ಜಗತ್ತಿನಲ್ಲೇ ನೋಂದಣಿಯಾಗದ ಅತೀದೊಡ್ಡ ಸಂಘಟನೆ ಎನಿಸಿದ, ಹಿಂದೂತ್ವ ಮತ್ತು ದೇಶಪ್ರೇಮದ ಹೆಸರಿನಲ್ಲಿ ಶೂದ್ರ ಮತ್ತು ದಲಿತರನ್ನು ಬಳಸಿಕೊಂಡು- ಬ್ರಾಹ್ಮಣ ಮತ್ತು ಮೇಲ್ಜಾತಿಯ, ನಿರ್ದಿಷ್ಟವಾಗಿ ಮಹಾರಾಷ್ಟ್ರೀಯ ಪೇಶ್ವೆ ವಂಶವಂಶಸ್ಥ ಚಿತ್ಪಾವನ ಮತ್ತಿತರ ಬ್ರಾಹ್ಮಣ ವರ್ಗಗಳ ಹಿತಾಸಕ್ತಿ ಕಾಯುವ ಆರೆಸ್ಸಿನ ವಿದೇಶಿ ಮೂಲಬೇರುಗಳು ಮತ್ತು ಸಂರಚನೆಗಳ ಕುರಿತು ಹಿಂದಿನ ಎರಡು ಕಂತುಗಳಲ್ಲಿ ನೋಡಿದ್ದೆವು. ಈಗ- ಮುಂದಿನ ಎರಡು ಕಂತುಗಳಲ್ಲಿ ಅದರ ಪ್ರಾಬಲ್ಯದ ಕಾರ್ಯತಂತ್ರ ಮತ್ತು ಅದಕ್ಕಾಗಿ ಗುಲಾಮಿ ಪಡೆಗಳನ್ನು ಬಳಸುವ “ಪೇಶ್ವಾಯಿ” ನೀಲನಕ್ಷೆಯನ್ನು ನೋಡೋಣ.
ಪ್ರಮುಖ ವಿರೋಧಾಭಾಸ: ಜಾತಿ ಮೇಲ್ಮೆಯ ಸಾಂಸ್ಥೀಕರಣ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವು ಕುಟಿಲತೆಯಿಂದ ವಿನ್ಯಾಸಗೊಳಿಸಿರುವ “ಹಿಂದೂತ್ವ”ದ ಮೂಲಭೂತ ವಿರೋಧಾಭಾಸವು ಅದರ ಬಹಿರಂಗ ಬ್ರ್ಯಾಂಡಿಂಗ್ ಮತ್ತು ಅದರ ಆಂತರಿಕ ಸಂರಚನೆಯ ವಾಸ್ತವ ಸ್ಥಿತಿಯಲ್ಲಿದೆ. ಸಂಸ್ಥೆಯು ಸಂಪೂರ್ಣ “ಹಿಂದೂ ಏಕತೆ”ಯ ಭಾಷೆಯನ್ನು (“ಎಲ್ಲಾ ಹಿಂದೂಗಳು ಒಂದು”) ಬಳಸುತ್ತಿದ್ದರೂ, ಅದರ ಅತ್ಯುನ್ನತ ನಾಯಕತ್ವ – ಸರಸಂಘಚಾಲಕ್ (ಸರ್ವೋಚ್ಚ ನಾಯಕ) ಮತ್ತು ಕೇಂದ್ರ ಕಾರ್ಯಕಾರಿ ಸಮಿತಿ- ಜನಸಾಮಾನ್ಯರಿಗೆ ದಕ್ಕದ ಅಧಿಕಾರ ಕೇಂದ್ರವಾಗಿ ಉಳಿದಿದೆ. ಅದರ ಶತಮಾನದ ಇತಿಹಾಸದಲ್ಲಿ ಒಂದೇ ಒಂದು ಅಪವಾದ (ರಾಜೇಂದ್ರ ಸಿಂಗ್ ಅಥವಾ “ರಜ್ಜುಭಯ್ಯಾ” 1994ರಿಂದ 2000ರ ವರೆಗೆ ಸೇವೆ ಸಲ್ಲಿಸಿದ ರಜಪೂತ) ಹೊರಪಡಿಸಿದರೆ, ಪ್ರತಿಯೊಬ್ಬ ಸರ್ವೋಚ್ಚ ನಾಯಕನೂ ಬ್ರಾಹ್ಮಣನಾಗಿದ್ದಾನೆ, ಮಹಾರಾಷ್ಟ್ರದ ಚಿತ್ಪಾವನ ಮತ್ತು ದೇಶಸ್ಥ ಬ್ರಾಹ್ಮಣನೇ (ಹೆಡ್ಗೆವಾರ್, ಗೋಲ್ವಾಲ್ಕರ್, ದೇವರಸ್, ಸುದರ್ಶನ್, ಭಾಗವತ್) ಆಗಿದ್ದಾನೆ. ಇಲ್ಲಿಯೂ ಮನೋಭಾವ ನೋಡಿ: ಇವರಲ್ಲಿ ಬ್ರಾಹ್ಮಣರೆಲ್ಲರೂ ಡಾಕ್ಟರ್-ಜೀ, ಗುರೂ-ಜೀ, ಬಾಳಾ- ಸಾಹೇಬ್ ಇತ್ಯಾದಿ ಜೀಗಳದರೆ, ಬ್ರಾಹ್ಮಣಣೇತರ ಮಾತ್ರ “ಜೀ” ಅಲ್ಲ! ಸಲುಗೆಯ “ಭಯ್ಯಾ”. ಈ ಅಸಮತೆ ಒಂದು ವಿಶಿಷ್ಟ ಸಾಂಸ್ಥಿಕ ವಾಸ್ತವವನ್ನು ಬಹಿರಂಗಪಡಿಸುತ್ತದೆ: ಆರೆಸ್ಸೆಸ್ ಸಂಸ್ಥೆಯು ಸಾಂಪ್ರದಾಯಿಕವಾದ ಪಿತೃಪ್ರಧಾನ ಜಾತಿ ಶ್ರೇಣೀಕರಣದ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ವಿನ್ಯಾಸವು ಜಾತಿಪದ್ಧತಿಯಂತೆಯೇ ಸ್ಪಷ್ಟವಾದ ಶ್ರಮ ವಿಭಜನೆಯನ್ನು ಅನುಸರಿಸುತ್ತದೆ.
