Home ಅಂಕಣ ಬೊಗಸೆಗೆ ದಕ್ಕಿದ್ದು-56 : ಧರ್ಮದ ಹೆಸರಿನಲ್ಲಿ “ಧರ್ಮ”ಕ್ಕೆ ಜೀವಬಲಿ!

ಬೊಗಸೆಗೆ ದಕ್ಕಿದ್ದು-56 : ಧರ್ಮದ ಹೆಸರಿನಲ್ಲಿ “ಧರ್ಮ”ಕ್ಕೆ ಜೀವಬಲಿ!

0

“..ಧಾರ್ಮಿಕ ಆಚರಣೆಗಳಲ್ಲಿ ಈ ರೀತಿ ಹೇಳದೇ ಕೇಳದೆ, ಅಕಾರಣವಾಗಿ ಸತ್ತವರನ್ನು ಧರ್ಮದ ಹೆಸರಿನಲ್ಲಿ “ಧರ್ಮ”ಕ್ಕೆ ಬಲಿಯಾದವರು ಎಂದು ಹೇಳಬಹುದೇನೋ!..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

“ಧರ್ಮ ಎಂಬುದೊಂದು ಅಫೀಮು” ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದ ಒಂದು ವಾಕ್ಯವನ್ನು ಸಂದರ್ಭದಿಂದ ಹೊರತೆಗೆದು, ಕಮ್ಯುನಿಸಂ ಎಂಬುದು ದೇವರು ಮತ್ತು ಧರ್ಮಗಳ ವಿರೋಧಿ ಎಂದು- “ಅಧರ್ಮಿ”ಗಳಿಂದಲೇ ತುಂಬಿರುವ ಬಂಡವಾಳಿಗರು, ಅವರ ಜೊತೆ ಪರೋಪಜೀವಿಯಂತೆ ಅಂಟಿಕೊಂಡಿರುವ ಪುರೋಹಿತಶಾಹಿಗಳು ಬಿಂಬಿಸುತ್ತಾ ಬಂದಿದ್ದಾರೆ. ಅಫೀಮಿನ ಅಮಲಿನಲ್ಲಿರುವ ಭಕ್ತವೃಂದಗಳು ಅದನ್ನು ನಂಬುತ್ತಾ ಬಂದಿವೆ. ಆದರೆ, ಈ ವಾಕ್ಯದ ಹಿಂದೆ, ಮುಂದೆ ಇರುವ ಸಾಲುಗಳನ್ನು ಸೇರಿಸಿ ಓದಿದರೆ, ಮಾರ್ಕ್ಸ್ ಇದನ್ನು ಯಾಕೆ ಬರೆದ ಎಂಬುದು ತಿಳಿಯುತ್ತದೆ. ಇದು ಧರ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಸಾರಾಸಗಟು ವಂಚನೆಗಳು, ಕೋಮುವಾದಿ ದ್ವೇಷ ರಾಜಕಾರಣ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಆದರೆ, ನಶೆಯಲ್ಲಿ ಇರುವವರ ಕಲ್ಪನೆಗಳಲ್ಲಿ ತರ್ಕಕ್ಕೆ ಯಾವ ಸ್ಥಾನವಿದೆ? ಕ್ಲಿಷ್ಟವಾದ ಆ ಬರಹಗಳನ್ನು ಓದುವ ವ್ಯವಧಾನವಾದರೂ ಎಲ್ಲಿದೆ!? ವಾಸ್ತವದಲ್ಲಿ ಈ ಮಾತು ನಿಜವೆಂದು ಅರ್ಥ ಮಾಡಬೇಕೆಂದಿದ್ದರೆ, ನಮ್ಮ ಸುತ್ತಮುತ್ತಲೂ ಒಮ್ಮೆ ಕಣ್ಣುಬಿಟ್ಟು ನೋಡಿದರೂ ಸಾಕಾಗುತ್ತದೆ. ಧಾರ್ಮಿಕ ನಂಬಿಕೆಗಳಿಂದಲೇ ಎಷ್ಟು ಜನರು ಅನಗತ್ಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನೋಡಿದಲ್ಲಿ, ಇದು ಇನ್ನಷ್ಟು ಮನದಟ್ಟಾಗುತ್ತದೆ. ಇಲ್ಲಿ ನಾವು ಈ ಬಾರಿ ಕೇವಲ ಧಾರ್ಮಿಕ ಉತ್ಸವಗಳಲ್ಲಿ ನಡೆದ ದುರಂತ ಘಟನೆಗಳನ್ನು ಮಾತ್ರವೇ ನೋಡೋಣ.

