“..ಭಾರತದಲ್ಲಿ ಭ್ರಷ್ಟಾಚಾರದ ಕುರಿತಾದ ಚರ್ಚೆಯನ್ನು ಎರಡು ಆಯಾಮಗಳಿಂದ ನೋಡಬಹುದು. ಒಂದು ವ್ಯಕ್ತಿಗತವಾದ ನೈತಿಕ ವೈಫಲ್ಯ, ಇನ್ನೊಂದು ಭ್ರಷ್ಟಾಚಾರ ಬೇರೂರಿರುವ ಸಾಂಸ್ಕೃತಿಕ ಲಕ್ಷಣದಿಂದ ನೋಡಬಹುದು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಕರ್ನಾಟಕದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮತ್ತು ಅದೇ ವೇಳೆ ಆಪ್ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಇತರ ಎಲ್ಲಾ ಆರೋಪಿಗಳನ್ನು ವಿಶೇಷ ನ್ಯಾಯಾಲಯವು ಬಿಡುಗಡೆ ಮಾಡಿ, “ಸಿಬಿಐ” ಮತ್ತು “ಇಡಿ” ತನಿಖಾ ಸಂಸ್ಥೆಗಳಿಗೆ “ತನಿಖೆ ಮಾಡದೇ ಕತೆಕಟ್ಟಿದ್ದಕ್ಕಾಗಿ” ಯದ್ವಾತದ್ವಾ ಛೀಮಾರಿ ಹಾಕಿ, ತನಿಖಾಧಿಕಾರಿಯ ವಿರುದ್ಧವೇ ತನಿಖೆಗೆ ಆದೇಶಿದ ಹಿನ್ನೆಲೆಯಲ್ಲಿ ಅದರ ವಿವರಗಳಿಗೆ ಹೋಗದೇ- ಬರೇ ಭ್ರಷ್ಟಾಚಾರದ ಪೆಡಂಭೂತವನ್ನು ನನ್ನ ಬೊಗಸೆಗೆ ದಕ್ಕಿದ್ದರಷ್ಟರಲ್ಲಿ ತೋರಿಸುವ ಪ್ರಯತ್ನವಿದು. ಮುಂದಿನ ಎರಡು-ಮೂರು ಕಂತುಗಳಲ್ಲಿ ಭ್ರಷ್ಟಾಚಾರ ಮತ್ತು ಅದರ ಸಾಂಸ್ಥೀಕರಣ ಮತ್ತು ಜೊತೆಗೆ ಹೆಚ್ಚುವರಿಯಾಗಿ, ಬಿಜೆಪಿ ನಡೆಸುತ್ತಿರುವ ಭ್ರಷ್ಟಾಚಾರದ ಕೊಳೆಯನ್ನು ತೊಳೆಯುವ “ನೊರೇಂದ್ರ” ಪೌಡರ್ ಯುಕ್ತ “ಕಮಲ” ಬ್ರ್ಯಾಂಡಿನ ವಾಷಿಂಗ್ ಮಷಿನ್ ಫ್ರಾಂಚೈಸಿಗಳ ಬಗ್ಗೆ ಬರೆಯುತ್ತೇನೆ.