ಸೈದ್ಧಾಂತಿಕ ಪಾಲಕರು: ಬೌದ್ಧಿಕ ಮೇಲ್ವಿಚಾರಣೆ, ಆರ್ಥಿಕ ಮೇಲ್ವಿಚಾರಣೆ, ಕಾರ್ಯತಂತ್ರದ ದೀರ್ಘಕಾಲೀನ ಯೋಜನೆ ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮೇಲ್ಭಾಗದಲ್ಲಿ ಅಂದರೆ, ಚಿತ್ಪಾವನ ಮುಂತಾದ ಬ್ರಾಹ್ಮಣ ವರ್ಗದಲ್ಲಿ ಕೇಂದ್ರೀಕೃತವಾಗಿರುತ್ತದೆ.
ಕಾರ್ಯನಿರ್ವಾಹಕ ನೆಲೆ: ಸಾಮೂಹಿಕವಾಗಿ ಜನರನ್ನು ಸಜ್ಜುಗೊಳಿಸುವಿಕೆ, ಬೀದಿ-ಮಟ್ಟದ ಗೋಚರತೆ ಮತ್ತು ತನ್ನ ಕಾರ್ಯಯೋಜನೆಗಳ ಭೌತಿಕ ಜಾರಿಯನ್ನು ಸ್ಪಷ್ಟವಾಗಿ ಉಳಿದ ಜಾತಿಗಳ ಜನರಿಗೆ ಹೊರಗುತ್ತಿಗೆ ನೀಡಲಾಗುತ್ತದೆ. ಕಾರ್ಯಕ್ರಮಗಳನ್ನು, ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುವುದಷ್ಟೇ ಅದರ ಕೆಲಸವೇ ಹೊರತು, ಪ್ರಶ್ನಿಸುವುದಲ್ಲ!
ಈ ಶ್ರೇಣೀಕರಣವು ಮೂರು ಹಂತದ ವಿನ್ಯಾಸದ ಮೂಲಕ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ತುದಿಯಲ್ಲಿ ಸರಸಂಘಚಾಲಕ್ ಮತ್ತು ಸೈದ್ಧಾಂತಿಕ ತಿರುಳು ಇರುತ್ತದೆ, ಇದು ಕಾರ್ಯತಂತ್ರ ಮತ್ತು ಆರ್ಥಿಕತೆಯ ನಿಯಂತ್ರಣವನ್ನು ವಿಶೇಷವಾಗಿ ಬ್ರಾಹ್ಮಣರ ಹಿಡಿತದಲ್ಲಿ ಇರಿಸುತ್ತದೆ. ಅವರ ಕೆಳಗೆ ಮಧ್ಯಮ ಮಟ್ಟದ ಅಧಿಕಾರಶಾಹಿ ಇದೆ, ಇದು ಕಾರ್ಯಾಚರಣೆಯ ಆಡಳಿತಾತ್ಮಕ ಮುಖಗಳು ಮತ್ತು ಸಂಯೋಜಕರಾಗಿ ಕಾರ್ಯನಿರ್ವಹಿಸುವ ಶ್ರೀಮಂತ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಒಳಗೊಂಡಿದೆ. ಈ ರಚನೆಯ ಸಂಪೂರ್ಣ ತಳದಲ್ಲಿ ದುಡಿಯುವ ರೈತ, ಕಾರ್ಮಿಕ ವರ್ಗದ ಯುವಕರ ದೊಡ್ಡ ಕಾಲಾಳು ಪಡೆ ಇದೆ. ಅವರೇ ದೈನಂದಿನ ಶಾಖೆಗಳನ್ನು ಮಾಡುತ್ತಾರೆ, ದೈಹಿಕವಾದ ಜಾರಿ, ಹೊಡೆದಾಟಗಳು, ಸಭೆಗಳು ಮತ್ತು ನೆಲಮಟ್ಟದ ಕಣದ ಸಜ್ಜುಗೊಳಿಸುವಿಕೆ ಇತ್ಯಾದಿಗಳನ್ನು ನಿರ್ವಹಿಸುತ್ತಾರೆ. ಅವರನ್ನು ದೊಡ್ಡ ಹೆಸರಿನ ಸಣ್ಣ ಹುದ್ದೆಗಳ ಮೂಲಕ ವಂಚಿಸಲಾಗುತ್ತದೆ.
