ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯ ಫಲಿತಾಂಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೊಂದು ‘ಮತಗಳ್ಳತನ’ದ ಮತ್ತೊಂದು ಅಧ್ಯಾಯ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಮತದಾನದ ವೇಳೆ ಬೆರಳಿಗೆ ಹಚ್ಚುವ ಅಳಿಸಲಾಗದ ಶಾಯಿಯನ್ನು ಸ್ಯಾನಿಟೈಸರ್ ಹಾಗೂ ಅಸಿಟೋನ್ ಬಳಸಿ ಸುಲಭವಾಗಿ ಅಳಿಸಿ ಹಾಕಬಹುದಾಗಿತ್ತು ಎಂಬ ಮಾಧ್ಯಮ ವರದಿಗಳು ಮತ್ತು ವೈರಲ್ ವಿಡಿಯೋಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ.
ಈ ಬಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಾಯಿಯನ್ನು ಅಳಿಸಲು ಸಾಧ್ಯವಾಗುತ್ತಿರುವುದು ಕೇವಲ ತಾಂತ್ರಿಕ ದೋಷವಲ್ಲ. ಇದು ವ್ಯವಸ್ಥಿತ ಮತಗಳ್ಳತನದ ಭಾಗವಾಗಿದೆ ಎಂದು ದೂರಿದ್ದಾರೆ. ಇಂತಹ ಬೆಳವಣಿಗೆಗಳು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾದ ವಿಷಯವಲ್ಲ. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಜನರ ನಂಬಿಕೆ ನಾಶವಾಗುತ್ತದೆ. ಪ್ರಶ್ನೆಗಳನ್ನು ಮೌನವಾಗಿಸುವ ಅಥವಾ ನಿರಾಕರಿಸುವ ಪ್ರವೃತ್ತಿ ಅಪಾಯಕಾರಿ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