ಆದರೂ, ಮೊದಲಿಗೆ ಬೆಂಗಳೂರು ಮತ್ತು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತಗಳ ಘಟನೆಗಳನ್ನು ಒಮ್ಮೆ ಹಿನ್ನೆಲೆಯಾಗಿ ನೋಡಬೇಕು. ಒಂದರಲ್ಲಿ 11 ಮಂದಿ ಮೃತಪಟ್ಟರೆ, ಇನ್ನೊಂದರಲ್ಲಿ ಸತ್ತವರ ಸಂಖ್ಯೆ 41. ಇವುಗಳಲ್ಲಿ ಒಂದು ಕ್ರಿಕೆಟ್ ಆಟದ ಸಂಭ್ರಮದಲ್ಲಿ ನಡೆದದ್ದಾದರೆ, ಇನ್ನೊಂದು ಸಿನಿಮಾ ನಟನ ರಾಜಕೀಯ ಸಭೆಯಲ್ಲಿ ನಡೆದದ್ದು. ಎರಡೂ ಘಟನೆಗಳೂ ಒಂದಲ್ಲ ರೀತಿಯಲ್ಲಿ “ಧಾರ್ಮಿಕ” ಎನ್ನುವಂತಾ “ಆರಾಧನಾ ಮನೋಭಾವ”ದಿಂದಲೇ ಉಂಟಾಗಿವೆ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಒಂದರಲ್ಲಿ ಒಂದು ದೊಡ್ಡ ಜನಸಮೂಹಕ್ಕೆ ಕ್ರಿಕೆಟ್ ಎಂಬುದು ಧರ್ಮ ಹಾಗೂ ಕೊಹ್ಲಿ ಮುಂತಾದವರು ದೇವರುಗಳು. ಇನ್ನೊಂದರಲ್ಲಿ ಸಿನಿಮಾ ಎಂಬುದು ಧರ್ಮ ಮತ್ತು ವಿಜಯ್‌ನಂತಾ ನಟರು ದೇವರುಗಳು. ಈ ಅಂಶವನ್ನು ನಾವು ಮುಂದೊಮ್ಮೆ ಸ್ವಲ್ಪ ವಿವರವಾಗಿ ಪರಿಶೀಲಿಸೋಣ. ಮೊದಲಿಗೆ, ಎರಡೂ ಘಟನೆಗಳನ್ನು ರಾಜಕೀಯವಾಗಿ ಯದ್ವಾತದ್ವಾ ಬಳಸಿಕೊಳ್ಳಲಾಯಿತು. ಆಳುವ ಪಕ್ಷಗಳ ಮೇಲೆ ಹೊಣೆ ಹೊರಿಸಲು ವಿರೋಧಿ ಪಕ್ಷಗಳೂ, ಮಾಧ್ಯಮಗಳೂ ಶಕ್ತಿ ಮೀರಿ ಹೆಣಗಿದವು. ಭಾರೀ ಬೊಬ್ಬೆ ಮತ್ತು ಚೀರಾಟಗಳು ನಡೆದವು. ಕೊನೆಗೂ ಆದದ್ದು ಏನು? ಹೋದ ಜೀವಗಳು ಹೋದವು, ಪರಿಹಾರಗಳು ಸಿಕ್ಕಿದವು. ಈಗ ಎಲ್ಲವೂ ಶಾಂತವಾಗಿದ್ದು, ಯಾರೂ ಅವುಗಳ ಬಗ್ಗೆ ಮಾತನ್ನೇ ಆಡುತ್ತಿಲ್ಲ! ಇನ್ನೊಮ್ಮೆ ತನಿಖಾ ವರದಿಗಳು ಬಂದಾಗ ಅಥವಾ ಚುನಾವಣೆಗಳು ಬಂದಾಗ, ಈ ಘಟನೆಗಳು ತಾಜಾತಾಜಾ ನಡೆದವೋ ಎಂಬಂತೆ ಮೇಲೆದ್ದು ಗದ್ದಲವೆಬ್ಬಿಸುವುದು ಖಂಡಿತಾ!