ಐತಿಹಾಸಿಕ ಸಮಾನಾಂತರ: ನವ-ಪೇಶ್ವಾ ಮಾದರಿ
ಮರಾಠಾ-ಪೇಶ್ವಾ ಸಂರಚನೆ ಮತ್ತು ಐತಿಹಾಸಿಕ ಬೆಳವಣಿಗೆ ಕುರಿತು ಪರಿಶೀಲನೆ ನಡೆಸಿದರೆ, ಆಧುನಿಕ ಭಾರತದ ರಾಜಕೀಯ ಸಮಾಜಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ತೀಕ್ಷ್ಣವಾದ ಐತಿಹಾಸಿಕ ಉದಾಹರಣೆಗಳು ಮತ್ತು ಸಾದೃಶ್ಯಗಳು ಸಿಗುತ್ತವೆ.
ಶಿವಾಜಿಯ ನಂತರ 18ನೇ ಶತಮಾನದಲ್ಲಿ, ಮರಾಠಾ ಸಾಮ್ರಾಜ್ಯವು ರಚನಾತ್ಮಕ ಬದಲಾವಣೆಗೆ ಒಳಗಾಯಿತು: ನಾಮಮಾತ್ರದ ರಾಜಮನೆತನದ ವಂಶಾವಳಿ (ಮರಾಠಾ ಜಾತಿಗೆ ಸೇರಿದ ಛತ್ರಪತಿ ಶಿವಾಜಿಯ ವಂಶಸ್ಥರು) ಸಾಂಕೇತಿಕ “ಮರಾಠ ರಾಷ್ಟ್ರ”ದ ಮುಖ್ಯಸ್ಥರಾಗಿ ಉಳಿದರೆ, ವಾಸ್ತವಿಕ ರಾಜಕೀಯ, ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರವು ಸಂಪೂರ್ಣವಾಗಿ ಪೇಶ್ವಾಗಳ (ಚಿತ್ಪಾವನ ಬ್ರಾಹ್ಮಣ ಪ್ರಧಾನ ಮಂತ್ರಿಗಳು) ಕೈಗೆ ಸೇರಿಹೋಯಿತು. ಪೇಶ್ವಾ ರಾಜ್ಯವು ಹೆಚ್ಚು ಕೇಂದ್ರೀಕೃತ ಅಧಿಕಾರಶಾಹಿಯನ್ನು ಸೃಷ್ಟಿಸಿತು. ಅದು ಕೇಂದ್ರದಲ್ಲಿ ಸಾಮಾಜಿಕ-ಧಾರ್ಮಿಕ ಪ್ರಾಬಲ್ಯವನ್ನು ಬಲಪಡಿಸುತ್ತಾ, ಶಿವಾಜಿ ಆಡಳಿತದಲ್ಲಿ ಪ್ರಬಲವಾಗಿದ್ದ ಕೃಷಿಕ ಮತ್ತು ಕೆಳವರ್ಗದ ಜನಸಾಮಾನ್ಯರನ್ನು ಆದಾಯ ಮೂಲಗಳ ನಿಯಂತ್ರಣ ಮತ್ತು ಮಿಲಿಟರಿ ಸೇವೆಗಳಿಂದ ಹೊರದಬ್ಬಿತು. ಈ ಕುರಿತು- ಮರಾಠ ಶಿವಾಜಿಯ ಶೂದ್ರ ಪಾಬಲ್ಯದ “ಹಿಂದವೀ” ಸ್ವರಾಜ್ಯವನ್ನು ಹೈಜಾಕ್ ಮಾಡಿ ಚಿತ್ಪಾವನ ಪೇಶ್ವೆಗಳು ಬ್ರಾಹ್ಮಣ ಪ್ರಾಬಲ್ಯದ “ಹಿಂದೂತ್ವ” ಸಾಮ್ರಾಜ್ಯ ಸ್ಥಾಪನೆ ಮಾಡಿದ ಕುರಿತು- ನಾನು ಇಲ್ಲಿಯೇ ಎರಡು ಕಂತುಗಳಲ್ಲಿ ಸಾಕಷ್ಟು ವಿವರವಾಗಿ ಬರೆದಿದ್ದೆ. ಬ್ರಾಹ್ಮಣ ಪೇಶ್ವೆಗಳು- ಮುಸ್ಲಿಂ ಮೊಗಲರನ್ನು ಶತ್ರುಗಳಾಗಿ ತೋರಿಸಿ, ಮರಾಠ ಸರದಾರರ ಶೌರ್ಯವನ್ನು ವಿಭಜನೆಯ ಮೂಲಕವೇ ಬಳಸಿಕೊಂಡು ತಮ್ಮ ನಾಯಕತ್ವದ, ಜಾತಿ ತಾರತಮ್ಯ ಮತ್ತು ಶೋಷಣೆಯ ಹುಸಿ “ಹಿಂದೂ ಸಾಮ್ರಾಜ್ಯ” ಸ್ಥಾಪಿಸಿದರು.
