Home ಬೆಂಗಳೂರು ಅವರಿಗೆ ದುಡ್ಡು ಮಾಡುವ ಚಪಲ, ನನಗೆ ಜನರನ್ನು ಗಳಿಸುವ ಚಪಲ: ಎಚ್.ಡಿ. ಕುಮಾರಸ್ವಾಮಿ

ಅವರಿಗೆ ದುಡ್ಡು ಮಾಡುವ ಚಪಲ, ನನಗೆ ಜನರನ್ನು ಗಳಿಸುವ ಚಪಲ: ಎಚ್.ಡಿ. ಕುಮಾರಸ್ವಾಮಿ

0

“ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲವಿದ್ದರೆ, ನನಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಚಪಲವಿದೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಗೆ ಮಾತನಾಡುವ ಚಪಲವಿದೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ನೀಡಿದ ಅವರು, ತಾವು ಅಕ್ರಮಗಳನ್ನು ಬಯಲಿಗೆಳೆಯಲು ಮತ್ತು ಜನರೊಂದಿಗೆ ಸಂಪರ್ಕದಲ್ಲಿರಲು ಮಾತನಾಡುತ್ತಿರುವುದಾಗಿ ಸಮರ್ಥಿಸಿಕೊಂಡರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಜಾತಿಯವರಿಂದಲೇ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, “ಕಷ್ಟ ಬಂದಾಗ ಮಾತ್ರ ಇವರಿಗೆ ಜಾತಿ ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ಸಮುದಾಯಕ್ಕೆ ಏನೂ ಮಾಡದೆ, ಕೇವಲ ಅಕ್ರಮ ಸಂಪಾದನೆ, ಫೆನ್ಸಿಂಗ್ ಮತ್ತು ಲೂಟಿ ಮಾಡಲು ನೋಡುವವರಿಗೆ ಜಾತಿ ಹೆಸರಿನಲ್ಲಿ ಜನರು ಬೆಂಬಲ ನೀಡುವುದಿಲ್ಲ” ಎಂದು ಟೀಕಿಸಿದರು.

ಜೆಡಿಎಸ್ ಪಕ್ಷ ನಿರ್ನಾಮವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ, “ನಮ್ಮ ಪಕ್ಷದ ಬಗ್ಗೆ ನಿಮ್ಮ ಸರ್ಟಿಫಿಕೇಟ್ ಅಗತ್ಯವಿಲ್ಲ, ಪಕ್ಷ ಉಳಿಯುತ್ತೋ ಅಳಿಯುತ್ತೋ ಎಂದು ಜನರೇ ತೀರ್ಮಾನಿಸುತ್ತಾರೆ. ಮೊದಲು ನಿಮ್ಮ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ‘ಲೀಸ್ ಅವಧಿ’ ಗಲಾಟೆಯತ್ತ ಗಮನಹರಿಸಿ” ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನಲ್ಲಿರುವ ಸಿಎಂ ಸೇರಿದಂತೆ ಅನೇಕ ಸಚಿವರು ಮೂಲತಃ ಜೆಡಿಎಸ್‌ನಿಂದ ‘ಲೀಸ್’ ಮೇಲೆ ಹೋದವರೇ ಆಗಿದ್ದಾರೆ ಎಂದು ಕುಮಾರಸ್ವಾಮಿ ತಿವಿದರು. ಮಹಾರಾಷ್ಟ್ರ ಮತ್ತು ಬಿಹಾರದ ಚುನಾವಣಾ ಫಲಿತಾಂಶಗಳನ್ನೇ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಎದುರಿಸಬೇಕಾಗುತ್ತದೆ. ದುರಹಂಕಾರ ಬಿಡದಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

You cannot copy content of this page

Exit mobile version