ಭಾರತದಲ್ಲಿ ಭ್ರಷ್ಟಾಚಾರದ ಕುರಿತಾದ ಚರ್ಚೆಯನ್ನು ಎರಡು ಆಯಾಮಗಳಿಂದ ನೋಡಬಹುದು. ಒಂದು ದೃಷ್ಟಿಕೋನವು ಅದನ್ನು ವ್ಯಕ್ತಿಗತವಾದ ನೈತಿಕ ವೈಫಲ್ಯವೆಂದು ನೋಡುತ್ತದೆ. ಇದರ ಕಥಾನಕದ ಪ್ರಕಾರ ಒಂದು ಕಡೆ ಒಳ್ಳೆಯ, ಪ್ರಾಮಾಣಿಕ ವ್ಯಕ್ತಿ/ರಾಜಕಾರಣಿ/ ಅಧಿಕಾರಿಗಳು ಇದ್ದರೆ, ಇನ್ನೊಂದು ಕಡೆಯಲ್ಲಿ ದುಷ್ಟ, ಅಪ್ರಾಮಾಣಿಕ, ಲಂಚಕೋರ ವ್ಯಕ್ತಿ/ ರಾಜಕಾರಣಿ/ ಅಧಿಕಾರಿಗಳು ಇರುತ್ತಾರೆ. ಇನ್ನೊಂದು ದೃಷ್ಟಿಕೋನವು ಅದನ್ನು ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಲಕ್ಷಣವೆಂದು ನೋಡುತ್ತದೆ. ಭಾರತೀಯ ಭ್ರಷ್ಟಾಚಾರ ವ್ಯವಸ್ಥೆಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು, ನಾವು ಪ್ರಾಚೀನ, ಐತಿಹಾಸಿಕವಾದ ಸಮಾಜ ಶಾಸ್ತ್ರೀಯ ಮಾದರಿಗಳು ಮತ್ತು ಆಧುನಿಕ ಅಧಿಕಾರಶಾಹಿ ಪ್ರಭುತ್ವದ ನಡುವಿನ ಧಾರ್ಮಿಕ, ಸಾಂಸ್ಕೃತಿಕ ಹೊಂದಾಣಿಕೆಗಳನ್ನು ನೋಡಬೇಕು. ಹಾಗಾಗಿ ಕೆಲವರು ಭ್ರಷ್ಟಾಚಾರವನ್ನು “ಆಳವಾಗಿ ಬೇರು ಬಿಟ್ಟಿರುವ” ವ್ಯವಸ್ಥೆ ಎಂದು ಕರೆದರೆ ಮತ್ತು ಇತರರು ಅದನ್ನು “ವ್ಯವಸ್ಥಿತವಾಗಿ ಹೆಣೆಯಲಾಗಿರುವ ಬಲೆ” ಎಂದು ಕರೆಯುತ್ತಾರೆ.
ಭ್ರಷ್ಟಾಚಾರ ಎಂಬುದು ಜಾಗತಿಕ ವಿದ್ಯಮಾನವಾಗಿದ್ದು, ರಾಜಸತ್ತೆಗಳು ಮತ್ತು ಪಾಳೆಯಗಾರಿ ವ್ಯವಸ್ಥೆಗಳಲ್ಲಿ “ಲಂಚ”ವನ್ನು ಇನಾಮು, ದಕ್ಷಿಣೆ, ಕಾಣಿಕೆ, ನಜರು, ಭಕ್ಷೀಸು ಇತ್ಯಾದಿ ಆಕರ್ಷಕ ಹೆಸರುಗಳ ಮೂಲಕ ಹಕ್ಕಿನ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು, ಕೊಡಲಾಗುತ್ತಿತ್ತು. ಆದರೆ, ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಕಾನೂನುಬಾಹಿರ ಅಪರಾಧವಾಗಿದ್ದರೂ ಸರ್ವವ್ಯಾಪಿ. ಒಂದು ರೀತಿಯಲ್ಲಿ ದೇವರಿಗೇ ಲಂಚ ನೀಡುವ ಪರಿಪಾಠದವರು ನಾವು. ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಹರಕೆಯ ರೂಪದಲ್ಲಿ “ನೀನು ನನಗೆ ಅದನ್ನು ಕರುಣಿಸಿದರೆ, ಪ್ರತಿಯಾಗಿ ನಾನು ನಿನಗೆ ಇದನ್ನು ನೀಡುತ್ತೇನೆ” ಎಂದು ದೇವರೊಂದಿಗೇ ವ್ಯವಹಾರ ನಡೆಸುವವರು ನಾವು. ನಮ್ಮ ದೇವಾಲಯಗಳ ವಾಸ್ತುಶಿಲ್ಪದಲ್ಲಿಯೇ ಸಾಂಕೇತಿಕವಾಗಿ ಅವಳಿ ದ್ವಾರಪಾಲಕರಾದ ಜಯ ಮತ್ತು ವಿಜಯರ ಪ್ರತಿಮೆಗಳಿವೆ. ಕೆಲವು ಕಡೆ ರಾಕ್ಷಸ ರೂಪದ ಪ್ರತಿಮೆಗಳಿವೆ. ರಾಜನನ್ನು, ಅಧಿಕಾರಿಯನ್ನು ಕಾಣಬೇಕಾದರೆ ಮೊದಲು ದ್ವಾರಪಾಲಕನನ್ನು “ದಾಟಿಹೋಗಬೇಕಾದ”, “ಸಂತೋಷಪಡಿಸಬೇಕಾದ”, “ಕಾಣಿಕೆ ನೀಡಬೇಕಾದ” ನಿದರ್ಶನಗಳು ನಮ್ಮ ಕತೆಗಳು, ಯಕ್ಷಗಾನ ಹಾಸ್ಯ ಪ್ರಸಂಗಗಳಲ್ಲಿ ಬರುತ್ತವೆ.