ಈ ನೀಲನಕ್ಷೆಯ ಆಧುನೀಕೃತ ಆವೃತ್ತಿಯನ್ನು ಫ್ಯಾಸಿಸ್ಟ್- ನಾಝಿ ಸಂಘಟನೆಯ ಮೂಲಕ ಆರ್‌ಎಸ್‌ಎಸ್ ನಿರ್ವಹಿಸುತ್ತಿದೆ. ತನ್ನ ರಾಜಕೀಯ ಅಂಗಸಂಸ್ಥೆ (ಬಿಜೆಪಿ) ಮತ್ತು ಅದರ ವಿಸ್ತಾರವಾದ ಮುಚೂಣಿ ಸಂಘಟನೆಗಳ ಜಾಲದ (ಸಂಘ ಪರಿವಾರ) ಮೇಲೆ ಸಂಪೂರ್ಣ ವೀಟೋ ಅಧಿಕಾರವನ್ನು ಕಾಯ್ದುಕೊಳ್ಳುವ ಮೂಲಕ, ನಾಗ್ಪುರದಲ್ಲಿನ ಆರೆಸ್ಸೆಸ್ಸಿನ ಸೈದ್ಧಾಂತಿಕ “ತಲೆ”ಯು ಯಾವುದೇ ಚುನಾವಣೆಯನ್ನು ಎದುರಿಸದೆ ನಿರಂತರವಾಗಿ ಅಪಾರ ರಾಜಕೀಯ ಅಧಿಕಾರವನ್ನು ಅನುಭವಿಸುತ್ತಾ ಬಂದಿದೆ.
ಕೆಳ ಸಮುದಾಯಗಳು ಬಿಜೆಪಿಗೆ ಮತ ನೀಡಿ ಚುನಾವಣಾ ಸಮರ್ಥನೆ ಮತ್ತು ಸಭೆಗಳಲ್ಲಿ ಭಾಗವಹಿಸಿ ಬೀದಿಗಳಲ್ಲಿ ಭೌತಿಕ ಉಪಸ್ಥಿತಿಯನ್ನು ಒದಗಿಸುತ್ತವೆ. ಪ್ರತಿಯಾಗಿ, ಅವರಿಗೆ ಸಾಂಕೇತಿಕ ಪ್ರಾತಿನಿಧ್ಯವನ್ನು ನೀಡಲಾಗುತ್ತದೆ – ಉದಾಹರಣೆಗೆ ಹೆಚ್ಚಿನ ಗೋಚರತೆಯ ಮಂತ್ರಿ ಸ್ಥಾನಗಳು, ದೇವಾಲಯ ಪ್ರವೇಶ ಉಪಕ್ರಮಗಳು ಅಥವಾ ಸ್ಥಳೀಯ ಕೆಳವರ್ಗದ ಐತಿಹಾಸಿಕ ನಾಯಕರ, ಹಬ್ಬಗಳ ಆಚರಣೆ ಇತ್ಯಾದಿ. ಹಾಗಿದ್ದರೂ, ಸಾಂಸ್ಥಿಕ, ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಶಕ್ತಿಯ ಮೂಲಭೂತ ಸನ್ನೆಕೋಲುಗಳು ಅದೇ ಮೇಲ್ವರ್ಗದ ನಾಯಕರ ಕೈಗಳಲ್ಲಿ ದೃಢವಾಗಿ ನೆಲೆಗೊಂಡಿವೆ.