ಆದರೆ, ನಿಜವಾಗಿಯೂ “ಧಾರ್ಮಿಕ” ಎಂದು ಪರಿಗಣಿಸಲಾಗುವ ಜಾತ್ರೆಗಳಲ್ಲಿ, ಆಚರಣೆಗಳಲ್ಲಿ ಉಂಟಾಗುವ ಕಾಲ್ತುಳಿತ ಮತ್ತು ಇತರ ಅವಘಡಗಳಲ್ಲಿ ನೂರಾರು ಮಂದಿ ಸತ್ತರೂ ಒಂದೆರಡು ದಿನಗಳ ಸುದ್ದಿಯಾಗಿ, ಸತ್ತವರಿಗೆ ಮತ್ತು ಗಾಯಗೊಂಡವರಿಗೆ ಪರಿಹಾರ ಸಿಕ್ಕಿದ ನಂತರ ಎಲ್ಲವೂ ತಕ್ಷಣ ಅಲ್ಲಿಗೇ ಮುಗಿಯುತ್ತವೆ. ಮತ್ತೆ ಯಾರೂ ಅವುಗಳ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಯಾಕೆ!? ಜಾತ್ರೆಗಳಲ್ಲಿ ಜನರು ಸಾವಿಗೀಡಾಗುವುದು ಮಾಮೂಲಿ, ಇಲ್ಲಿ ಸತ್ತವರು ನೇರ ಸ್ವರ್ಗಕ್ಕೆ ಟಿಕೇಟು ಪಡೆಯುತ್ತಾರೆ ಎಂಬಂತೆ ಎಲ್ಲರೂ ಉಡಾಫೆ ತೋರುವುದು ಯಾತಕ್ಕಾಗಿ?

ಮೇಲಿನ ಎರಡು ದುರಂತ ಘಟನೆಗಳು ನಡೆದ ಬಳಿಕ- ಗಣೇಶೋತ್ಸವ, ಶಾರದಾ ಪೂಜೆ, ದುರ್ಗಾ ಪೂಜೆ ಉತ್ಸವಗಳು ದೇಶಾದ್ಯಂತ ನಡೆದವು. ಇವುಗಳ ಮೆರವಣಿಗೆ, ವಿಸರ್ಜನೆಗಳ ವೇಳೆ, ನೀರಿನಲ್ಲಿ ಮುಳುಗುವುದೇ ಮುಂತಾದ ಘಟನೆಗಳಲ್ಲಿ ಸತ್ತವರ ಸಂಖ್ಯೆಯನ್ನು ಯಾರೂ ಲೆಕ್ಕ ಇಟ್ಟಿಲ್ಲ. ಇವೆಲ್ಲಾ ಸಾಮಾನ್ಯ ಸಾವುಗಳು ಎಂಬಂತೆ ನಾವು ಅರಗಿಸಿಕೊಂಡಿದ್ದೇವೆ. ಮೇಲಿನ ದುರ್ಘಟನೆಗಳ ಬಳಿಕ ಸಭೆಗಳನ್ನು ಆಯೋಜಿಸುವುದು, ಜನರನ್ನು ಸೇರಿಸುವುದು ಇತ್ಯಾದಿಗಳಿಗೆ ನಿಯಮಗಳನ್ನು ರೂಪಿಸಿದೆವು. ಆದರೆ, ಇವೆಲ್ಲವೂ ಧಾರ್ಮಿಕೇತರ ಸಭೆಗಳಿಗೆ ಅನ್ವಯಿಸುತ್ತವೆಯೇ ಹೊರತು ಧಾರ್ಮಿಕ ಜಾತ್ರೆ, ಮೇಳಗಳಿಗೆ ಅಲ್ಲ! ಯಾಕೆ ಹೀಗೆ!? ಈ ಸಂದರ್ಭದಲ್ಲಿ ನಾನು ಗಮನಿಸಿದ ಘಟನೆಗಳಲ್ಲಿ ಎರಡನ್ನು ಉಲ್ಲೇಖಿಸುತ್ತೇನೆ.