ತುಳುನಾಡಿನ ಬೂತಾರಾಧನೆಯಲ್ಲಿ ಕೆಲವು “ರಾಜನ್ ದೈವ”ಗಳಿವೆ. ಅವು ರಾಜ ಅಥವಾ ಪ್ರಬಲ ಫ್ಯೂಡಲ್ ಅಧಿಕಾರಿಯನ್ನು ಪ್ರತಿನಿಧಿಸುತ್ತವೆ. ಇಂತಾ ಕೆಲವೊಂದು ದೈವಗಳ ನೇಮ ಅಥವಾ ಕೋಲಗಳಲ್ಲಿ “ಪರಿವಾರ” ಅಥವಾ “ಬಂಟ” ಎಂಬ ಪಾತ್ರಧಾರಿ ಮುಖ್ಯ ದೈವದ ಹಿಂದೆ ಹಿಂದೆ ತಿರುಗಾಡುತ್ತಾ, ಹಾಸ್ಯಾಸ್ಪದವಾಗಿ ವರ್ತಿಸುತ್ತಾನೆ. ತಲೆಯಲ್ಲಿ ರೈತರು ನೀಡಿದ ಬಾಳೆಗೊನೆ ಇತ್ಯಾದಿ ಹೊತ್ತು, ಭಕ್ತರ ಕೈಯಲ್ಲಿ ಇದ್ದದ್ದನ್ನು ಸೆಳೆಯುತ್ತಾ, ಹಣ ಕೇಳುತ್ತಾ ವಸೂಲಿಯ ಅನುಕರಣೆ ಮಾಡುತ್ತಾನೆ. ಭಕ್ತರು ತಮಾಷೆ ಮಾಡುತ್ತಾ ಹಣ ನೀಡುತ್ತಾರೆ. ಈತ ಹಾಸ್ಯಗಾರನಂತೆ! ನಮ್ಮ ಹಿರಿಯರು ಹಿಂದಿದ್ದ ಲಂಚ ವ್ಯವಸ್ಥೆಯನ್ನು ವಿಡಂಬಿಸಲೆಂದೇ ಈ ಪಾತ್ರವನ್ನು ತಂದಿರಬಹುದು.
