ಭಾರತದ ಎರಡನೇ ಹಂತದ ಮತ್ತು ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಉಳಿದವರಂತೆ ನಾನೂ ಮತ ಚಲಾಯಿಸಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಒಂದು ಮೂಲೆಯಲ್ಲಿ ಇರುವ ನಮ್ಮ ಊರಿಗೆ ಕೆಲವರ್ಷಗಳಿಂದ ಪ್ರತ್ಯೇಕ ಮತಗಟ್ಟೆ ಇದೆ. ನಮ್ಮಲ್ಲಿ ಯಾವಾಗಲೂ ಶಾಂತಿಯುತವಾಗಿ ಮತದಾನ ನಡೆಯುತ್ತದೆ. ಈ ಬಾರಿಯೂ ನಡೆಯಿತು. ಯಾವತ್ತೂ ಯಾವುದೇ ಹಿಂಸಾಚಾರ ನಡೆದಿಲ್ಲ. ಆದರೂ, ಸುಮ್ಮನೇ ಹಿಂದೆ ಇದ್ದ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ಉಂಟಾಗಿರುವ ವ್ಯತ್ಯಾಸದ ಕುರಿತು ಸುಮ್ಮನೇ ಕುಳಿತು ಯೋಚಿಸಿದಾಗ ದುಃಖವಾಗುತ್ತದೆ.
1951-52ರ ಸ್ವತಂತ್ರ ಭಾರತದ ಮೊದಲ ಚುನಾವಣೆಯ ನಮ್ಮ ಗ್ರಾಮದ ಮತದಾರರ ಪಟ್ಟಿ ನನ್ನ ಬಳಿ ಇದೆ. ಆಗ ಅದು ಬೆಳ್ತಂಗಡಿ ಕ್ಷೇತ್ರಕ್ಕೆ ಸೇರಿತ್ತು. ಇದು ನನ್ನ ಹಿರಿಯರ ಬಳುವಳಿ. ಶಾಲೆಗೆ ಹೋಗುತ್ತಿದ್ದಾಗ ಮಂಗಳೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿ.ಎಂ. ಪೂಣಚ್ಚ ಅವರ ಪೋಸ್ಟರುಗಳನ್ನು ನೋಡಿದ ನೆನಪಿದೆ. ಜೋಡುಎತ್ತು, ಗುಡಿಸಲು, ಹಸು-ಕರು, ಜನಸಂಘದ ದೀಪ ಇತ್ಯಾದಿ ಚಿಹ್ನೆಗಳ ಪೋಸ್ಟರುಗಳೂ, ಗೋಡೆಬರಹಗಳೂ ಬಹಳ ವರ್ಷಗಳ ಕಾಲ ನಮ್ಮ ಪೇಟೆಗೋಡೆಗಳಲ್ಲಿ ಇತಿಹಾಸವನ್ನು ನೆನಪಿಸುತ್ತಿದ್ದವು. ಆಗೆಲ್ಲಾ ಪೋಸ್ಟರ್‌ಗಳೂ ಅಪರೂಪ- ದೊಡ್ಡ ದೊಡ್ಡ ಫ್ಲೆಕ್ಸ್‌ಗಳ ಮಾತೇ ಬಿಡಿ. ನಂತರ ಸಿಕ್ಕಸಿಕ್ಕಲ್ಲಿ ಪೋಸ್ಟರ್ ಅಂಟಿಸುವುದು, ಸುಂದರ ಮತ್ತು ಕುರೂಪಿ ಗೋಡೆ ಬರಹ, ರಸ್ತೆ ಬರಹಗಳ ನಿಷೇಧವಾದ ನಂತರ ನಗರ ಪೇಟೆಗಳು ಚುನಾವಣೆಯ ಮಟ್ಟಿಗಾದರೂ ಸ್ವಚ್ಛವಾಗಿ ಉಳಿದಿವೆ ಎಂಬು ಒಳ್ಳೆಯ ಮಾತೇ. ಆದರೆ, ಇಂದು ಚುನಾವಣೆಗಳು ಅಥವಾ ರಾಜಕೀಯ ಸ್ವಚ್ಛವಾಗಿ ಉಳಿದಿವೆಯೇ? ಇದರ ಇನ್ನೊಂದು ಮುಖವೆಂದರೆ, ಎಲ್ಲಾ ರೀತಿಯ ಜಾಹೀರಾತುಗಳಿಗೆ ಕೋಟ್ಯಂತರ ರೂ. ಖರ್ಚು ಮಾಡಬಲ್ಲ ಶ್ರೀಮಂತ ಪಕ್ಷಗಳು ಮಾತ್ರವೇ ಪ್ರಚಾರ ಮಾಡಲು ಸಾಧ್ಯ. ಈ ವಿಷಯದಲ್ಲೀಗ ಬಿಜೆಪಿ ಬ್ಲ್ಯಾಕ್‌ಮೈಲ್ ಬಾಂಡುಗಳ ಮೂಲಕ ಸಂಗ್ರಹಿಸಿದ ಕೊಟ್ಯಂತರ ರೂ.ಗಳೇ ಮೈಲುಗಳಷ್ಟು ಮುಂಚೂಣಿಯಲ್ಲಿವೆ. ಆಳುವ ಪಕ್ಷದ ಈ “ಅನುಕೂಲತೆ” ಮತ್ತು ಪಕ್ಷಗಳ ನಡುವಿನ ತೀವ್ರ ಅಸಮಾನತೆಯು- ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಪ್ರಜಾಪ್ರಭುತ್ವವಾದಿ ಚುನಾವಣೆಗಳ ಮೂಲತತ್ವಗಳಿಗೇ ಮಾರಕ.
