ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುಂದುವರಿಸಲು ಜೆಡಿಎಸ್ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಮೈತ್ರಿಗೆ ಯಾವುದೇ ಧಕ್ಕೆಯಾಗದಂತೆ ಚುನಾವಣೆ ಎದುರಿಸಲು ಪಕ್ಷದ ವರಿಷ್ಠರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೇ ಬೆಂಗಳೂರಿನಲ್ಲೂ ಮರುಕಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸ್ಥಳೀಯವಾಗಿ ಏನೇ ಗೊಂದಲಗಳಿದ್ದರೂ ಬಹಿರಂಗ ಹೇಳಿಕೆ ನೀಡಬಾರದು ಮತ್ತು ಮೈತ್ರಿ ಧರ್ಮ ಪಾಲಿಸುವಂತೆ ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು, ಸಿರ್ಸಿ ವೃತ್ತದ ಮೇಲ್ಸೇತುವೆ ನಿರ್ಮಾಣ ಮತ್ತು ಐಟಿ ಕ್ಷೇತ್ರಕ್ಕೆ ನೀಡಿದ ಉತ್ತೇಜನ ಸೇರಿದಂತೆ ಜೆಡಿಎಸ್ ಕೊಡುಗೆಗಳನ್ನು ಜನರಿಗೆ ತಿಳಿಸುವಂತೆ ಸಲಹೆ ನೀಡಿದರು. ವಾರ್ಡ್ ಮತ್ತು ಮತಗಟ್ಟೆ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಅವರು ಕರೆ ನೀಡಿದರು.
ಇದೇ ವೇಳೆ, ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಜನವರಿ 24 ರಂದು ಹಾಸನದಲ್ಲಿ ಬೃಹತ್ ‘ಜನತಾ ಸಮಾವೇಶ’ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.
