2023 ರ ಡಿಸೆಂಬರ್ ತಿಂಗಳಲ್ಲೇ ಹಾಸನದ ಜಿಲ್ಲಾ ಬಿಜೆಪಿ ಮುಖಂಡರೊಬ್ಬರು ತಮ್ಮ ಹೈಕಮಾಂಡ್ ಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣನ ಬಗ್ಗೆ ಮುನ್ನೆಚ್ಚರಿಕೆ ತಿಳಿಸಿದ್ದರು. ಅಷ್ಟೇ ಅಲ್ಲದೇ ಹಾಸನದ ಬಿಜೆಪಿ ಮುಖಂಡ, ಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇ ಗೌಡ 2023 ರಂದೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ವಿಡಿಯೋ ಸಾಕ್ಷಿ ಬಗ್ಗೆ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ್ದರು.
ಅಷ್ಟೇ ಅಲ್ಲದೇ ಬಿಜೆಪಿ ಜೆಡಿಎಸ್ ಮೈತ್ರಿಗೆ ಇಡೀ ಹಾಸನದ ಯಾವ ನಾಯಕರಿಗೂ ಸಮ್ಮತಿ ಇರಲಿಲ್ಲ. ಈ ಬಗ್ಗೆ ಹಾಸನ ಜಿಲ್ಲಾ ಬಿಜೆಪಿ ಸಮಿತಿ ಬಹಿರಂಗವಾಗಿ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿತ್ತು. ಅದು ಜೆಡಿಎಸ್ ಜೊತೆಗಿನ ತಮ್ಮ ಸೈದ್ಧಾಂತಿಕ ವಿರೋಧದ ಜೊತೆಗೆ ರೇವಣ್ಣ ಕುಟುಂಬದ ಇಂತಹ ಲೈಂಗಿಕ ಹಗರಣದ ವಿಚಾರವನ್ನೇ ಮುಖ್ಯವಾಗಿಸಿಕೊಂಡು ತನ್ನ ಅಭಿಪ್ರಾಯ ತಿಳಿಸಿತ್ತು.
ಈ ನಡುವೆ ತಮ್ಮ ಯಾವುದೇ ರಾಜ್ಯ ನಾಯಕರಿಗೆ ತಿಳಿಸದೇ, ಇತ್ತ ರಾಜ್ಯ ಬಿಜೆಪಿ ನಾಯಕರಿಗೂ ಸಹ ತಿಳಿಸದೇ ದೇವೇಗೌಡರ ಪೂರ್ತಿ ಕುಟುಂಬ ನೇರವಾಗಿ ನರೇಂದ್ರ ಮೋದಿ, ಜೆಪಿ ನಡ್ಡಾ ಹಾಗೂ ಅಮಿತ್ ಶಾ ಭೇಟಿ ಮಾಡಿ ತಮ್ಮ ಮೈತ್ರಿ ಕುದುರಿಸಿಕೊಂಡಿದ್ದರು. ಈ ಬಗ್ಗೆ ಎರಡೂ ಪಕ್ಷಗಳ ನಾಯಕರಿಗೆ ತೀವ್ರ ಅಸಮಾಧಾನ ಇದ್ದರೂ ಹೈಕಮಾಂಡ್ ಕಟ್ಟಪ್ಪಣೆ ಮೀರದ ಒಂದು ನಿಯಮ ಎರಡೂ ಪಕ್ಷಗಳಲ್ಲಿ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಮೈತ್ರಿ ಒಪ್ಪಿಕೊಳ್ಳಬೇಕಾಯಿತು.
ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಜೆಡಿಎಸ್ ನ ಯಾವುದೇ ಅಕ್ರಮಕ್ಕೂ ಕೇಂದ್ರ ಬಿಜೆಪಿ ನಾಯಕರ ಸಹಕಾರ ಅಥವಾ ರಕ್ಷಣೆ ಸಿಕ್ಕೇ ಸಿಗುತ್ತೆ ಎಂಬ ಅಂಶವೇ ರೇವಣ್ಣ ಕುಟುಂಬಕ್ಕೆ ದೊಡ್ಡ ಭರವಸೆಯಾಗಿತ್ತು. ಕೇಂದ್ರ ನಾಯಕರ ಮೂಲಕ ರಾಜ್ಯ ನಾಯಕರ ಬಾಯಿ ಮುಚ್ಚಿಸುವ ಬಗ್ಗೆಯೂ ದೇವೇಗೌಡರ ಕುಟುಂಬ ಯೋಚಿಸಿತ್ತು ಎಂಬುದು ಸುಳ್ಳಲ್ಲ. ಆಮೇಲೆ ಈಗ ಪ್ರಜ್ವಲ್ ಜರ್ಮನಿಗೇ ಎಸ್ಕೇಪ್ ಆಗಿರುವ ಪ್ರಕರಣದ ಹಿಂದೆಯೂ ಬಿಜೆಪಿ ಕೇಂದ್ರ ನಾಯಕರ ಕೃಪೆ ಇರಬಹುದೇ ಎಂಬ ಅನುಮಾನ ಕೂಡ ವ್ಯಕ್ತವಾಗಿವೆ.
ದೇವೇಗೌಡರ ಕುಟುಂಬಕ್ಕೆ ಕೇಂದ್ರ ನಾಯಕರ ಕೃಪೆ ಒಂದು ಕಡೆಯಾದರೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹ ಪ್ರಜ್ವಲ್ ರೇವಣ್ಣನ ಬಗ್ಗೆ ಇಷ್ಟೆಲ್ಲ ಸತ್ಯ ಗೊತ್ತಿದ್ದರೂ ಮುಚ್ಚಿಟ್ಟು, ಟಿಕೇಟ್ ನೀಡಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಹಾಸನ ಜಿಲ್ಲಾ ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣನಿಗೆ ಟಿಕೇಟ್ ನೀಡಿದ್ದೇ ಆದರೆ ಚುನಾವಣೆ ಸಮಯದಲ್ಲಿ ಇಡೀ ರಾಜ್ಯ ಬಿಜೆಪಿ ಮುಜುಗರಕ್ಕೆ ಸಿಕ್ಕುವ ಸಾಧ್ಯತೆ ಇದೆ ಎಂದು ಏಚ್ಚರಿಸಿದ್ದರೂ ಈ ಬಗ್ಗೆ ಗಮನಹರಿಸದೇ ಟಿಕೇಟ್ ಅಂತಿಮಗೊಳಿಸಿದುದರ ಹಿಂದೆ, ಪ್ರಜ್ವಲ್ ರೇವಣ್ಣನಿಗೆ ಬಿಜೆಪಿ ಕೃಪೆ ಇತ್ತೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿವೆ.
ಇನ್ನು ಏಪ್ರಿಲ್ 28 ರ ಭಾನುವಾರವೇ ಪ್ರಜ್ವಲ್ ರೇವಣ್ಣ ಹಾಗು ಆತನ ತಂದೆ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿ ಎಫ್ಐಆರ್ ಆಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ಎ (ಲೈಂಗಿಕ ಕಿರುಕುಳ), 354ಡಿ (ಹಿಂಬಾಲಿಸುವಿಕೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಅತಿರೇಕದ ವರ್ತನೆ) ಅಡಿಯಲ್ಲಿ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಸಿಐಡಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಸ್‌ಐಟಿ ತನಿಖೆ ನಡೆಸುತ್ತಿದೆ.