ಇನ್ನು ಊರೊಳಗಿನ ಸಾಮಾಜಿಕ ವಾತಾವರಣಕ್ಕೆ ಬರೋಣ. ಹಿಂದೆಲ್ಲಾ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಮನೆಮನೆ ಪ್ರಚಾರಕ್ಕೆ ಕೊಡುತ್ತಿದ್ದದು- ಒಂದಿಷ್ಟು ಕರಪತ್ರಗಳು ಮತ್ತು ಮತದಾರರಿಗೆ ನೀಡಲಾಗುತ್ತಿದ್ದ ಚಿಕ್ಕ ಚಿಕ್ಕ ಚೀಟಿಗಳು ಮಾತ್ರ. ಆಯಾ ಪಕ್ಷಗಳವರು ಸ್ಥಳೀಯವಾಗಿ ಸಂಗ್ರಹಿಸಿದ ಹಣದಿಂದಲೇ ಎಲ್ಲವೂ ನಡೆಯುತ್ತಿತ್ತು. ನಂತರ ಮದ್ಯ, ಹಣ, ಉಡುಗೊರೆ ಎಲ್ಲವನ್ನೂ ನೀಡಿ ಮತದಾರರನ್ನು ಕೊಳ್ಳುವ ಪ್ರಕ್ರಿಯೆ ಆರಂಭವಾಗಿ, ಇಂದು ಯಾವ ಮಟ್ಟಕ್ಕೆ ಮುಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿಯೂ ಕೋಟ್ಯಂತರ ರೂ. ಹಣವಿರುವ ಬಿಜೆಪಿಗೇ ಅನುಕೂಲ.
ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಚುನಾವಣೆಯ ದಿನವೂ ಎಲ್ಲವೂ ಸೌಹಾರ್ದದಿಂದಲೇ ನಡೆಯುತ್ತಿತ್ತು. ಒಂದೇ ಕುಟುಂಬದ ಸದಸ್ಯರು, ಗೆಳೆಯರು ಬೇರೆಬೇರೆ ಪಾಳಯಗಳಲ್ಲಿ ಇದ್ದರೂ, ಮತಗಟ್ಟೆಗಳ ಮುಂದೆ ಹಾಕುತ್ತಿದ್ದ ಟೆಂಟುಗಳಿಗೆ ಪರಸ್ಪರ ಭೇಟಿ, ಕೈಕುಲುಕುವಿಕೆ ಸಾಮಾನ್ಯವಾಗಿತ್ತು. ಚುನಾವಣೆ ಮುಗಿದ ಮರುದಿನ ಯಾವುದೇ ಚಿಕ್ಕಪುಟ್ಟ ಉದ್ವಿಗ್ನತೆ ಇದ್ದರೂ ಮಾಯವಾಗುತ್ತಿತ್ತು. ಫಲಿತಾಂಶ ಬಂದ ನಂತರ ಎಲ್ಲರೂ ಮತದಾರರ ತೀರ್ಮಾನವನ್ನು ಒಪ್ಪುತ್ತಿದ್ದರು. ಮತ್ತೆ ಎಂದಿನಂತೆ ಎಲ್ಲವೂ ನಡೆಯುತ್ತಿತ್ತು. ಇದೇ ಪ್ರಜಾಪ್ರಭುತ್ವದ ಗೆಲುವು. ನಾನು ಹೇಳುತ್ತಿರುವುದು ಏನೆಂದರೆ, ಸಾಮಾನ್ಯವಾಗಿ ಎಲ್ಲರಿಗೂ ಪ್ರಜಾಪ್ರಭುತ್ವದ ಮುಖ್ಯ ಪ್ರಕ್ರಿಯೆಯಾದ ಚುನಾವಣೆಯ ನ್ಯಾಯಬದ್ಧತೆಯ ಮೇಲೆ ನಂಬಿಕೆಯಿತ್ತು. ಚುನಾವಣಾ ಆಯೋಗದ ಮೇಲೆ ನಂಬಿಕೆಯಿತ್ತು. ಈಗ ಹಾಗಿದೆಯೇ?
