Home ರಾಜಕೀಯ ಟಿಎಂಸಿ ಬಿಕ್ಕಟ್ಟು: ದೀದಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದ ರೆಬೆಲ್ ಸಂಸದೆ ಶತಾಬ್ದಿ...

ಟಿಎಂಸಿ ಬಿಕ್ಕಟ್ಟು: ದೀದಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದ ರೆಬೆಲ್ ಸಂಸದೆ ಶತಾಬ್ದಿ ರಾಯ್!

0

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗಿನ ಆಂತರಿಕ ಭಿನ್ನಮತ ತಾರಕಕ್ಕೇರಿದ್ದು, ಪಕ್ಷದ ಹಿರಿಯ ನಾಯಕಿ ಹಾಗೂ ರೆಬೆಲ್ ಸಂಸದೆ ಶತಾಬ್ದಿ ರಾಯ್ ಅವರು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುವುದು ಸರಿ ಎನಿಸಿದರೂ, ನೈತಿಕವಾಗಿ ತಪ್ಪು ಮಾಡುತ್ತಿದ್ದೇನೆಂಬ ಭಾವನೆ ಕಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಮಮತಾ ಬ್ಯಾನರ್ಜಿ ಅವರಿಗೆ ಯಾವುದೇ ಸಂದೇಶ ನೀಡಲು ಬಯಸುತ್ತೀರಾ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, “ದೀದಿ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಭಾವುಕರಾಗಿ ನುಡಿದರು.

ಟಿಎಂಸಿಯಲ್ಲಿ ತೀವ್ರಗೊಂಡ ಬಂಡಾಯ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಸೋಲಿನ ಬೆನ್ನಲ್ಲೇ ಟಿಎಂಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ರಾಜ್ಯ ವಿಧಾನಸಭೆಯ 60 ಕ್ಕೂ ಹೆಚ್ಚು ಶಾಸಕರು ಬಂಡಾಯವೆದ್ದಿದ್ದು, ಈಗ ಲೋಕಸಭೆಯಲ್ಲೂ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಸುಮಾರು 20 ಟಿಎಂಸಿ ಸಂಸದರು ತಮಗೆ ಪ್ರತ್ಯೇಕ ಗುಂಪಿನ ಮಾನ್ಯತೆ ನೀಡಬೇಕು ಮತ್ತು ತಾವು ಎನ್‌ಡಿಎ ಸರ್ಕಾರವನ್ನು ಬೆಂಬಲಿಸುವುದಾಗಿ ಜೂನ್ 9 ರಂದು ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಈ ಬಂಡಾಯ ಸಂಸದರು ಈ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಮಮತಾ ಬ್ಯಾನರ್ಜಿ ಅವರ ಕುಟುಂಬ ಸದಸ್ಯರು ಪಕ್ಷದ ಮೇಲೆ ಅತಿಯಾದ ಆಧಿಪತ್ಯ ಚಲಾಯಿಸುತ್ತಿದ್ದಾರೆ ಮತ್ತು ಪಕ್ಷದ ಪ್ರಮುಖ ದಾಖಲೆಗಳಿಗೆ ನಕಲಿ ಸಹಿ ಹಾಕುತ್ತಿದ್ದಾರೆ ಎಂದು ಬಂಡಾಯ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸಿಐಡಿ (CID) ಪೊಲೀಸರು ಮಮತಾ ಬ್ಯಾನರ್ಜಿ ಅವರ ನಿವಾಸದ ಸಮೀಪವಿರುವ ಟಿಎಂಸಿ ಪ್ರಧಾನ ಕಚೇರಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿರುವುದು ತೀವ್ರ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಬಣವು ಈ ಬಂಡಾಯವನ್ನು ತೀವ್ರವಾಗಿ ಖಂಡಿಸಿದ್ದು, ರೆಬೆಲ್ ನಾಯಕರನ್ನು ಅವಕಾಶವಾದಿಗಳು ಮತ್ತು ಇವರೆಲ್ಲರೂ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಟೀಕಿಸಿದೆ.

You cannot copy content of this page

Exit mobile version