ಮಧ್ಯಪ್ರದೇಶದ ಖಾಂಡ್ಲಾ ಜಿಲ್ಲೆಯಲ್ಲಿ ಅಕ್ಟೋಬರ್ 2ರಂದು ದುರ್ಗಾಪೂಜೆಯ ಮೆರವಣಿಗೆಯಲ್ಲಿ ಬೇರೆಬೇರೆ ಗ್ರಾಮಗಳ ಮೂರ್ತಿಗಳನ್ನು ವಿಸರ್ಜನೆಗೆಂದು ಒಯ್ಯುತ್ತಿದ್ದಾಗ ಟ್ರ್ಯಾಕ್ಟರೊಂದು ಕೆರೆಗೆ ಉರುಳಿ ಹತ್ತಕ್ಕೂ ಹೆಚ್ಚು ಮಂದಿ ಸತ್ತರು. ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಅಕ್ಟೋಬರ್ 3ರಂದು ಬನ್ನಿ ಹಬ್ಬ ಆಚರಣೆಯ ವೇಳೆ ಸಾಂಪ್ರದಾಯಿಕ ‘ಕರ್ರಲ ಸಮರಂ’ ಎಂಬ ಆಚರಣೆಯಲ್ಲಿ 3,500ರಷ್ಟು ಮಂದಿ ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮತ್ತು ಅದರಿಂರ ಉಂಟಾದ ಕಾಲ್ತುಳಿತದಿಂದಾಗಿ ನಾಲ್ಕಕ್ಕೂ ಹೆಚ್ಚು ಮಂದಿ ಸತ್ತು, ನೂರಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸಂಪ್ರದಾಯವು ನಾನಿಲ್ಲಿ ಕೆಲವು ಕಂತುಗಳಲ್ಲಿ ಬರೆಯುತ್ತಾ ಬಂದಿರುವ ಕರ್ನಾಟಕದ ಅಮಾನವೀಯ ಪದ್ಧತಿಗಳ ಸಾಲಿನಲ್ಲೇ ಇರುವುದರಿಂದ ಕಿರು ವಿವರ ನೀಡುತ್ತೇನೆ:

