Home ದೇಶ ಅತ್ಯಂತ ಅಪಾಯಕಾರಿ ಕಳೆನಾಶಕ ಪ್ಯಾರಾಕ್ವಾಟ್ ದೇಶಾದ್ಯಂತ ಸಂಪೂರ್ಣ ನಿಷೇಧ: ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಅತ್ಯಂತ ಅಪಾಯಕಾರಿ ಕಳೆನಾಶಕ ಪ್ಯಾರಾಕ್ವಾಟ್ ದೇಶಾದ್ಯಂತ ಸಂಪೂರ್ಣ ನಿಷೇಧ: ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

0

ದೆಹಲಿ: ರೈತರು ಕೃಷಿಯಲ್ಲಿ ವ್ಯಾಪಕವಾಗಿ ಬಳಸುವ ಅತ್ಯಂತ ಪ್ರಾಣಾಪಾಯಕಾರಿ ಕಳೆನಾಶಕವಾದ ‘ಪ್ಯಾರಾಕ್ವಾಟ್’ (Paraquat) ಬಳಕೆಯನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಹೊಸ ಆದೇಶದ ಪ್ರಕಾರ, ಪ್ಯಾರಾಕ್ವಾಟ್ ಡೈಕ್ಲೋರೈಡ್‌ನ (Paraquat Dichloride) ಆಮದು, ಉತ್ಪಾದನೆ, ಮಾರಾಟ, ಸಾಗಣೆ, ವಿತರಣೆ ಮತ್ತು ಬಳಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಏನಿದು ಪ್ಯಾರಾಕ್ವಾಟ್? ಇದ್ಯಾಕೆ ಇಷ್ಟು ಅಪಾಯಕಾರಿ?

ಪ್ಯಾರಾಕ್ವಾಟ್ ಕೃಷಿ ಭೂಮಿಯಲ್ಲಿ ಕಳೆಗಳನ್ನು ನಿಯಂತ್ರಿಸಲು ಬಳಸುವ ಅತ್ಯಂತ ತೀವ್ರ ಮತ್ತು ಪ್ರಬಲವಾದ ರಾಸಾಯನಿಕ ದ್ರವವಾಗಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಪ್ರತಿವಿಷ ಅಥವಾ ವಿರೇಚಕ ಮದ್ದು (Antidote) ಇಲ್ಲದಿರುವುದು ಇದರ ಅತ್ಯಂತ ಭಯಾನಕ ಅಂಶವಾಗಿದೆ. ಒಂದು ವೇಳೆ ಈ ರಾಸಾಯನಿಕವು ಆಕಸ್ಮಿಕವಾಗಿ ಅಥವಾ ಯಾವುದೇ ಕಾರಣದಿಂದ ಮನುಷ್ಯನ ದೇಹವನ್ನು ಪ್ರವೇಶಿಸಿದರೆ, ಅದು ನೇರವಾಗಿ ಶ್ವಾಸಕೋಶದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ.

ಶ್ವಾಸಕೋಶಗಳು ಸಂಪೂರ್ಣವಾಗಿ ಹಾನಿಗೊಳಗಾಗಿ ಉಸಿರಾಡಲು ಸಾಧ್ಯವಾಗದ ಸ್ಥಿತಿ ತಲುಪಿ, ಸಂತ್ರಸ್ತರು ಅತಿ ಘೋರವಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಕೃಷಿ ವಲಯದಲ್ಲಿ ಇದರ ಅಡ್ಡಪರಿಣಾಮಗಳಿಂದಾಗಿ ಹಲವು ಜೀವಗಳು ಬಲಿಯಾಗಿದ್ದ ಹಿನ್ನೆಲೆಯಲ್ಲಿ ಇದನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಕೇಂದ್ರ ಸರ್ಕಾರ ಹೊರಡಿಸಿರುವ ಈ ಕರಡು ಅಧಿಸೂಚನೆಯ ಕುರಿತು ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ 2026 ರ ಜುಲೈ 13 ರಿಂದ ಅನ್ವಯವಾಗುವಂತೆ 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿ ಮುಗಿದ ನಂತರ ಕೇಂದ್ರ ಸರ್ಕಾರವು ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಿದ್ದು, ಅದರ ಬೆನ್ನಲ್ಲೇ ದೇಶದಲ್ಲಿ ಪ್ಯಾರಾಕ್ವಾಟ್ ಹೊಂದಿರುವ ಎಲ್ಲಾ ನೋಂದಣಿ ಪ್ರಮಾಣಪತ್ರಗಳನ್ನು ಅಧಿಕೃತವಾಗಿ ರದ್ದುಗೊಳಿಸಲಾಗುತ್ತದೆ.

You cannot copy content of this page

Exit mobile version