ಒಂದು ತಪ್ಪು ತಿಳುವಳಿಕೆ ಬೇಡ. ನಾನು ಮೇಲೆ ಹೇಳಿರುವುದು ನಮ್ಮ ಕ್ಷೇತ್ರದಲ್ಲಿ ನನ್ನ ಸ್ವಂತ ಅನುಭವದ ಪ್ರಕಾರ ಮಾತ್ರ. ಆದರೆ, ಕೆಲವು ರಾಜ್ಯಗಳಲ್ಲಿ, ಅದರಲ್ಲೂ ಉತ್ತರದ ರಾಜ್ಯಗಳಲ್ಲಿ, ಮುಖ್ಯವಾಗಿ ಫ್ಯೂಡಲ್ ಅಥವಾ ಪಾಳೇಗಾರಿ ಶಕ್ತಿಗಳು ಪ್ರಬಲವಾಗಿರುವಲ್ಲಿ ದಲಿತ ಮತ್ತು ದುರ್ಬಲ ವರ್ಗಗಳಿಗೆ ಮತ ಚಲಾಯಿಸದಿರಲು ಬಲವಂತ ಮಾಡುವುದು, ಬೆದರಿಸುವುದು, ನಕಲಿ ಮತದಾನ, ಸಶಸ್ತ್ರ ಗೂಂಡಾಗಳು ಮತಗಟ್ಟೆಗಳನ್ನು ವಶಕ್ಕೆ ತೆಗೆದುಕೊಂಡು ತಮಗೆ ಬೇಕಾದವರಿಗೆ ಮತ ಒತ್ತಿ ಪೆಟ್ಟಿಗೆಗೆ ಹಾಕುವುದು, ವಿರೋಧಿ ಮತಗಳು ಹೆಚ್ಚಾಗಿರುವ ಮತಗಟ್ಟೆಗಳಲ್ಲಿ ದೊಂಬಿ ಎಬ್ಬಿಸುವುದು ಇತ್ಯಾದಿ ಅಲ್ಲಿ ಇಲ್ಲಿ ನಡೆಯುತ್ತಿದ್ದವು ಎಂಬುದು. ಆದರೆ, ಈಗ ಇವು ಬುಲ್ಡೋಜರ್ ಮಾಡೆಲ್ ರಾಜ್ಯಗಳಲ್ಲಿ ಕಡಿಮೆಯಾಗಿವೆಯೆ? ಚುನಾವಣೆಗೆ ಮೊದಲೇ ಫಲಿತಾಂಶದ ಮೇಲೆ ಪ್ರಭಾವ ಬೀರುವ ಹಲವಾರು ತಂತ್ರಗಳನ್ನು ಆಳುವ ಪಕ್ಷವು ಅನುಸರಿಸುತ್ತಿದೆ. ಅದಕ್ಕಾಗಿ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳನ್ನೇ ಸುತ್ತುಬಳಸಿ ಬೇಳೆಬೇಯಿಸಿಕೊಳ್ಳುವ ತಂತ್ರಗಳಿವು.
