“..ಐಪಿಎಲ್‌ನ ಪ್ರಮುಖ ಪಂದ್ಯಗಳು, 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ, ಅಷ್ಟೇ ಅಲ್ಲದೆ 2030ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಗುಜರಾತ್ ರಾಜ್ಯದ ಆತಿಥ್ಯ.. ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಸಹ ದೆಹಲಿಯಿಂದ ಗುಜರಾತ್ ಗೆ ಶಿಫ್ಟ್.. ಅಷ್ಟಕ್ಕೂ ಈ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ಮಾನದಂಡಗಳೇನು?..” ಪತ್ರಕರ್ತ ಪ್ರಗತ್ ಕೆಆರ್ ಅವರ ಬರಹದಲ್ಲಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂದರೆ ಕೇವಲ ಪ್ರಶಸ್ತಿ ಪ್ರದಾನ ಸಮಾರಂಭವಲ್ಲ. ಭಾರತದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಚಿತ್ರರಂಗದ ಸೃಜನಶೀಲತೆಯನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ರಾಷ್ಟ್ರೀಯ ಆಚರಣೆ. ಇಂತಹ ಪ್ರತಿಷ್ಠಿತ ಸಮಾರಂಭ ಹಲವು ದಶಕಗಳಿಂದ ದೆಹಲಿಯಲ್ಲಿ ನಡೆದಿತ್ತು. ಆದರೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರಗೆ ಹೋಗಿದ್ದು, ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಸಲು ಕೇಂದ್ರ ಬಿಜೆಪಿ ಸರ್ಕಾರ ಆಯೋಜಿಸಿದೆ.
ಇದನ್ನು ಕೇವಲ ಸ್ಥಳ ಬದಲಾವಣೆಯಾಗಿ ನೋಡಿದರೆ ವಿಷಯ ಅಲ್ಲಿಗೇ ಮುಗಿಯಬಹುದು. ಆದರೆ ಇತ್ತೀಚಿನ ಹಲವು ಬೆಳವಣಿಗೆಗಳನ್ನು ಒಟ್ಟಾಗಿ ನೋಡಿದಾಗ ಕೆಲವು ಸಹಜ ಪ್ರಶ್ನೆಗಳು ಉದ್ಬವಿಸದೇ ಇರದು. ಅದರಲ್ಲಿ ಐಪಿಎಲ್‌ನ ಪ್ರಮುಖ ಪಂದ್ಯಗಳು ಗುಜರಾತ್ ನಲ್ಲಿ ನಡೆದಿರುವಂತದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಕೂಡಾ ಗುಜರಾತ್ ನಲ್ಲಿ ನಡೆದಿರುವಂತದ್ದು ಪ್ರಮುಖವಾಗಿ ಎದುರಾಗುವ ನಡೆಗಳು. ಅಷ್ಟೇ ಅಲ್ಲದೆ 2030ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಗುಜರಾತ್ ನ ಅಹಮದಾಬಾದ್ ಆತಿಥ್ಯವಿದೆ. ದೇಶದ ಇತರ ರಾಜ್ಯಗಳಿಗೂ ಸಮಾನ ಸಾಮರ್ಥ್ಯ, ಸಮಾನ ಮೂಲಸೌಕರ್ಯ, ಸಮಾನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾನ ರಾಷ್ಟ್ರೀಯ ಮಹತ್ವ ಇರುವಾಗ, ಒಂದೇ ರಾಜ್ಯಕ್ಕೆ ನಿರಂತರವಾಗಿ ಇಂತಹ ಪ್ರತಿಷ್ಠಿತ ಅವಕಾಶಗಳು ದೊರೆಯುತ್ತಿರುವುದರ ಹಿಂದಿನ ಮಾನದಂಡಗಳೇನು?
ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವೂ ಸಹ ಗುಜರಾತ್‌ನತ್ತ ಸಾಗಿರುವುದು ಎದ್ದು ಕಾಣುವಂತದ್ದು. ಇವೆಲ್ಲವೂ ಪ್ರತ್ಯೇಕ ಸಂಸ್ಥೆಗಳು ಮತ್ತು ಬೇರೆ ಬೇರೆ ಕಾರಣಗಳಿಗೆ ಸಂಬಂಧಿಸಿದ ನಿರ್ಧಾರಗಳಾಗಿರಬಹುದು. ಆದರೆ ದೇಶದ ಪ್ರತಿಷ್ಠಿತ ಕಾರ್ಯಕ್ರಮಗಳ ಆತಿಥ್ಯದಲ್ಲಿ ಗುಜರಾತ್ ನಿರಂತರವಾಗಿ ಮುಂಚೂಣಿಗೆ ಬರುತ್ತಿರುವುದರ ಹಿಂದೆ ಸರ್ಕಾರದ ಆಡಳಿತ ವ್ಯವಸ್ಥೆ ಅವಶ್ಯಕವಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಗುಜರಾತ್ ರಾಜ್ಯವನ್ನು ಮುಂಚೂಣಿಗೆ ತರಲು ಮುಂದಾಗಿರುವುದು ಎದ್ದು ಕಾಣುತ್ತದೆ.
ವಿಶೇಷವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ವಿಚಾರದಲ್ಲಿ ಈ ಪ್ರಶ್ನೆಗೆ ಹೆಚ್ಚಿನ ಮಹತ್ವವಿದೆ.
ಗುಜರಾತ್‌ಗೆ ತನ್ನದೇ ಆದ ಚಲನಚಿತ್ರ ಪರಂಪರೆ ಇಲ್ಲ ಎನ್ನಲಾಗದು. ಉತ್ತಮ ಗುಜರಾತಿ ಸಿನಿಮಾಗಳು ಈ ಹಿಂದೆ ಬಂದಿವೆ. ಪ್ರತಿಭಾವಂತ ಕಲಾವಿದರೂ ಇದ್ದಾರೆ. ಆದರೆ ಗತಕಾಲದ ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು, ಕೋಲ್ಕತ್ತಾ ಅಥವಾ ಕೊಚ್ಚಿಯಂತೆ ಗುಜರಾತ್‌ನ್ನು ಭಾರತದ ಪ್ರಮುಖ ಚಲನಚಿತ್ರ ನಿರ್ಮಾಣ ಕೇಂದ್ರವೆಂದು ಗುರುತಿಸುವ ಮಟ್ಟದ ಚಿತ್ರರಂಗದ ಇತಿಹಾಸ ಮತ್ತು ರಾಷ್ಟ್ರೀಯ ಪ್ರಭಾವವೇನಾದರೂ ಇದೆಯೇ.. ಖಂಡಿತಾ ಇಲ್ಲ.
ಇಲ್ಲಿ ಇತಿಹಾಸವೂ ಗಮನಾರ್ಹ
1970ರ ನವೆಂಬರ್ 21ರಂದು ಆಗಿನ ಮದ್ರಾಸ್‌ನ ಯೂನಿವರ್ಸಿಟಿ ಸೆಂಟಿನರಿ ಆಡಿಟೋರಿಯಂನಲ್ಲಿ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಆಗಿನ ಮದ್ರಾಸ್‌ನಲ್ಲಿ ನಡೆದಿತ್ತು. ಆ ಕಾಲದಲ್ಲಿ ಮದ್ರಾಸ್ ದಕ್ಷಿಣ ಭಾರತದ ಪ್ರಮುಖ ಚಲನಚಿತ್ರ ನಿರ್ಮಾಣ ಕೇಂದ್ರವಾಗಿತ್ತು. ತಮಿಳಿನ ಜೊತೆಗೆ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗಕ್ಕೂ ಮದ್ರಾಸ್ ಪ್ರಮುಖ ನೆಲೆಯಾಗಿತ್ತು. ರಾಷ್ಟ್ರೀಯ ಪ್ರಶಸ್ತಿಗಳ ಪ್ರಾದೇಶಿಕ ಜ್ಯೂರಿ ವ್ಯವಸ್ಥೆಯಲ್ಲಿಯೂ ಮದ್ರಾಸ್ ಪ್ರಮುಖ ಕೇಂದ್ರವಾಗಿತ್ತು. ಹೀಗಾಗಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳನ್ನು ಪ್ರತಿನಿಧಿಸುವ ಮತ್ತು ದಕ್ಷಿಣದ ಸಿನಿಮಾಗಳ ರಾಷ್ಟ್ರೀಯ ಪ್ರಾತಿನಿಧ್ಯವೂ ಈ ಸ್ಥಳಾಂತರದ ಉದ್ದೇಶವಾಗಿತ್ತು.