ಶತಮಾನಗಳಷ್ಟು ಹಳೆಯದೆಂದು ಹೇಳಲಾಗುವ ಈ ಆಚರಣೆಯು ಮಾಳ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದು, ಆಂಧ್ರ, ತೆಲಂಗಾಣ, ಕರ್ನಾಟಕದಿಂದ ಮೂರು ಲಕ್ಷದಷ್ಟು ಭಕ್ತರು ಸೇರುತ್ತಾರೆ. ಮಣಿ ಮತ್ತು ಮಲ್ಲಾಸುರ ಎಂಬ ಇಬ್ಬರು ರಾಕ್ಷಸರನ್ನು ಶಿವನು ಭೈರವನ ರೂಪದಲ್ಲಿ ಕೊಂದನೆಂದು ಪುರಾಣ. ದೇವಳದ ಸುತ್ತಲಿನ ನೇರಣಿಕಿ, ಕೊತ್ತಪೇಟೆ ಮತ್ತು ಸುತ್ತಲಿನ ಹಳ್ಳಿಗಳ ಜನರು ಶಿವನ ಗಣಗಳನ್ನು ಪ್ರತಿನಿಧಿಸಿದರೆ, ಹೊರಗಿನವರು ರಾಕ್ಷಸರನ್ನು ಪ್ರತಿನಿಧಿಸುತ್ತಾರೆ. ಭಕ್ತರು ಕಾಳಗದ ಗಾಯಗಳನ್ನು ದೇವರ ಪ್ರಸಾದ ಎಂಬಂತೆ ಸ್ವೀಕರಿಸುತ್ತಾರೆ. ಇದು ಸಂಪ್ರದಾಯ, ಕಾಳಗಗಳು ಭೀಕರವಾಗಿದ್ದರೂ, ಅದಕ್ಕೆ ನಿಯಮಗಳಿವೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಜಿ. ಶ್ರೀನಿವಾಸುಲು ಎಂಬವರು ಈ ದುರಂತದ ನಡುವೆಯೂ- ಇದೊಂದು ಆಟವೇನೋ, ಅದರಲ್ಲಿ ಇಂತಾ ಘಟನೆಗಳು ನಡೆಯುವುದು ಸಾಮಾನ್ಯವೇನೋ ಎಂಬಂತೆ- ಹೇಳಿಕೆ ಕೊಟ್ಟಿರುವುದು- ನಾನು ಇಲ್ಲಿ ಏನನ್ನು ಹೇಳಲು ಹೊರಟಿದ್ದೇನೆ ಎಂಬುದನ್ನು ನಿಮಗೆ ತಿಳಿಸಬಹುದು. ಇಲ್ಲಿ ಸತ್ತವರ ಸಂಖ್ಯೆಯನ್ನು ನಾನು ನಿಖರವಾಗಿ ನಮೂದಿಸದಿರಲು ಕಾರಣವೆಂದರೆ, ಮಾಧ್ಯಮಗಳು ಮರುದಿನ ಈ ಘಟನೆಗಳು ಫಾಲೋ ಅಪ್ ಸುದ್ದಿಗೆ ಅರ್ಹವೆಂದು ಭಾವಿಸಲೇ ಇಲ್ಲ! ರಬ್ಬರಿನಂತೆ ಯಾರೂ ಎಳೆಯಲೂ ಇಲ್ಲ. ಯಾಕೆ ಹೀಗೆ? ಯಾಕೆಂದರೆ, ಇವೆಲ್ಲಾ ಧಾರ್ಮಿಕವಲ್ಲವೇ! ಮಾಮೂಲಿ ನಡೆಯುವಂತದ್ದೇ! ರಾಜಕೀಯ ಲಾಭವಿಲ್ಲದೆ ಮಾತನಾಡುವಂತಿಲ್ಲ! ವಿರೋಧಿಸಿದರೆ, ಧರ್ಮ ವಿರೋಧಿ ಪಟ್ಟದಿಂದಾಗಿ ರಾಜಕೀಯವಾಗಿ ನಷ್ಟವೇ ಆಗುವುದು!