ಟಿ. ಎನ್. ಶೇಷನ್ ಒಬ್ಬ ಕರ್ಮಠ ಎನಿಸುವ ಬ್ರಾಹ್ಮಣನಾಗಿದ್ದರೂ, ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಚುನಾವಣಾ ಆಯೋಗಕ್ಕೆ ಒಂದು ವಿಶ್ವಾಸಾರ್ಹತೆ ತಂದುಕೊಟ್ಟಿದ್ದರು. ಅಲ್ಲಿಗೇ ಅದು ಕೊನೆಯಾಗಿದೆ. ಈಗ ಚುನಾವಣಾ ಆಯೋಗವು ಒಂದು ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಯಾಗಿ ಉಳಿದಿದೆಯೇ? ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ವತಂತ್ರರೇ? ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ನಿಗೂಢ ರಾಜೀನಾಮೆ, ಸರಕಾರದ ನಿಷ್ಟಾವಂತರಾಗಿದ್ದ ಇಬ್ಬರು ಮಾಜಿ ಅಧಿಕಾರಿಗಳನ್ನು ಚುನಾವಣಾ ಆಯೋಗಕ್ಕೆ ದಿಢೀರ್ ಆಗಿ ತುರುಕಿಸಿದ್ದು ಇದನ್ನು ಸೂಚಿಸುವುದಿಲ್ಲವೆ? ಈಗ ಚುನಾವಣಾ ಆಯೋಗ ಎಂಬುದು ದಕ್ಷವಾಗಿ ಚುನಾವಣೆ ನಡೆಸುವ ಒಂದು ಆಡಳಿತಾತ್ಮಕ ಸಂಸ್ಥೆ ಮಾತ್ರವೇ ಆಗಿದೆ. ಆದರೆ, ಆಡಳಿತ ಪಕ್ಷದ ಚುನಾವಣಾ ಅಕ್ರಮಗಳನ್ನು, ನಿಯಮ ಉಲ್ಲಂಘನೆಗಳನ್ನು ತಡೆಯಬಲ್ಲ ಸಂಸ್ಥೆಯಾಗಿ ಉಳಿದಿದೆಯೆ?
ನೀತಿ ಸಂಹಿತೆಗಳೆಲ್ಲಾ ಕೇವಲ ವಿರೋಧ ಪಕ್ಷಗಳಿಗೆ ಮೀಸಲೇ? ಕೋಮು, ಧರ್ಮ ಆಧಾರದಲ್ಲಿ ಮತ ಯಾಚನೆ ಮಾಡಬಾರದೆಂದು ನೀತಿಸಂಹಿತೆ ಹೇಳುತ್ತದೆ. ಯಾರೇ ಒಬ್ಬ ಜವಾಬ್ದಾರಿಯುತ ಪ್ರಧಾನಿ ಹಿಂದೂ-ಮುಸ್ಲಿಂ ಪಾತಳಿಯ ಮೇಲೆ ಬಹಿರಂಗ ಸಭೆಗಳಲ್ಲಿ ಮತ ಯಾಚನೆ ಮಾಡಿದಾಗ ಚುನಾವಣಾ ಆಯೋಗ ಏನು ಮಾಡಬೇಕಿತ್ತೋ ಅದನ್ನು ಮಾಡಿದೆಯೇ? ದೇಶದಲ್ಲಿ ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿ ಕಾಯ್ದುಕೊಳ್ಳಬೇಕಾದ ಒಬ್ಬ ಗೃಹಮಂತ್ರಿ “ದೀದಿಯ ಗೂಂಡಾಗಳನ್ನು ತಲೆಕೆಳಗಾಗಿ ನೇತುಹಾಕುತ್ತೇವೆ” ಎಂಬ ಕಾನೂನು ಮೀರಿದ ಹೇಳಿಕೆ ನೀಡಿದಾಗ, ಆತನೇ ಒಬ್ಬ ಗೂಂಡಾ ಎಂದು ಸಾಬೀತಾಗುವುದಿಲ್ಲವೆ? ಎಲ್ಲರ ರಾಷ್ಟ್ರಪತಿ, ಎಲ್ಲರ ಉಪರಾಷ್ಟ್ರಪತಿ ಎನಿಸಿದ ಸಾಂವಿಧಾನಿಕ ಹುದ್ದೆ ಹೊಂದಿರುವವರು ಒಂದು ಪಕ್ಷದ ಪರ ಭಟ್ಟಂಗಿ ಹೇಳಿಕೆಗಳನ್ನು ನೀಡಿಲ್ಲವೆ? ಈ ಕುರಿತು ಚುನಾವಣಾ ಆಯೋಗ ಅಥವಾ ಯಾವುದೇ ನ್ಯಾಯಾಲಯ ಯಾವುದಾದರೂ ನಿರ್ಣಾಯಕ ಕ್ರಮ ಕೈಗೊಂಡಿದೆಯೆ?