ಈ ರೀತಿಯ ಸಾಂಸ್ಕೃತಿಕ ಸ್ಮರಣೆಯ ಪರಿಣಾಮವಾಗಿ ಆಧುನಿಕ ಜಾತ್ಯತೀತ ಪ್ರಭುತ್ವದ ಸಂದರ್ಭದಲ್ಲಿ, ಸರಕಾರಿ ಅಧಿಕಾರಿಯು ಹೊಸ “ದ್ವಾರಪಾಲಕ”ನಾಗುತ್ತಾನೆ ಎಂದು ಹೇಳಲು ಸಾಧ್ಯವಿದೆ. ಲಂಚವನ್ನು ನಾವು ಸಾರಾಸಗಟಾಗಿ ಅಪರಾಧವೆಂದು ನೋಡುವುದಿಲ್ಲ. ಆದರೆ, ನಾಗರಿಕರು ಮತ್ತು ಅವರ ಹಕ್ಕಿನ ನಡುವೆ ನಿಂತಿರುವ ವ್ಯಕ್ತಿಗೆ ಕೊಡುವ ಕಾರ್ಯಸಾಧು ದಕ್ಷಿಣೆ (ಕೊಡುಗೆ) ಎಂದು ನೋಡಲಾಗುತ್ತದೆ- ನಾವು ಹೊಟೇಲುಗಳಲ್ಲಿ ಟಿಪ್ಸ್ ನೀಡುವ ಹಾಗೆ. ಈ “ದ್ವಾರಪಾಲಕ ಸಂಸ್ಕೃತಿ”ಯು ರಾಜರಾಗಲಿ, ಊಳಿಗಮಾನ್ಯ ಪ್ರಭುಗಳಾಗಲಿ, ಅಥವಾ ಸ್ಥಳೀಯ ಅಧಿಕಾರಿಗಳಾಗಲಿ – ಪ್ರಬಲರನ್ನು ಗೌರವ ಅಥವಾ ದಕ್ಷಿಣೆ ಮೂಲಕ “ನಿರ್ವಹಿಸಬೇಕು” ಮತ್ತು ಅದು ಸಾಮಾನ್ಯ ಎಂಬ ಕಲ್ಪನೆಯನ್ನು ಬಲಪಡಿಸಿದೆ. ಐತಿಹಾಸಿಕವಾಗಿ, ಜಮೀನ್ದಾರಿ ವ್ಯವಸ್ಥೆಯು ಇದನ್ನು ಮತ್ತಷ್ಟು ಬಲಪಡಿಸಿದೆ.
ಹಾಗಾಗಿಯೇ ಒಬ್ಬ ರೊಟ್ಟಿ ಕಳ್ಳನಿಗೂ ಹಿಡಿದು ಅಮಾನುಷವಾಗಿ ಹೊಡೆದುಕೊಲ್ಲುವ ನಾವು, (ಕೇರಳದ ಒಂದು ಘಟನೆ ನಿಮಗೆ ನೆನಪಿರಬಹುದು) ಲಂಚ ಪಡೆದು ಸಿಕ್ಕಿಬಿದ್ದವರ ಕುರಿತು ಅಷ್ಟೇ ಅಸಹನೆ ಮತ್ತು ಸಿಟ್ಟನ್ನು ತೋರಿಸುವುದಿಲ್ಲ. ಓಬಿರಾಯನ ಕಾಲದ ವ್ಯವಸ್ಥೆಗೆ ಈಗಲೂ ನಡುಬಗ್ಗಿಸಿ ಹೊರೆ ಕಾಣಿಕೆ ನೀಡುವ ಬಗ್ಗೆ ನಮಗೆ ನಾಚಿಕೆಯಿಲ್ಲ! ಕಳ್ಳತನ ಮತ್ತು ಲಂಚಕೋರತನ ಒಂದೇ ಎಂದು ನಮಗೆ ಅನಿಸುವುದಿಲ್ಲ! ಲಂಚವು ಈಗ ಖುಷಿಯಿಂದ ನೀಡುವ ಇನಾಮು ಆಗಿರದೆ, ದರ ನಿಗದಿಯಾದ ದರೋಡೆಯ ಮಟ್ಟಕ್ಕೆ ಏರಿದರೂ, ದರೋಡೆಕೋರರನ್ನು ಕಂಡಂತೆ ಲಂಚಕೋರರನ್ನು ನಾವು ಅಸಹನೀಯವಾಗಿ ಕಾಣುವುದಿಲ್ಲ! ಹಾಗಾಗಿಯೇ ಲಂಚದ ಆರೋಪ ಹೊತ್ತವರು ರಾಜಾರೋಷವಾಗಿ ತಲೆಯೆತ್ತಿ ತಿರುಗುತ್ತಾ, ರಾಜಕೀಯದಲ್ಲಿ ಹುಲುಸಾಗಿ ಬೆಳೆಯುತ್ತಿದ್ದಾರೆ.