ಶೂದ್ರ-ದಲಿತ ಕಾಲಾಳು ಪಡೆಗಳ ಕಾರ್ಖಾನೆ
ಮೇಲ್ಜಾತಿಯ ರಚನಾತ್ಮಕ ನಿಯಂತ್ರಣವನ್ನು ಬಿಟ್ಟುಕೊಡದೆ ಸಾಮೂಹಿಕ ಚಳುವಳಿಯನ್ನು ನಿರ್ಮಿಸಲು, ಆರ್‌ಎಸ್‌ಎಸ್ ಅತ್ಯಾಧುನಿಕ, “ಶ್ರೇಣೀಕೃತ ಏಕೀಕರಣ” ಮಾದರಿಯನ್ನು ಅಭಿವೃದ್ಧಿಪಡಿಸಿತು:
ಬಹಿಷ್ಕೃತರ ಬಳಕೆ: ದೈನಂದಿನ ಶಾಖೆಯು (ಸ್ಥಳೀಯ ಶಾಖೆ) ಕಾರ್ಮಿಕ ವರ್ಗ ಮತ್ತು ಅಂಚಿನಲ್ಲಿರುವ ಯುವಕರನ್ನು ಗುರಿಯಾಗಿಸುತ್ತದೆ. ಇದು ಅವರಿಗೆ ತಕ್ಷಣದ ಗುರುತಿನ ಪ್ರಜ್ಞೆ, ಸಹೋದರತ್ವ, ದೈಹಿಕ ತರಬೇತಿ ಮತ್ತು ಆರ್ಥಿಕ ಸಂಕಷ್ಟದಿಂದ ಅಂಚಿನಲ್ಲಿರುವವರಿಗೆ ಸಬಲೀಕರಣದ ಅನುಭವದ ತೋರಿಕೆಯ ವಾತಾವರಣವನ್ನು ನೀಡುತ್ತದೆ. ಇದಕ್ಕಾಗಿ ಅವರು ತಮ್ಮನ್ನು ಶೋಷಿಸುತ್ತಾ ಬಂದಿರುವ ವರ್ಗಕ್ಕೆ- ರೊಟ್ಟಿ ತಿಂದ ನಾಯಿಯಂತೆ- ಋಣಿಗಳಾಗುತ್ತಾರೆ; ನಿಷ್ಟರಾಗಿ ಇರುತ್ತಾರೆ.
ರೆಡಿಮೇಡ್ “ಸಾಮಾನ್ಯ ಶತ್ರು”: ಆಂತರಿಕ ಜಾತಿ ಸಂಘರ್ಷವನ್ನು (ಸವರ್ಣ ಪ್ರಾಬಲ್ಯ ಮತ್ತು ಕೆಳಮಟ್ಟದ ಶೋಷಣೆ) ಬೈಪಾಸ್ ಮಾಡಲು, ಆರೆಸ್ಸೆಸ್ ನಿರಂತರವಾಗಿ ಅತಿ-ಗೋಚರ ಬಾಹ್ಯ ಬೆದರಿಕೆಯನ್ನು ಅವಲಂಬಿಸಿದೆ. ಐತಿಹಾಸಿಕವಾಗಿ ಮುಸ್ಲಿಂ, ಮತ್ತು ಉದ್ದೇಶಪೂರ್ವಕವಾಗಿ ಕ್ರಿಶ್ಚಿಯನ್ ಅಥವಾ ಎಡಪಂಥೀಯರು ಇವರ ಶತ್ರುಗಳು! ಅವರಿಲ್ಲದೇ ಇವರಿಲ್ಲ! “ಬೆದರಿಕೆ ಹಾಕುವ ಅವರು” ಮತ್ತು “ದೇಶ ರಕ್ಷಣೆ ಮಾಡುವ ನಾವು” ಎಂದು ಇಡೀ ಸಮಾಜವನ್ನು ವಿಭಜಿಸಿ, ಇಡೀ ಸಮುದಾಯಕ್ಕೆ ಅಸ್ತಿತ್ವದ ಅಪಾಯವನ್ನು ತೋರಿಸುವ (“ಹಿಂದೂ ಖತ್ರೆ ಮೇ ಹೈ”) ಮೂಲಕ, ಆಂತರಿಕವಾದ ಆರ್ಥಿಕ, ಸಾಮಾಜಿಕ ತಾರತಮ್ಯ, ಕುಂದುಕೊರತೆಗಳು, ಮೇಲ್ಜಾತಿ ವಿರೋಧಿ ಭಾವನೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲಾಗುತ್ತದೆ. ಆಂತರಿಕ ಜಾತಿ ಅಸಮಾನತೆಯನ್ನು ಟೀಕಿಸುವುದರಿಂದ “ಹಿಂದೂ ಧರ್ಮ ರಕ್ಷಣೆ”ಯ ಒಗ್ಗಟ್ಟು ದುರ್ಬಲವಾಗುತ್ತದೆ ಎಂದು ಗುಲಾಮಿ ಕಾಲಾಳುಗಳಿಗೆ ಮನವರಿಕೆ ಮಾಡಲಾಗುತ್ತದೆ.
ಶ್ರೇಣೀಕೃತ ಅಧಿಕಾರಶಾಹಿ: ಸಂಘ ಪರಿವಾರದೊಳಗಿನ ಮೇಲ್ಮುಖ ಚಲನಶೀಲತೆ ಇರುವುದು ನಿಜವಾದರೂ, ಅದನ್ನು ಎಚ್ಚರಿಕೆಯಿಂದ ನಿರ್ದೇಶಿಸಲಾಗುತ್ತದೆ. ಹಿಂದುಳಿದ ವರ್ಗಗಳು, ದಲಿತ ಅಥವಾ ಬುಡಕಟ್ಟು ಹಿನ್ನೆಲೆಯಿಂದ ಬಂದ ಸಮರ್ಥ ನಾಯಕರನ್ನು ಅಧೀನ ಮತ್ತು ವಿಶೇಷ ವಿಭಾಗಗಳಲ್ಲಿ ಉನ್ನತ ಸ್ಥಾನಗಳಿಗೆ ಏರಿಸಲಾಗುತ್ತದೆ – ಉದಾಹರಣೆಗೆ ವನವಾಸಿ ಕಲ್ಯಾಣ ಆಶ್ರಮ (ಸ್ಥಳೀಯ ಬುಡಕಟ್ಟುಗಳೊಂದಿಗೆ ಕೆಲಸ ಮಾಡುವುದು) ಅಥವಾ ಬಜರಂಗದಳ (ಬೀದಿ ಸಜ್ಜುಗೊಳಿಸುವಿಕೆ). ಇದು ಸಾಮೂಹಿಕವಾಗಿ ರಾಜಕೀಯ ಸಜ್ಜುಗೊಳಿಸುವಿಕೆಗೆ ಪ್ರಾಥಮಿಕ ವೇದಿಕೆಯಾಗಿ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಉನ್ನತ ಶ್ರೇಣಿಯನ್ನು ತಾರತಮ್ಯದ ಆರೋಪಗಳಿಂದ ರಕ್ಷಿಸುವ ಮಧ್ಯಮ ಮಟ್ಟದ ನಾಯಕತ್ವವನ್ನು ಸೃಷ್ಟಿಸುತ್ತದೆ. ಇವರನ್ನು ಜನಪ್ರತಿನಿಧಿಗಳನ್ನಾಗಿ, ಮಂತ್ರಿಗಳನ್ನಾಗಿಯೂ ಆಯ್ಕೆ ಮಾಡಲಾಗುತ್ತದೆ. ಆದರೆ, ಅವರು ಬಾಲ ಬಿಚ್ಚಿದರೆ ಅಥವಾ ಒಂದು ಹಂತದಿಂದ ಮೇಲಕ್ಕೆ ಏರಿದರೆ- ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತದೆ. ಅವರೇನೇದರೂ ಪ್ರತಿಭಟಿಸಿದರೆ, ಅವರ ಚಾರಿತ್ರ್ಯ ಹನನ ಮಾಡಲಾಗುತ್ತದೆ.
ಸುರಕ್ಷಿತ ಮೇಲ್ಜಾತಿ ನಾಯಕತ್ವ- ಬಲಿಪಶು ಕೆಳಜಾತಿ ಕುರಿಮಂದೆ!
ಈ ರೀತಿಯಾಗಿ ಆರೆಸ್ಸೆಸ್ಸಿನ ಬ್ರಾಹ್ಮಣ ನಾಯಕತ್ವ ಗುಪ್ತವಾಗಿ ಕೆಲಸಮಾಡಿದರೆ, ಉಳಿದಂತೆ ಅದು ಹೇಗೆ ತನ್ನ ಕಾರ್ಯಾಚರಣೆ ನಡೆಸುತ್ತದೆ ಎಂದು ಕರಾವಳಿಯಲ್ಲಿ ನನ್ನ ಅನುಭವದ ಆಧಾರದಲ್ಲಿ ಸರಳವಾಗಿ ವಿವರಿಸುತ್ತೇನೆ. ಆರೆಸ್ಸೆಸ್ಸಿನಲ್ಲಿ ಸೂತ್ರಧಾರಿಗಳಾಗಿರುವವರು ಅತ್ಯಂತ ಪ್ರಭಾವಿಗಳಾಗಿರುವ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮುಂದಾಳುಗಳು, ಧಾರ್ಮಿಕ ಅಥವಾ ರಾಜಕೀಯ ನಾಯಕರಾಗಿರುತ್ತಾರೆ. ಅವರು ಎಲ್ಲಿಯೂ ನೇರವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಇವರನ್ನು ಮುಟ್ಟಲು ಯಾವುದೇ ಸರಕಾರ ಹಿಂಜರಿಯುವ ಪರಿಣಾಮವಾಗಿ, ಪೊಲೀಸರೂ ಅಸಹಾಯಕರಾಗಿರಬೇಕಾಗುತ್ತದೆ. ಜಿಲ್ಲೆಯಲ್ಲಿ ಇದನ್ನು ಮೀರಿದ ಅನೇಕ ಅಧಿಕಾರಿಗಳು- ಯಾವುದೇ ಸರಕಾರವಿರಲಿ- ವರ್ಗಾವಣೆಗೆ ಒಳಗಾದ ಹಲವು ನಿದರ್ಶನಗಳಿವೆ. ಇವರು ಗಲಭೆಗಳಲ್ಲಿ, ಕ್ರಿಮಿನಲ್ ಕೃತ್ಯಗಳಲ್ಲಿ ಬಂಧಿತರಾದವರನ್ನು ಬಿಡಿಸುವುದು, ನೆರವು ನೀಡುವುದು ಇತ್ಯಾದಿಗಳ ಮೂಲಕ ಅವರನ್ನು ಜೀವನಪರ್ಯಂತ ಗುಲಾಮರನ್ನಾಗಿ ಮಾಡುತ್ತಾರೆ. ವಿವಾದ ಕೈ ಮೀರಿದರೆ, ಇವರು ಕೈ ಚೆಲ್ಲಿ ಬಡವರ ಮಕ್ಕಳನ್ನು ಜೈಲುಪಾಲು ಮಾಡಿ ತಾವು ಪಾರಾಗುತ್ತಾರೆ. ಕರ್ನಾಟಕ ಕರಾವಳಿಯ ಕೋಮುಗಲಭೆಗಳಲ್ಲಿ ಕೊಲೆಯಾದ, ಜೈಲು ಸೇರಿದ ಒಬ್ಬನೇ ಒಬ್ಬ ಬ್ರಾಹ್ಮಣನನ್ನು ನೀವು ನೋಡಲಾರಿರಿ.
