ್ಕಿಂತ ಶೇ. 30 ರಷ್ಟು ಕಡಿಮೆಯಿರುವುದರಿಂದ ಮತ್ತು ಬಿಲ್‌ಗಳ ಪಾವತಿಯಾಗದ ಕಾರಣ ಹಲವು ಆಸ್ಪತ್ರೆಗಳು ಈ ಯೋಜನೆಯಿಂದ ಹಿಂದೆ ಸರಿಯುತ್ತಿವೆ.

ಇದರಿಂದಾಗಿ ನಿವೃತ್ತ ಸೈನಿಕರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೂ ತಮ್ಮ ಸ್ವಂತ ಹಣದಿಂದ ಚಿಕಿತ್ಸೆ ಪಡೆಯುವ ಅಥವಾ ಚಿಕಿತ್ಸೆಯನ್ನು ವಿಳಂಬ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹಣಕಾಸು ಮಸೂದೆ 2026ರಲ್ಲಿ ಪ್ರಸ್ತಾಪಿಸಲಾದ ವಿಕಲಚೇತನ ಪಿಂಚಣಿ ಮೇಲಿನ ತೆರಿಗೆಯನ್ನು ರಾಹುಲ್ ತೀವ್ರವಾಗಿ ಖಂಡಿಸಿದ್ದಾರೆ. ಸೈನಿಕರು ಗಾಯಗೊಂಡ ನಂತರವೂ ಸೇವೆಯಲ್ಲಿ ಮುಂದುವರಿದರೆ ಅಂತಹವರ ವಿಕಲಚೇತನ ಪಿಂಚಣಿಯ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.

1922ರ ನಂತರ ಇದೇ ಮೊದಲ ಬಾರಿಗೆ ಇಂತಹ ಪಿಂಚಣಿಯ ಮೇಲೆ ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಆದಾಯ ಎಂದು ಪರಿಗಣಿಸಬಾರದು. ಗಾಯಗೊಂಡಿದ್ದರೂ ನಿಸ್ವಾರ್ಥವಾಗಿ ದೇಶ ಸೇವೆ ಮಾಡುವವರಿಗೆ ಈ ರೀತಿ ತೆರಿಗೆ ವಿಧಿಸುವುದು ಅವರಿಗೆ ಮಾಡುವ ಅವಮಾನ ಎಂದು ಅವರು ಕಿಡಿಕಾರಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಬಾಕಿ ಇರುವ ಎಲ್ಲಾ ಇಸಿಎಚ್‌ಎಸ್ (ECHS) ಬಾಧ್ಯತೆಗಳನ್ನು ತಕ್ಷಣವೇ ಚುಕ್ತಗೊಳಿಸಬೇಕು ಮತ್ತು ವಿಕಲಚೇತನ ಪಿಂಚಣಿಗಳ ಮೇಲಿನ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿಯನ್ನು ಮೊದಲಿನಂತೆ ಮರುಸ್ಥಾಪಿಸಬೇಕು ಎಂದು ಅವರು ಹಣಕಾಸು ಸಚಿವರಿಗೆ ಆಗ್ರಹಿಸಿದ್ದಾರೆ. ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದವರಿಗೆ ಸಂಕಷ್ಟದ ಸಮಯದಲ್ಲಿ ಬೆಂಬಲ ನೀಡುವ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

You cannot copy content of this page

Exit mobile version