ನಮ್ಮ ಖಾಸಗಿ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ಲಂಚ ಹಾಸುಹೊಕ್ಕಾಗಿದ್ದರೂ- ಅದು ಸಮಾಜವನ್ನು ನೇರವಾಗಿ ಬಾಧಿಸದೇ ಇರುವುದಿಂದ ಅದರ ಪ್ರಸ್ತಾಪ ಇಲ್ಲಿ ಬೇಡ. ಧಾರ್ಮಿಕ ಲಂಚಗಳು ಬೇರೆಯೇ ರೀತಿಯ ಮಾನ್ಯತೆ ಪಡೆದಿದ್ದು, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂದು- ಅದು ಕೂಡಾ ದರೋಡೆಯ ಮಟ್ಟಕ್ಕೆ ಏರಿರುವುದರಿಂದ ಅದರ ಕುರಿತು ಪ್ರತ್ಯೇಕವಾಗಿ ಬರೆಯಬಹುದು. ಆದರೆ, ಸಾರ್ವಜನಿಕ ಜೀವನದಲ್ಲಿ ಲಂಚ ಎಂಬುದು ಜನಸಾಮಾನ್ಯರಾದ ಸರ್ವರನ್ನೂ ಬಾಧಿಸುತ್ತದೆ. ಆ ಲಂಚ ಮತ್ತು ಭ್ರಷ್ಟಾಚಾರದಲ್ಲಿ ಮೂಲಭೂತವಾಗಿ ಎರಡು ವಿಧಗಳಿವೆ: ತಮ್ಮ ಹಕ್ಕಿನ ಕೆಲಸಗಳನ್ನು ಅಧಿಕಾರಶಾಹಿಯ ವ್ಯವಸ್ಥಿತ ಜಾಲದೊಳಗೆ ಮಾಡಿಕೊಡಲು ನೀಡಬೇಕಾದ ಲಂಚ ಒಂದು. ಮತ್ತು ಕಾನೂನು, ನಿಯಮ ಬಾಹಿರ ಕೆಲಸಗಳನ್ನು ಮಾಡಿ ಲಾಭಗಳಿಸಲು ಕೊಡಬೇಕಾದ ಲಂಚ ಇನ್ನೊಂದು. ಇವುಗಳಲ್ಲಿ ಮೊದಲನೆಯದು ನೇರವಾಗಿ ಜನಸಾಮಾನ್ಯರನ್ನು ಬಾಧಿಸಿದರೆ, ಎರಡನೆಯದು ಸಾರ್ವಜನಿಕರ ಕಣ್ಣಿಗೆ ಸಾಮಾನ್ಯವಾಗಿ ಬೀಳುವುದಿಲ್ಲ! ಅದನ್ನು ಮಾಧ್ಯಮಗಳು ಜನರ ಮುಂದೆ ಬಹಿರಂಗಪಡಿಸಬೇಕಾಗುತ್ತದೆ. ಆದರೆ, ಮಾಧ್ಯಮಗಳೇ ಮಾರಿಹೋಗಿ, ಲಂಚ ಪಡೆದಾಗ, ಅದನ್ನು ಸಮರ್ಥಿಸಿದಾಗ ಏನು ಮಾಡುತ್ತೀರಿ? ಇದರ ಕುರಿತು ರಕ್ಷಣೆ ನೀಡಬೇಕಾದ ನ್ಯಾಯಾಂಗವೇ ಇಂದು ಲಂಚದ ಆರೋಪಗಳಿಗೆ ಗುರಿಯಾಗಿರುವಾಗ? ಸಾರ್ವಜನಿಕ ಚರ್ಚೆಗೆ ವಸ್ತುವಾಗಿರುವಾಗ? ಒಂದು ಮಾತನ್ನು ನೆನಪಿಡೋಣ: ಸಂವಿಧಾನ ಮತ್ತು ಅದರ ರಕ್ಷಣೆಯ ಹೊಣೆ ಇರುವ ನ್ಯಾಯಾಂಗವು ಪ್ರಜಾಪ್ರಭುತ್ವದ ಉಳಿವಿಗೆ ನಿರ್ಣಾಯಕ. ನ್ಯಾಯಾಂಗದ ವಿಶ್ವಾಸಾರ್ಹತೆ ಪ್ರಶ್ನಾತೀತವಾಗಿ ಇರಬೇಕು. ಹಾಗಾಗಿ ನ್ಯಾಯಾಂಗವು ಸ್ವಯಂ ಆತ್ಮವಿಮರ್ಶೆಗೆ ಒಳಗಾಗಬೇಕೆ ಹೊರತು, ಸಾರ್ವಜನಿಕ ನಿಂದನೆಗೆ ಅಲ್ಲ!