ಅಂದರೆ ದೆಹಲಿಯಿಂದ ಹೊರಗೆ ಸಮಾರಂಭವನ್ನು ಕೊಂಡೊಯ್ದಾಗ ಅದರ ಹಿಂದೆ ಚಿತ್ರರಂಗದ ವಾಸ್ತವಿಕತೆ ಮತ್ತು ಸಾಂಸ್ಕೃತಿಕ ಕಾರಣವೂ ಪರಿಗಣಿಸುವಂತದ್ದಾಗಿತ್ತು.
ಈಗ ಏಕ್ತಾ ನಗರವನ್ನು ಆಯ್ಕೆ ಮಾಡುವ ಹಿಂದಿನ ಪ್ರಮುಖ ಕಾರಣವೇನು? ಗುಜರಾತ್‌ನ ಏಕ್ತಾ ನಗರವನ್ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೆ ಆಯ್ಕೆ ಮಾಡಲು ಕೇಂದ್ರ ಸರ್ಕಾರ ತೆಗೆದುಕೊಂಡ ಮಾನದಂಡ? ಅಷ್ಟೇ ಅಲ್ಲದೆ ಬಾಲಿವುಡ್ ಸಾಮ್ರಾಜ್ಯವನ್ನೇ ಸರಿಗಟ್ಟುವಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳು ಸ್ಪರ್ಧೆಗೆ ಬಿದ್ದವರಂತೆ ಚಿತ್ರ ನಿರ್ಮಾಣ, ವಿಭಿನ್ನ ಪ್ರಯೋಗ ಮತ್ತು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ನಿರ್ಮಾಣ ಸಂಸ್ಥೆಗಳು ಇರುವಾಗ ಮತ್ತು ಮಹಾರಾಷ್ಟ್ರ ಸೇರಿದಂತೆ ದಕ್ಷಿಣದ ಆರು ರಾಜ್ಯಗಳಲ್ಲೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಸುವ ಮೂಲಸೌಕರ್ಯ ಮತ್ತು ಸಾಮರ್ಥ್ಯ ಇರುವಾಗ ಗುಜರಾತ್ ಮಾತ್ರ ಯಾಕೆ ಬೇಕಾಯ್ತು ಎಂಬುದು ಕೇಂದ್ರ ಸರ್ಕಾರ ಉತ್ತರಿಸಲೇಬೇಕಾದ ಪ್ರಶ್ನೆ.
ದೆಹಲಿಯ ಹೊರಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಡೆಸುವುದೇ ಉದ್ದೇಶವಾಗಿದ್ದರೆ, ಭಾರತೀಯ ಚಿತ್ರರಂಗದ ದಶಕಗಳ ಇತಿಹಾಸ ಹೊಂದಿರುವ ಮುಂಬೈ ಅಥವಾ ಚೆನ್ನೈಯಂತಹ ನಗರಗಳಿಗೆ ಏಕೆ ಆದ್ಯತೆ ನೀಡಲಿಲ್ಲ?
