Home ರಾಜ್ಯ ಆಗುಂಬೆಯಲ್ಲಿ ಭಾರಿ ವಾಹನಗಳ ಸಂಚಾರ ಬಂದ್ – ಇಲ್ಲಿದೆ ಪರ್ಯಾಯ ಮಾರ್ಗ

ಆಗುಂಬೆಯಲ್ಲಿ ಭಾರಿ ವಾಹನಗಳ ಸಂಚಾರ ಬಂದ್ – ಇಲ್ಲಿದೆ ಪರ್ಯಾಯ ಮಾರ್ಗ

ಶಿವಮೊಗ್ಗ : ಮುಂಗಾರು ಮಳೆ(Mansoon Rain) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಗುಂಬೆ ಘಾಟಿ(Agumbe Ghat) ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಆಗುಂಬೆ ಘಾಟಿಯಲ್ಲಿ ಜಲ್ಲಿ, ಮರಳು ಹಾಗೂ ಸರಕು ಸಾಗಣೆ ಮಾಡುವ ದೊಡ್ಡ ವಾಹನಗಳ ಓಡಾಟವನ್ನು ಜೂನ್ 15ರಿಂದ ಅನ್ವಯವಾಗುವಂತೆ ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಿ ಶಿವಮೊಗ್ಗ(Shivamogga) ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ(DC Prabhulinga kavalakatti) ಅವರು ಹೊಸ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಿಂದ ಹೊಸನಗರ ಮತ್ತು ಮಾಸ್ತಿಕಟ್ಟೆ ಮೂಲಕ ಕುಂದಾಪುರ ಹಾಗೂ ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿ ರಸ್ತೆಯಲ್ಲಿ ಇತ್ತೀಚೆಗಷ್ಟೇ ಭೂಕುಸಿತ ಉಂಟಾಗಿತ್ತು. ಪ್ರಸ್ತುತ ಅಲ್ಲಿ ರಕ್ಷಣಾತ್ಮಕ ದುರಸ್ತಿ ಕಾರ್ಯಗಳು ನಡೆಯುತ್ತಿವೆಯಾದರೂ, ಇನ್ನು ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಈ ಕಾರಣದಿಂದಾಗಿ ಸಾರಿಗೆ ಸಂಸ್ಥೆಗಳು ಹಾಗೂ ಲಾರಿ ಚಾಲಕರು ಅನಿವಾರ್ಯವಾಗಿ ಆಗುಂಬೆ ಘಾಟಿಯನ್ನು ಅವಲಂಬಿಸುವಂತಾಗಿದೆ.ಇನ್ನು, ತೀರ್ಥಹಳ್ಳಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯಲ್ಲಿ ದೊಡ್ಡ ಗಾತ್ರದ ವಾಹನಗಳ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದೆ. ಮಳೆಗಾಲದ ಸಮಯದಲ್ಲಿ ಇದೇ ರೀತಿ ಭಾರಿ ವಾಹನಗಳು ಓಡಾಡಿದರೆ ಅತೀ ಸೂಕ್ಷ್ಮ ವಲಯವಾಗಿರುವ ಘಾಟಿಯ ಅಂಚುಗಳು ಕುಸಿದು ಬೀಳುವ ಭೀತಿ ಇದೆ. ಅಷ್ಟೇ ಅಲ್ಲದೆ, ಇದು ಸರಣಿ ಅಪಘಾತಗಳಿಗೆ ದಾರಿ ಮಾಡಿಕೊಟ್ಟು ಸಾರ್ವಜನಿಕರ ಜೀವಕ್ಕೆ ಕಂಟಕವಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕಟ್ಟುನಿಟ್ಟಿನ ತೀರ್ಮಾನ ತೆಗೆದುಕೊಳ್ಳಲಾಗಿದೆ.

ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಪ್ರಯಾಣಿಸುವ ದೊಡ್ಡ ವಾಹನಗಳ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಪರ್ಯಾಯ ರಸ್ತೆಗಳನ್ನು ನಿಗದಿಪಡಿಸಿದೆ.ಮೊದಲ ಪರ್ಯಾಯ ಮಾರ್ಗ: ತೀರ್ಥಹಳ್ಳಿಯಿಂದ ಹೊರಟು ನಗರ, ನಾಗೋಡಿ, ಕೊಲ್ಲೂರು ಹಾಗೂ ಕುಂದಾಪುರ ಮೂಲಕ ಉಡುಪಿ ತಲುಪಬಹುದು. ಎರಡನೇ ಪರ್ಯಾಯ ಮಾರ್ಗ: ತೀರ್ಥಹಳ್ಳಿಯಿಂದ ಶೃಂಗೇರಿ, ಕೆರೆಕಟ್ಟೆ, ಬಜಗೋಳಿ ಹಾಗೂ ಕಾರ್ಕಳ ರಸ್ತೆಯ ಮೂಲಕ ಉಡುಪಿಗೆ ತೆರಳಬಹುದು.ಅದೇ ರೀತಿ ಉಡುಪಿ ಕಡೆಯಿಂದ ಶಿವಮೊಗ್ಗ ಅಥವಾ ತೀರ್ಥಹಳ್ಳಿಗೆ ಬರುವ ಭಾರಿ ವಾಹನಗಳು ಕೂಡ ಇದೆ ರಸ್ತೆಗಳನ್ನು ಬಳಸಬೇಕಾಗುತ್ತದೆ.

ಮೊದಲ ಪರ್ಯಾಯ ಮಾರ್ಗ: ಉಡುಪಿಯಿಂದ ಕುಂದಾಪುರ, ಕೊಲ್ಲೂರು, ನಾಗೋಡಿ ಹಾಗೂ ನಗರದ ಮುಖಾಂತರ ತೀರ್ಥಹಳ್ಳಿಗೆ ಬರಬಹುದು. ಎರಡನೇ ಪರ್ಯಾಯ ಮಾರ್ಗ: ಕಾರ್ಕಳದಿಂದ ಬಜಗೋಳಿ, ಕೆರೆಕಟ್ಟೆ ಮತ್ತು ಶೃಂಗೇರಿ ಮಾರ್ಗವಾಗಿ ತೀರ್ಥಹಳ್ಳಿಯನ್ನು ತಲುಪಬಹುದು.ಮಳೆಗಾಲದ ದಿನಗಳಲ್ಲಿ ಘಾಟ್ ರಸ್ತೆಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ತಡೆಯಲು ವಾಹನ ಸವಾರರು ಹಾಗೂ ಲಾರಿ-ಬಸ್ ಮಾಲೀಕರು ಜಿಲ್ಲಾಡಳಿತದ ಈ ಆದೇಶವನ್ನು ಪಾಲಿಸಿ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

You cannot copy content of this page

Exit mobile version