ಎರಡನೇ ರೀತಿಯವರೆಂದರೆ, ಎರಡನೇ ಹಂತದ ನಾಯಕರಾಗಿರುವವರು. ಇಂತವರಲ್ಲಿ ಕೆಲವರು ತಾತ್ವಿಕ ನಿಷ್ಟೆ ಹೊಂದಿದ್ದರೂ, ಹೆಚ್ಚಿನವರು ಕೆಳಹಂತದ ರಾಜಕೀಯ ನಡೆಸುವ ಮರಿ ಪುಡಾರಿಗಳು, ಮರಳು, ಬಡ್ಡಿ ವ್ಯವಹಾರ, ಗೂಂಡಾಗಿರಿ, ವಸೂಲಿ, ಕ್ಲಬ್, ಜೂಜು, ವಾಹನ, ಭೂವ್ಯವಹಾರ, ಮ್ಯಾನ್ ಪವರ್ ಇತ್ಯಾದಿಯಾಗಿ ಅಕ್ರಮ ಚಟುವಟಿಕೆಗಳನ್ನೂ, ಅಂಗಡಿ, ಶೋರೂಂ, ಗುತ್ತಿಗೆ, ಮದ್ಯ ಮಾರಾಟ ಇತ್ಯಾದಿಯಾಗಿ ಅರೆಕಾನೂನು ಬಾಹಿರ, ಅಂದರೆ ಉದ್ದಿಮೆ ಕಾನೂನುಬದ್ಧವಾಗಿದ್ದರೂ ಅಕ್ರಮ ಚಟುವಟಿಕೆ ನಡೆಸುವ ವ್ಯವಹಾರಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಇವರು ಧಾರ್ಮಿಕ, ಕ್ರೀಡಾ ಸೋಗಿನ ಕಾರ್ಯಕ್ರಮಗಳನ್ನು ನಡೆಸುತ್ತಾ, ನೆರವು ನೀಡುತ್ತಾ, ಬಾವುಟ, ಬಂಟಿಂಗ್, ಬ್ಯಾನರ್, ಕಟೌಟ್ ಇತ್ಯಾದಿಗಳಲ್ಲಿ ಸ್ಪರ್ಧೆ ನಡೆಸುತ್ತಾ, ಕ್ಷುಲ್ಲಕ ಕಾರಣಗಳಿಗಾಗಿ ತಂಟೆ ತಕರಾರು, ಉದ್ವಿಗ್ನತೆ ಎಬ್ಬಿಸುತ್ತಾ , ಸಭೆ, ಪ್ರತಿಭಟನೆಗಳನ್ನು ಆಯೋಜಿಸುತ್ತಾ ಇರುತ್ತಾರೆ. ಇಂತವರಿಗೆ ಗೂಂಡಾ ಎಲಿಮೆಂಟುಗಳನ್ನು ಪೋಷಿಸುವುದು, ತಮ್ಮ ಚಟುವಟಿಕೆಗಳಿಗೆ ರಾಜಕೀಯ ಆಶೀರ್ವಾದ ಪಡೆಯುವುದು ಅನಿವಾರ್ಯವಾಗಿರುತ್ತದೆ. ಇವರು ಕೂಡಾ ಕಾನೂನಿನ ಕೈಗೆ ಸಿಗುವುದಿಲ್ಲ.