ಸ್ಪಷ್ಟವಾಗಿ ಇದು ಗುಜರಾತ್ ವಿರೋಧಿ ಪ್ರಶ್ನೆಯಲ್ಲ
ಗುಜರಾತ್‌ಗೆ ರಾಷ್ಟ್ರೀಯ ಕಾರ್ಯಕ್ರಮಗಳು ಸಿಗಬಾರದು ಎಂಬ ವಾದವೂ ಅಲ್ಲ. ಆದರೆ ಒಂದು ರಾಜ್ಯಕ್ಕೆ ನಿರಂತರವಾಗಿ ದೊಡ್ಡ ರಾಷ್ಟ್ರೀಯ ವೇದಿಕೆಗಳು ದೊರೆಯುತ್ತಿರುವಾಗ, ಆ ಆಯ್ಕೆಗಳ ಹಿಂದಿನ ನೀತಿ ಮತ್ತು ಮಾನದಂಡಗಳು ಸಾರ್ವಜನಿಕವಾಗಿರಬೇಕಲ್ಲವೇ? ಇಲ್ಲಿ ಮತ್ತೊಂದು ರಾಜಕೀಯ ಆಯಾಮವನ್ನು ಕಡೆಗಣಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನದ ಪ್ರಮುಖ ಹಂತಗಳು ಗುಜರಾತ್‌ನೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ಕೇಂದ್ರದ ಪ್ರಭಾವಶಾಲಿ ನಾಯಕತ್ವದಲ್ಲಿರುವ ಹಲವು ಪ್ರಮುಖ ಮುಖಗಳ ರಾಜಕೀಯ ನೆಲೆಯೂ ಗುಜರಾತ್. ಹೀಗಾಗಿ ಗುಜರಾತ್‌ಗೆ ನಿರಂತರವಾಗಿ ಸಿಗುತ್ತಿರುವ ರಾಷ್ಟ್ರೀಯ ಆದ್ಯತೆಗಳು ರಾಜಕೀಯ ಚರ್ಚೆಗೆ ಗ್ರಾಸವಾಗುವುದು ಸಹಜ.
ಗುಜರಾತ್‌ಗೆ ಈ ಅವಕಾಶಗಳು ಅದರ ಮೂಲಸೌಕರ್ಯ, ಆತಿಥ್ಯ ಸಾಮರ್ಥ್ಯ ಮತ್ತು ರಾಷ್ಟ್ರೀಯ ಮಹತ್ವದ ಆಧಾರದ ಮೇಲೆ ಸಿಗುತ್ತಿವೆಯೇ? ಹಾಗಿದ್ದರೆ ಕೇಂದ್ರ ಸರ್ಕಾರ ಆ ಮಾನದಂಡಗಳನ್ನು ಬಹಿರಂಗಪಡಿಸಲಿ. ದೇಶದ ಇತರ ರಾಜ್ಯಗಳಿಗಿಂತ ಗುಜರಾತ್ ಯಾವ ಹೆಚ್ಚುವರಿ ಅರ್ಹತೆಯನ್ನು ಹೊಂದಿದೆ ಎಂಬುದನ್ನೂ ಹೊರಗಿಡಬೇಕು.
ಮಹಾರಾಷ್ಟ್ರದ ಮುಂಬೈ ದೇಶದ ಆರ್ಥಿಕ ಮತ್ತು ಚಲನಚಿತ್ರ ರಾಜಧಾನಿ. ಚೆನ್ನೈ ದಕ್ಷಿಣ ಭಾರತದ ಐತಿಹಾಸಿಕ ಚಿತ್ರರಂಗದ ಕೇಂದ್ರ. ಬೆಂಗಳೂರು ತಂತ್ರಜ್ಞಾನ ಮತ್ತು ಸೃಜನಶೀಲ ಕ್ಷೇತ್ರಗಳ ಪ್ರಮುಖ ನಗರ. ಹೈದರಾಬಾದ್ ಭಾರತೀಯ ಸಿನಿಮಾದ ದೊಡ್ಡ ನಿರ್ಮಾಣ ಕೇಂದ್ರ. ಕೋಲ್ಕತ್ತಾ ಮತ್ತು ಕೊಚ್ಚಿಗೂ ತಮ್ಮದೇ ಆದ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆ ಇದೆ. ಹೀಗಿರುವಾಗ ರಾಷ್ಟ್ರೀಯ ಕಾರ್ಯಕ್ರಮಗಳ ಆತಿಥ್ಯದಲ್ಲಿ ವೈವಿಧ್ಯಕ್ಕಿಂತ ಕೇಂದ್ರೀಕರಣವೇ ಹೆಚ್ಚಾಗುತ್ತಿದೆ ಎಂಬ ಭಾವನೆ ಮೂಡಿದರೆ, ಅದಕ್ಕೆ ಸ್ಪಷ್ಟನೆ ನೀಡಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ.
