ದೆಹಲಿ: ಹೊರ್ಮುಜ್ ಜಲಸಂಧಿಯ ಮೂಲಕ ಯುಎಇ (UAE) ಧ್ವಜದೊಂದಿಗೆ ಸಂಚರಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಮಂಗಳವಾರ ಇರಾನ್ ಕ್ರೂಸ್ ಕ್ಷಿಪಣಿಗಳ ಮೂಲಕ ಭೀಕರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಮಂದಿ ಭಾರತೀಯರು ಸೇರಿದಂತೆ ಎಂಟು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಇರಾನ್‌ನ ಈ ಉದ್ಧಟತನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ನವದೆಹಲಿಯಲ್ಲಿರುವ ಇರಾನ್ ರಾಜತಾಂತ್ರಿಕರಿಗೆ ತುರ್ತು ಸಮನ್ಸ್ ಜಾರಿ ಮಾಡಿದೆ.
ಯುಎಇ ರಕ್ಷಣಾ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಒಮಾನ್ ಪ್ರಾದೇಶಿಕ ಜಲಪ್ರದೇಶದ ವ್ಯಾಪ್ತಿಗೆ ಬರುವ ಹೊರ್ಮುಜ್ ಜಲಸಂಧಿಯ ದಕ್ಷಿಣ ಜಲಮಾರ್ಗದ ಮೂಲಕ ಯುಎಇ ದೇಶಕ್ಕೆ ಸೇರಿದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಎಂಬ ಎರಡು ತೈಲ ಟ್ಯಾಂಕರ್‌ಗಳು ಚಲಿಸುತ್ತಿದ್ದವು. ಈ ವೇಳೆ ಇರಾನ್ ಸೇನೆಯು ಕ್ರೂಸ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಈ ದಾಳಿಯ ತೀವ್ರತೆಗೆ ‘ಮೊಂಬಾಸಾ’ ನೌಕೆಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಭಾರತೀಯ ನಾವಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದಾಳಿಯಲ್ಲಿ ಇತರ ಆರು ಮಂದಿ ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳು ಗಾಯಗೊಂಡಿದ್ದು, ಅವರಲ್ಲಿ ನಾಲ್ವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕ್ಷಿಪಣಿ ದಾಳಿಯಿಂದಾಗಿ ಎರಡೂ ನೌಕೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರಿ ಪ್ರಮಾಣದ ಹಾನಿಯಾಗಿದೆ. ಇತ್ತ ಭಾರತೀಯ ನಾವಿಕನ ಸಾವಿನ ಬಗ್ಗೆ ಮಾಹಿತಿ ಲಭ್ಯವಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಗಾಯಗೊಂಡ ನಾವಿಕರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಇರಾನ್‌ನ ಡೆಪ್ಯುಟಿ ಚೀಫ್ ಆಫ್ ಮಿಷನ್ ಮೊಹಮ್ಮದ್ ಜಾವೇದ್ ಹೊಸೇನಿ ಸೇರಿದಂತೆ ಪ್ರಮುಖ ರಾಜತಾಂತ್ರಿಕರಿಗೆ ಸಮನ್ಸ್ ನೀಡಿ ಕಡಕ್ ಎಚ್ಚರಿಕೆ ನೀಡಿದೆ.
ಇದುವರೆಗೆ 13 ಭಾರತೀಯರ ಸಾವು
ಫೆಬ್ರವರಿ 28 ರಿಂದ ಆರಂಭವಾಗಿರುವ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಇದುವರೆಗೆ ಒಟ್ಟು 13 ಮಂದಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಮಂಗಳವಾರ ತಿಳಿಸಿವೆ. ಜಾಗತಿಕ ಇಂಧನ ಸಾಗಣೆಗೆ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮತ್ತು ಯಾವುದೇ ಅಡೆತಡೆಗಳಿಲ್ಲದ ನೌಕಾಯಾನ ಮುಂದುವರಿಯಬೇಕು ಎಂದು ಭಾರತ ಕರೆ ನೀಡಿದೆ. ಈ ವಾರದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು, ವಾಣಿಜ್ಯ ನೌಕೆಗಳ ಮೇಲಿನ ದಾಳಿ ಮತ್ತು ಭಾರತೀಯ ನಾವಿಕನ ಸಾವಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