ಮೂರನೇ ವರ್ಗವೆಂದರೆ, ಇಂತಹಾ ಗಲಭೆ ಗಲಾಟೆಗಳಲ್ಲಿ ಭಾಗವಹಿಸಿ ಜೀವ ತೆಗೆಯುವ, ಜೀವ ಕಳೆದುಕೊಳ್ಳುವ, ಹಲ್ಲೆ ಮಾಡುವ, ಹಲ್ಲೆಗೆ ಒಳಗಾಗುವ, ಜೈಲುಪಾಲಾಗುವ, ಜೀವನ ಹಾಳುಮಾಡಿಕೊಳ್ಳುವ, ಹೆತ್ತವರು ಮತ್ತು ಕುಟುಂಬವನ್ನು ಸಂಕಟಕ್ಕೆ ತಳ್ಳುವ ಯುವಕರು. ಇವರಲ್ಲಿ ಕೆಲವರು ಪ್ರಾಮಾಣಿಕವಾಗಿಯೇ ಕೋಮು ಪಿತ್ತವನ್ನು ನೆತ್ತಿಗೇರಿಸಿಕೊಂಡವರು. ವಾಸ್ತವಿಕತೆಯನ್ನು ಗ್ರಹಿಸುವ ಬುದ್ಧಿಮತ್ತೆ ಇಲ್ಲದ ಪೂರ್ವಗ್ರಹ ಪೀಡಿತರು. ಇಂತವರಲ್ಲಿ ಕುಡುಕರು, ಗಾಂಜಾ ವ್ಯಸನಿಗಳು, ನಿರುದ್ಯೋಗಿಗಳು, ಸೋಮಾರಿಗಳು, ಶೋಕಿಲಾಲರು, ಗೂಂಡಾಗಳು, ಸೈಕೊಗಳು, ಕಳ್ಳ ದರೋಡೆಕೋರರು, ರೇಪಿಸ್ಟರೇ ಮೊದಲಾಗಿ ಪಕ್ಕಾ ಕ್ರಿಮಿನಲ್‌ಗಳೂ ಇರುತ್ತಾರೆ. ಮತ್ತೆ ಕೆಲವರು ಪಕ್ಕಾ ಅವಕಾಶವಾದಿಗಳು. ಮೊದಲಿಗೆ ಇವರಿಗೆ ನೆರವಾಗುವ ಸಂಘಟನೆಗಳು, ಪಕ್ಷಗಳು ಮುಳುಗುತ್ತಿರುವಾಗ ಕೈ ಬಿಡುತ್ತವೆ. ಸತ್ತಾಗ ಪ್ರತಿಭಟನೆಯ ನಾಟಕವಾಡುತ್ತಾ, ಪ್ರತೀಕಾರಕ್ಕಾಗಿ ಪ್ರಚೋದಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ.
ನಾಲ್ಕನೇ ವರ್ಗವೆಂದರೆ, ಇಂತಹಾ ಕೋಮುವಾದಿ ಚಟುವಟಿಕೆಗಳು, ಹಿಂಸಾಚಾರ, ಬಂದ್ ಪ್ರತಿಭಟನೆಗಳಿಂದ ಕೆಲಸವಿಲ್ಲದೇ ತೊಂದರೆ ಅನುಭವಿಸುವ, ಕೆಲವೊಮ್ಮೆ ಹಲ್ಲೆಗೂ ಒಳಗಾಗುವ ಕಾರ್ಮಿಕರಾದಿಯಾಗಿ ಜನಸಾಮಾನ್ಯರು. ಇವರು ಯಾವ ಚಟುವಟಕೆಗಳಲ್ಲಿ ಭಾಗವಹಿಸದಿದ್ದರೂ, ತೊಂದರೆ ಅನುಭವಿಸಿದರೂ, ಮಾನಸಿಕವಾಗಿ “ಅವರು-ನಾವು” ಎಂಬ ಮನಸ್ಥಿತಿ ಹೊಂದಿದ್ದು, ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಮುಗ್ಧವಾಗಿ ಬೆಂಬಲಿಸುವವರು ಅಥವಾ ಸಮರ್ಥಿಸುವವರು. ಆರೆಸ್ಸೆಸ್ಸಿನ “ಹಿಂದೂ ಧರ್ಮ ಅಪಾಯದಲ್ಲಿ”, “ಹಿಂದೂ ಒಂದು”, “ಮುಸ್ಲಿಮರು ದೇಶದ್ರೋಹಿಗಳು”, “ಮುಸ್ಲಿಮರು ಕ್ರಿಮಿನಲ್‌ಗಳು”, “ಚೀನಾ, ಪಾಕಿಸ್ಥಾನ, ಬಾಂಗ್ಲಾದೇಶ”, “ಭಾರತದ ಭವ್ಯಇತಿಹಾಸ”, “ಭಾರತ ವಿಶ್ವಗುರು” ತಿರುಚಿದ ಪಠ್ಯ ಪುಸ್ತಕ, ಕಥಾನಕ, ಪುರಾಣ ಮುಂತಾದ ಎಲ್ಲಾ ಕರೆನ್ಸಿ ನೋಟುಗಳು ಚಲಾವಣೆಯಲ್ಲಿರುವುದು ಇಂತಾ ಕುರಿಗಳಿಗಾಗಿ, ಮತ್ತು ಅವರ ಓಟಿಗಾಗಿ!
ಅವಕಾಶವಾದಿಯನ್ನು ತುಳು ಭಾಷೆಯಲ್ಲಿ ಸರಳವಾಗಿ ಹೀಗೆ ಹೇಳುತ್ತಾರೆ: “ಎದುರುಡು ಉಪ್ಪಯೆ! ಪಿರಪುಡು ತಪ್ಪಯೆ!”- ಅಂದರೆ, ಎದುರು ಇರುವುದಿಲ್ಲ; ಹಿಂದೆ ತಪ್ಪುವುದಿಲ್ಲ! ಇದುವೇ ಆರೆಸ್ಸೆಸ್!
– ನಿಖಿಲ್ ಕೋಲ್ಪೆ
