ನಾಳೆ ಸಂಸತ್ತಿನಲ್ಲಿ ಮಹತ್ವದ ವಕ್ಫ್ ಮಸೂದೆ ಮಂಡನೆ ಆಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದ್ದು, ಏಪ್ರಿಲ್ 2 ರಂದು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಿದೆ. ಹಾಗೆಯೇ ಮಂಡನೆ ಆಗಲಿರುವ ವಕ್ಫ್ ಮಸೂದೆಗೆ ಸರ್ಕಾರದ ಪರವಾಗಿ ಮತ ಚಲಾಯಿಸಲು ಸೂಚಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಇಂದು ವ್ಯವಹಾರ ಸಲಹಾ ಸಮಿತಿ(ಬಿಎಸಿ) ಸಭೆ ನಡೆದಿದ್ದು, ವಕ್ಫ್ ಮಸೂದೆಗೆ ಎಂಟು ಗಂಟೆಗಳ ಚರ್ಚೆಯನ್ನು ನಿಗದಿಪಡಿಸಲಾಗಿದೆ. ಕಾಂಗ್ರೆಸ್ 12 ಗಂಟೆಗಳ ಚರ್ಚೆಗೆ ಒತ್ತಾಯಿಸಿದೆ. ಇದು ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೇ, ವಿರೋಧ ಪಕ್ಷದವರ ಸಭಾತ್ಯಾಗಕ್ಕೆ ಕಾರಣವಾಯಿತು.
ಇತ್ತ ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ನೀಡಿದ ಮೂರು ತಿದ್ದುಪಡಿಗಳನ್ನು ಸರ್ಕಾರ ಒಪ್ಪಿಕೊಂಡಿದೆ, ಅದರ ನಂತರ ಈಗ ಟಿಡಿಪಿ ಕೂಡ ವಕ್ಫ್ ಮಸೂದೆಯನ್ನು ಬೆಂಬಲಿಸಿ ಮತ ಚಲಾಯಿಸಲಿದೆ. ನಿತೀಶ್ ಕುಮಾರ್ ಅವರ ಜೆಡಿಯು ಕೂಡ ವಕ್ಫ್ ಮಸೂದೆಯನ್ನು ಬೆಂಬಲಿಸಲಿದೆ.
ಹಾಗೆಯೇ ಜೆಡಿಯು ಸಲಹೆಗಳನ್ನು ಸರ್ಕಾರ ಒಪ್ಪಿಕೊಂಡಿರುವುದರಿಂದ, ಬಿಜೆಪಿಯ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ವಕ್ಫ್ ಮಸೂದೆಯನ್ನು ಬೆಂಬಲಿಸುತ್ತವೆ ಎಂದು ನಿರ್ಧರಿಸಲಾಗಿದೆ. ಸರ್ಕಾರವು ನಾಳೆಯೇ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಉದ್ದೇಶಿಸಿದೆ ಎಂದು ನಾಳೆ ಹೇಳಲಿದ್ದಾರೆ.
ಆದರೆ ದೇಶದ ವಿರೋಧ ಪಕ್ಷಗಳು ಮಾತ್ರ ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳು ಇಂದು ಸಭೆ ಕರೆದಿವೆ. ಇಂದು ಮುಂಜಾನೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಚರ್ಚಿಸಲಾಯಿತು.
