ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅನ್ವಯ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯನ್ನು (ಮೂರನೇ ಭಾಷೆ) ಕಡ್ಡಾಯ ವಿಷಯವನ್ನಾಗಿ ಮಾಡಲಾಗುವುದು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಮಂಗಳವಾರ ಪ್ರಕಟಿಸಿದೆ.
10 ನೇ ತರಗತಿಯ ಮುಖ್ಯ ಬೋರ್ಡ್ ಪರೀಕ್ಷೆಯಲ್ಲಿ ಮೂರನೇ ಭಾಷೆಯ ವಿಷಯವನ್ನು ಸೇರಿಸದೇ ಇದ್ದರೂ ಸಹ, 2027-28 ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಲಾ ಮಟ್ಟದ ಆಂತರಿಕ ಮೌಲ್ಯಮಾಪನದಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ತೃತೀಯ ಭಾಷೆಯ ಆಂತರಿಕ ಮೌಲ್ಯಮಾಪನದಲ್ಲಿ ಪಾಸಾಗದ ವಿದ್ಯಾರ್ಥಿಗಳಿಗೆ ಸೆಕೆಂಡರಿ ಸ್ಕೂಲ್ ಪರೀಕ್ಷೆಯ ಉತ್ತೀರ್ಣ ಪ್ರಮಾಣಪತ್ರವನ್ನು (Pass Certificate) ವಿತರಿಸಲಾಗುವುದಿಲ್ಲ ಎಂದು ಮಂಡಳಿ ತಿಳಿಸಿದೆ. ಈ ಪರಿಷ್ಕೃತ ನಿಯಮವು 2026-27 ರ ಶೈಕ್ಷಣಿಕ ಸಾಲಿನಲ್ಲಿ 9 ನೇ ತರಗತಿಗೆ ಹಾಗೂ 2027-28 ರ ಸಾಲಿನಲ್ಲಿ 10 ನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ.
ಆದರೆ, 2026-27 ರ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ 10 ನೇ ತರಗತಿಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಹೊಸ ನಿಯಮ ಅನ್ವಯಿಸುವುದಿಲ್ಲ. ಅವರು ಮೂರನೇ ಭಾಷೆಯನ್ನು ಕಲಿಯುವ ಅಥವಾ ಅದರಲ್ಲಿ ಅರ್ಹತೆ ಪಡೆಯುವ ಅಗತ್ಯವಿರುವುದಿಲ್ಲ. ಜುಲೈ 10 ರಂದು ಹೊರಡಿಸಲಾದ ಸಿಬಿಎಸ್‌ಇ ಸುತ್ತೋಲೆಯ ಪ್ರಕಾರ, 2027-28 ರ ಸಾಲಿನಲ್ಲಿ 10 ನೇ ತರಗತಿಗೆ ಬರುವ ವಿದ್ಯಾರ್ಥಿಗಳು ‘R3’ ಎಂದು ಗುರುತಿಸಲಾದ ಮೂರನೇ ಭಾಷೆಯ ಶಾಲಾ ಮಟ್ಟದ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಆಗ ಮಾತ್ರ ಅವರು 10 ನೇ ತರಗತಿ ಪಾಸಾದ ಸರ್ಟಿಫಿಕೇಟ್ ಪಡೆಯಲು ಅರ್ಹರಾಗುತ್ತಾರೆ. ಒಂದು ವೇಳೆ ಮೌಲ್ಯಮಾಪನದಲ್ಲಿ ವಿದ್ಯಾರ್ಥಿ ಫೇಲಾದರೆ ಅನುಸರಿಸಬೇಕಾದ ನಿಯಮವನ್ನೂ ಮಂಡಳಿ ವಿವರಿಸಿದೆ.
10 ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೂರನೇ ಭಾಷೆಯ ಆಂತರಿಕ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗದಿದ್ದರೆ, ಬೋರ್ಡ್ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗುವುದಕ್ಕಿಂತ ಮುಂಚಿತವಾಗಿಯೇ ಸಂಬಂಧಪಟ್ಟ ಶಾಲೆಯು ಆ ವಿದ್ಯಾರ್ಥಿಗೆ ಮರುಮೌಲ್ಯಮಾಪನ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಮುಖ್ಯ ಬೋರ್ಡ್ ಪರೀಕ್ಷೆಯಲ್ಲಿ ಈ ವಿಷಯದ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳದಿದ್ದರೂ, 10 ನೇ ತರಗತಿ ಪಾಸಾಗಲು ಆಂತರಿಕ ಮೌಲ್ಯಮಾಪನದಲ್ಲಿ ಅರ್ಹತೆ ಪಡೆಯುವುದು ಇನ್ಮುಂದೆ ಕಡ್ಡಾಯವಾಗಿದೆ.
