Home ರಾಜ್ಯ ಆರ್‌ಟಿಒ ಭರ್ಜರಿ ಕಾರ್ಯಾಚರಣೆ ನಿಯಮ ಉಲ್ಲಂಘಿಸಿದ – 390 ಶಾಲಾ ವಾಹನ ಜಪ್ತಿ

ಆರ್‌ಟಿಒ ಭರ್ಜರಿ ಕಾರ್ಯಾಚರಣೆ ನಿಯಮ ಉಲ್ಲಂಘಿಸಿದ – 390 ಶಾಲಾ ವಾಹನ ಜಪ್ತಿ

ವಿಜಯನಗರ : ವಿಜಯನಗರ (Vijayanagar ) ಜಿಲ್ಲೆಯಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ ಹಾಗೂ ಇನ್ಶುರೆನ್ಸ್ ಇಲ್ಲದೆ ರಸ್ತೆಗಿಳಿಯುತ್ತಿದ್ದ ಖಾಸಗಿ ಶಾಲಾ ವಾಹನಗಳ ವಿರುದ್ಧ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಸಮರ ಸಾರಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಅಧಿಕಾರಿಗಳ ಪಡೆ ಜಿಲ್ಲೆಯಾದ್ಯಂತ ದಿಢೀರ್ ವಿಶೇಷ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿದ್ದ ಬರೋಬ್ಬರಿ 390 ಖಾಸಗಿ ಶಾಲಾ ವಾಹನಗಳನ್ನು ಜಪ್ತಿ ಮಾಡಿ ಬಿಸಿ ಮುಟ್ಟಿಸಿದೆ.

ಕಳೆದ ಫೆಬ್ರವರಿಯಿಂದ ಈವರೆಗೆ ನಿರಂತರ ತಪಾಸಣೆ ನಡೆಸಿರುವ ಆರ್‌ಟಿಒ ತಂಡವು ಅಗತ್ಯ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಒಟ್ಟು 103 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕಾರ್ಯಾಚರಣೆ ವೇಳೆ ನಿಯಮ ಮೀರಿದ ವಾಹನ ಮಾಲೀಕರಿಂದ ಬರೋಬ್ಬರಿ 11 ಲಕ್ಷ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಲಾಗಿದ್ದು, ನಿಯಮಾನುಸಾರ ದಂಡ ಪಾವತಿಸಿದ ಬಳಿಕವಷ್ಟೇ ವಾಹನಗಳನ್ನು ಬಿಟ್ಟು ಕಳುಹಿಸಲಾಗಿದೆ.

ಖಾಸಗಿ ಶಾಲಾ ವಾಹನಗಳಲ್ಲಿ ಸುರಕ್ಷತಾ ಮಾನದಂಡಗಳು ಪಾಲನೆಯಾಗದಿರುವುದು ಹಾಗೂ ಎಫ್‌ಸಿ ನವೀಕರಣ ಮಾಡದಿರುವುದು ಮಕ್ಕಳ ಜೀವಕ್ಕೆ ಅಪಾಯ ತರಬಹುದು ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಪ್ತಿಯಾದ ವಾಹನಗಳ ಮಾಲೀಕರಿಗೆ ದಂಡ ವಿಧಿಸುವುದರ ಜೊತೆಗೆ, ವಾಹನಗಳ ಸ್ಥಿತಿಗತಿ ಹಾಗೂ ಅಗತ್ಯ ದಾಖಲೆಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವಂತೆ ಸಾರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಜಯನಗರ ಜಿಲ್ಲಾ ಆರ್‌ಟಿಒ ಅಧಿಕಾರಿ ಕೆ. ದಾಮೋದರ, ಮಕ್ಕಳ ಭದ್ರತೆ ಮತ್ತು ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಶಾಲಾ ಆಡಳಿತ ಮಂಡಳಿಗಳು ಹಾಗೂ ಚಾಲಕರು ವಾಹನಗಳ ಸಂಪೂರ್ಣ ದಾಖಲೆಗಳನ್ನು ನಿಯಮಾನುಸಾರ ಸರಿಪಡಿಸಿಕೊಂಡು ರಸ್ತೆಗೆ ಇಳಿಸಬೇಕು. ಒಂದು ವೇಳೆ ಉಲ್ಲಂಘನೆ ಮುಂದುವರಿದರೆ ಮತ್ತಷ್ಟು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version