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವಾರು ಲಂಚ ಹಗರಣಗಳು ಆಗಿವೆಯಾದರೂ, ಈ “ಸಂಸ್ಕೃತಿ”ಯು ಹೇಗೆ ಉನ್ನತ ಮಟ್ಟದ ರಾಜಕೀಯ ವ್ಯವಸ್ಥೆಯೊಳಗೆ ಸೇರಿಬಿಟ್ಟಿದೆ ಎಂಬುದನ್ನು ನಾವು ಮೊದಲು ನೋಡಿದ್ದು 1991ರ ಜೈನ್ ಹವಾಲಾ ಪ್ರಕರಣದಲ್ಲಿ. ಡೈರಿಯಲ್ಲಿ ಈ “ವ್ಯವಸ್ಥೆ”ಯನ್ನು ಬಹಿರಂಗಪಡಿಸಿದ್ದು ಇದೇ ಮೊದಲು. ಎಸ್.ಕೆ. ಜೈನ್ ಎಂಬ ದಲ್ಲಾಳಿಯ ದಿನಚರಿಗಳ ಬಹಿರಂಗವು ಬಹುತೇಕ ಪ್ರತಿಯೊಂದು ಪ್ರಮುಖ ಪಕ್ಷದ ಸುಮಾರು 115 ಉನ್ನತ ರಾಜಕಾರಣಿಗಳಿಗೆ ಲಂಚ ನೀಡಿದ ಜಾಲವನ್ನು ಬಹಿರಂಗಪಡಿಸಿತು. ಈ ಒಂದು ಜಾಲ ಇಂದು ನೋಂದಣಿಯಾಗದ ಗುಪ್ತ ನಾಯಕರ ನೇತೃತ್ವದಲ್ಲಿ ಬೆಳೆದು ಹೆಮ್ಮರವಾಗಿದೆ.
ಭ್ರಷ್ಟಾಚಾರ ಪ್ರಪ್ರತ್ಯೇಕ ಘಟನೆಗಳಲ್ಲ; ಬದಲಾಗಿ, ಒಂದು “ವ್ಯವಸ್ಥಿತ ಜಾಲ- ನೆಕ್ಸಸ್” ಮತ್ತು ಇದು ಪಕ್ಷಗಳನ್ನು ಮೀರಿದ್ದು ಎಂದು ಈ ಹಗರಣವು ತೋರಿಸಿಕೊಟ್ಟಿತ್ತು. ರಾಜಕಾರಣಿಗಳಿಗೆ ಚುನಾವಣೆಗಳಿಗೆ ನಗದು ಬೇಕಿತ್ತು, ಮತ್ತು ಉದ್ಯಮಿಗಳಿಗೆ ಸಹಾಯ ಬೇಕಿತ್ತು. ಎಲ್ಲಾ ಕಾನೂನು ಪರಿಶೀಲನೆಯನ್ನು ತಪ್ಪಿಸಿ, ಹಣವನ್ನು “ಹವಾಲಾ” (ಅನೌಪಚಾರಿಕ) ವ್ಯವಸ್ಥೆಯ ಮೂಲಕ ಹರಿಸಲಾಯಿತು. ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಕಪಿಲ್ ಸಿಬಲ್ ತಮ್ಮ ದೀರ್ಘಕಾಲದ ವೃತ್ತಿಜೀವನದಲ್ಲಿ, “ವ್ಯವಸ್ಥೆ”ಯು ತನ್ನನ್ನೇ ರಕ್ಷಿಸಿಕೊಳ್ಳಲು ರೂಪುಗೊಂಡಿರುವುದರಿಂದ- ಈ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ವಿರಳ ಎಂಬುದನ್ನು ಆಗಾಗ ಎತ್ತಿ ತೋರಿಸಿದ್ದಾರೆ. ಹವಾಲಾ ಪ್ರಕರಣವನ್ನು, ಅದು ತನಿಖೆ ಮಾಡುತ್ತಿದ್ದ ಜನರಿಂದಲೇ ಹೂತುಹೋಗದಂತೆ ನೋಡಿಕೊಳ್ಳಲು ಆಗ ಸುಪ್ರೀಂ ಕೋರ್ಟ್ ಸಿಬಿಐಯನ್ನು “ಮೇಲ್ವಿಚಾರಣೆ”ಗೆ ನೇಮಕ ಮಾಡುವ ಅಭೂತಪೂರ್ವ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಯಿತು. ಇಂದು ಅದೇ ಸಿಬಿಐ ಮತ್ತು ಇಡಿ ಸಂಸ್ಥೆಗಳು ವಿರೋಧಿಗಳನ್ನು ಬಗ್ಗುಬಡಿಯಲೆಂದೇ ಇರುವ ಕೇಂದ್ರ ಸರಕಾರದ ಬೇಟೆ ನಾಯಿಗಳ ರೀತಿಯಲ್ಲಿ ನೋಡಲಾಗುತ್ತಿದೆ. ಆಪ್ ನಾಯಕ ಅರವಿಂದ ಕೇಜ್ರಿವಾಲ್ ಮತ್ತಿತರನ್ನು “ಮದ್ಯ ಮಾರಾಟ”ಹಗರಣದಲ್ಲಿ ವಿಶೇಷ ನ್ಯಾಯಾಲಯವು “ಸಿಬಿಐ” ಮತ್ತು “ಇಡಿ”ಯನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಂಡಿರುವುದು ತನಿಖಾ ತಂಡಗಳ ವಿಶ್ವಾಸಾರ್ಹತೆಯನ್ನೇ ಕ್ಯಾಕರಸಕವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ- ನರೇಂದ್ರ ಮೋದಿಯ ಬಿಜೆಪಿ ಸರಕಾರವು ದೇಶಪ್ರೇಮ, ಗೋಮಾತೆ, ಹಿಂದೂತ್ವ ಮುಂತಾಗಿ ಪುಂಗಿ ಊದುತ್ತಾ- ಹೇಗೆ ಭ್ರಷ್ಟಾಚಾರವನ್ನು ಅಧಿಕೃತವಾಗಿ ಸಾಂಸ್ಥೀಕರಣ ಮಾಡಿದೆ; ಹೇಗೆ ಈ ಅನ್ಯಾಯದ ಕಾರ್ಪೋರೇಟ್ ದೇಣಿಗೆಯ ಹಣವನ್ನು ಲೆಕ್ಕವೇ ಇಲ್ಲದಂತೆ- ತನ್ನ ಹಿಂದೂತ್ವವಾದಿ (ಮೇಲ್ಜಾತಿ ಎಂದು ಓದಿಕೊಳ್ಳಿ), ಕೋಮುವಾದಿ (ಮುಸ್ಲಿಂ, ಕ್ರೈಸ್ತ ವಿರೋಧಿ ಎಂದು ಓದಿಕೊಳ್ಳಿ) ಅಜೆಂಡಾಗಳಿಗೆ ಬಳಸುತ್ತಾ, ದೇಶದ ಏಕೈಕ ಶ್ರೀಮಂತ ಪಕ್ಷವಾಗಿ ಬೆಳೆದಿದೆ; ಆಸ್ಪತ್ರೆಗಳನ್ನು ಮೀರಿಸಿದ ಕಚೇರಿಗಳನ್ನು ಕಟ್ಟಿದೆ; ಹೇಗೆ ಕಾರ್ಪೋರೇಟ್ ಲಂಚವು ದೇಶದ ಉನ್ನತ ಸ್ಥಾನಗಳ ಮೂಲಕವೇ ದೇಶವನ್ನು ನಿಯಂತ್ರಿಸುತ್ತಿದೆ, ಪಿಎಂ ಕೇರ್, ಇಲೆಕ್ಟೋರಲ್ ಬಾಂಡ್ ಏನು ಮುಂತಾದವುಗಳ ಕುರಿತ ವಾದಗಳನ್ನು ಮುಂದೆ ನೋಡೋಣ.