ರಾಷ್ಟ್ರೀಯ ವೇದಿಕೆಗಳು ದೇಶದ ಎಲ್ಲಾ ರಾಜ್ಯಗಳಿಗೂ ಸೇರಿವೆ. ಒಂದು ರಾಜ್ಯದ ಅಭಿವೃದ್ಧಿಯನ್ನು ಸ್ವಾಗತಿಸುವುದರ ಜೊತೆಗೆ ಉಳಿದ ರಾಜ್ಯಗಳಿಗೂ ಸಮಾನ ಅವಕಾಶ ದೊರೆಯಬೇಕೆಂದು ಒತ್ತಾಯಿಸುವುದು ಪರಸ್ಪರ ವಿರೋಧಾಭಾಸವಲ್ಲ. ಅದಕ್ಕೆ ಉತ್ತರ ನೀಡುವುದು ಗುಜರಾತ್‌ನ ಜವಾಬ್ದಾರಿಯಲ್ಲ. ಕೇಂದ್ರ ಸರ್ಕಾರದ ಜವಾಬ್ದಾರಿ. ಉತ್ತರ ಸ್ಪಷ್ಟವಾಗಿದ್ದರೆ ಅನುಮಾನಗಳಿಗೆ ಜಾಗವಿರುವುದಿಲ್ಲ.
ಕೇಂದ್ರ ಸರ್ಕಾರ ಇದಕ್ಕೆ ಉತ್ತರ ನೀಡುತ್ತದೆ ಎಂಬ ನಿರೀಕ್ಷೆ ಅಂತೂ ಇಲ್ಲ. ಆದರೆ ಇಂತಹ ನೂರಾರು ಪ್ರಶ್ನೆಗಳಲ್ಲಿ ಈ ಒಂದು ಪ್ರಶ್ನೆ ಸಹ ಒಂದಾಗಲಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಸ್ಥಳಾಂತರವೂ ಗುಜರಾತ್‌ಗೆ ಸಂಬಂಧಿಸಿದಂತೆ ಈಗಾಗಲೇ ಕೇಳಿಬರುತ್ತಿರುವ ಹಲವು ಪ್ರಶ್ನೆಗಳ ಪಟ್ಟಿಗೆ ಮತ್ತೊಂದು ಪ್ರಶ್ನೆಯಾಗಿ ಅಷ್ಟೇ ಉಳಿಯಲಿದೆ.
ವಿಶೇಷ ಎಂದರೆ ಈ ಎಲ್ಲಾ ಪ್ರಶ್ನೆಗಳು ಹುಟ್ಟಬೇಕಿರುವುದು ಆಯಾ ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿಗೆ, ಕಲಾವಿದರ ಸಂಘಗಳಿಗೆ, ನಿರ್ಮಾಪಕರು ನಿರ್ದೇಶಕರನ್ನೊಳಗೊಂಡ ತಂತ್ರಜ್ಞರ ಸಂಘಗಳಿಗೆ. ಮೇಲ್ನೋಟಕ್ಕೆ ತಿಳಿದಂತೆ ಈ ಯಾವ ಪ್ರಶ್ನೆಗಳೂ ಈವರೆಗೆ ಯಾವ ಸಂಘಗಳಿಂದಲೂ ಬಂದಂತಿಲ್ಲ. ವಿಶೇಷವಾಗಿ ಬಾಲಿವುಡ್ ಪ್ರತಿನಿಧಿಸುವ ಮಹಾರಾಷ್ಟ್ರ, ದಕ್ಷಿಣ ಭಾರತವನ್ನು ಪ್ರತಿನಿಧಿಸುವ ಯಾವ ದಕ್ಷಿಣದ ರಾಜ್ಯಗಳೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಸ್ಥಳಾಂತರದ ಬಗ್ಗೆ ದನಿ ಎತ್ತಿಲ್ಲ.
ಭಾರತದ ರಾಷ್ಟ್ರೀಯ ವೇದಿಕೆಗಳು ಭಾರತದ ಎಲ್ಲ ರಾಜ್ಯಗಳಿಗೂ ಸೇರಬೇಕು. ಅವು ಒಂದೇ ರಾಜ್ಯದ ಪ್ರತಿಷ್ಠೆಯ ವೇದಿಕೆಗಳಾಗಬಾರದು.