ಇದರ ನಡುವೆ ಹಲವಾರು ವಲಯಗಳಲ್ಲಿ ಸಂಶಯಕ್ಕೆ ಈಡಾಗಿರುವ ಇಲೆಕ್ಟ್ರಾನಿಕ್ ಮತಯಂತ್ರಕ್ಕೆ- ಈ ಸಂಶಯ ನಿವಾರಣೆ ಮಾಡುವ ಯಾವುದೇ ಕ್ರಮ ಅಥವಾ ಖಾತರಿ ಇಲ್ಲದೇ ನ್ಯಾಯಾಲಯವು ಮಾನ್ಯತೆ ನೀಡಿದೆ.
ಚುನಾವಣೆಗೆ ಮೊದಲಷ್ಟೇ ಅರವಿಂದ ಕೇಜ್ರಿವಾಲ್ ಸಹಿತ ಹಲವಾರು ಪ್ರತಿಪಕ್ಷ ನಾಯಕರ ಬಂಧನ, ಇ.ಡಿ. ಸಹಿತ ಹಲವು ಸರಕಾರಿ ತನಿಖಾ ಸಂಸ್ಥೆಗಳನ್ನು ಕೇವಲ ಪ್ರತಿಪಕ್ಷಗಳ ವಿರುದ್ಧವೇ ಛೂಬಿಟ್ಟದ್ದು, ಯಾವುದೋ ಹಳೆಯ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಂಬನಗೊಳಿಸಿ ಚುನಾವಣಾ ವೆಚ್ಚಗಳಿಗೆ ಆಡಚಣೆ ಉಂಟುಮಾಡಿದ್ದು ಇತ್ಯಾದಿ ನೂರಾರು ಪ್ರಕರಣಗಳನ್ನು ನೀವು ನೆನಪಿಸಿಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮುಂದಾಳತ್ವದಲ್ಲಿ ಆಳುವ ಪಕ್ಷ, ಮತ್ತದರ ಪಿತ ಆರೆಸ್ಸೆಸ್ ಈ ದೇಶವನ್ನು ಕೋಮು ನೆಲೆಯಲ್ಲಿ ಒಡೆಯುತ್ತಿರುವುದು, ಸಾಂವಿಧಾನಿಕ ಸಂಸ್ಥೆಗಳು ಮಾತ್ರವಲ್ಲದೇ ಸಂವಿಧಾನವನ್ನೇ ಬದಲಿಸಲು ಹೊರಟಿರುವುದು, ದ್ವೇಷವನ್ನೇ ಪ್ರಚೋದಿಸುತ್ತಿರುವುದು, ಹಲವು ಪಕ್ಷಗಳು, ಸಾಂಸ್ಕೃತಿಕ ವೈವಿಧ್ಯತೆಯೇ ಪ್ರಜಾಪ್ರಭುತ್ವದ ಜೀವಾಳವಾಗಿರುವಾಗ ಏಕಪಕ್ಷ ಏಕ ಸಂಸ್ಕೃತಿಯನ್ನು ತರುತ್ತಿರುವುದು, ವಿರೋಧಿಸಿದ ಬೇರೆಯವರನ್ನೆಲ್ಲಾ ಜಾತಿ, ಧರ್ಮ ಬೇಧವಿಲ್ಲದೆ ದೇಶದ್ರೋಹಿಗಳೆಂದು ಕರೆದು ಕಾರ್ಯಕರ್ತರಿಂದ ಮಾನಸಿಕ, ದೈಹಿಕ ಹಿಂಸಾಚಾರಕ್ಕೆ ಗುರಿಮಾಡುತ್ತಿರುವುದು, ಅಪ್ಪಟ ಸುಳ್ಳುಗಳನ್ನು ಮಾರಿಹೋದ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿರುವುದು, ದೇಶವನ್ನೇ ತಮ್ಮ ಧಣಿಗಳಾದ ಬಂಡವಾಳಶಾಹಿಗಳಿಗೆ ಮಾರುತ್ತಿರುವುದು ಇವೆಲ್ಲವೂ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಸಂಚನ್ನು ಸೂಚಿಸದಿದ್ದರೆ, ನನಗೇನೂ ಹೇಳಲು ಇಲ್ಲ. ಮೇಲೆ ಹೇಳಿದ ಶಾಂತಿಯುತವಾಗಿ ಚುನಾವಣೆ ನಡೆಯುವ ನನ್ನ ಪುಟ್ಟ ಊರಿನಲ್ಲೂ ಈ ವಿಷ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯುವುದು ಹೇಗೆ? ಇದು ನಿಮಗೆಲ್ಲರಿಗೂ ಗೊತ್ತಿದೆ.