ಧಾರ್ಮಿಕ ಆಚರಣೆಗಳಲ್ಲಿ ಸಾವು ನೋವುಗಳು ಸಂಭವಿಸುವುದು ಭಾರತದಲ್ಲಿ ಐತಿಹಾಸಿಕವಾಗಿಯೇ ಮಾಮೂಲು. ಈಗಿನಂತೆ ಜನನಿಯಂತ್ರಣ ವ್ಯವಸ್ಥೆಗಳು ಇರದಿದ್ದ ಆಗಿ ಹೋದ ಇತಿಹಾಸದಲ್ಲಿ- ಮಹಾರಾಜರು, ಸುಲ್ತಾನರು, ನವಾಬರು, ಸರದಾರರ ಕಾಲದಲ್ಲಿ ಸತ್ತವರೆಷ್ಟೋ; ಲೆಕ್ಕ ಇಟ್ಟವರ್ಯಾರು? ಬ್ರಿಟಿಷ್ ಕಾಲದ ಇಂತಾ ಘಟನೆಗಳ ಸುಮಾರು ಇನ್ನೂರು ವರ್ಷಗಳ ಆಯ್ದ ದಾಖಲೆಗಳು ಸಿಗುತ್ತವೆ. 50ರಷ್ಟು ಜನರು ಮೃತಪಟ್ಟ ಹಲವಾರು ಘಟನೆಗಳು, ಮುಖ್ಯವಾಗಿ ಕುಂಭಮೇಳಗಳಲ್ಲಿ ನಡೆದಿವೆಯಾದರೂ, ಇವುಗಳಲ್ಲಿ ಮುಖ್ಯವೆನಿಸುವ ಧಾರ್ಮಿಕ ಸ್ವರೂಪದ ಮೂರನ್ನು ಇಲ್ಲಿ ಚುಟುಕಾಗಿ ನೋಡೋಣ.

ಮಾರ್ಚ್ 1820ರ ಮಾರ್ಚ್ ತಿಂಗಳಲ್ಲಿ ಹರಿದ್ವಾರದ ಕುಂಭಮೇಳದಲ್ಲಿ 430ಕ್ಕೂ ಹೆಚ್ಚು ಯಾತ್ರಿಕರು ಸತ್ತಿದ್ದರು. ಸ್ನಾನದ ಹಕ್ಕು, ಮೆರವಣಿಗೆಯ ದಾರಿಯ ಹಕ್ಕು ಮುಂತಾದ ಐಹಿಕ ವಿಷಯಗಳಿಗಾಗಿ- ತಾವು ಆಧ್ಯಾತ್ಮಿಕರು ಎಂದು ಹೇಳಿಕೊಳ್ಳುವ ಹಿಂದೂ ಸಾಧುಸಂತರ ವಿವಿಧ ಪಂಥಗಳು ಹೊಡೆದಾಡಿಕೊಂಡುದರಿಂದ ಮತ್ತು ಇದು ಹಾಗೂ ಬೇರೆ ಕಾರಣಗಳಿಗೆ ಕಾಲ್ತುಳಿತ ಉಂಟಾದುದರಿಂದ ಈ ದುರಂತ ಸಂಭವಿಸಿತ್ತು. ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು ಇವುಗಳನ್ನು ಬಗೆಹರಿಸಲು ಪ್ರಯತ್ನಿಸಲೇ ಇಲ್ಲ. “ಅವರ ಧಾರ್ಮಿಕ ನಂಬಿಕೆ, ಸಾಯುವವರು ಸಾಯುತ್ತಾರೆ, ನಮಗೇನು” ಎಂಬ ಲಾಭನಷ್ಟದ ಮನೋಭಾವ ಅವರದ್ದಾಗಿತ್ತು. ನಂತರ 1840ರ ಜನವರಿಯಲ್ಲಿ ಅಲಹಾಬಾದಿನ ಕುಂಭ ಮೇಳದಲ್ಲಿ ಇಂತದ್ದೇ ಕಾರಣಗಳಿಂದ 50ಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಹಿಂದೆ ಹಲವಾರು ಇಂತಾ ಘಟನೆಗಳು ನಡೆದಿದ್ದರೂ, ಧಾರ್ಮಿಕ ಮಧ್ಯಪ್ರವೇಶ ನಡೆಸದಿರುವ ಧೋರಣೆಯ ನೆಪದಲ್ಲಿ ಬ್ರಿಟಿಷ್ ಆಡಳಿತ ತೋರಿದ್ದ ಅಸಡ್ಡೆ ಇದಕ್ಕೆ ಕಾರಣವಾಗಿತ್ತು.

ಇನ್ನೊಂದು ದುರ್ಘಟನೆ ಭಾರತದ ಇತಿಹಾಸದಿಂದ ಎಂದೆಂದಿಗೂ ಅಳಿಸಲಾಗದ್ದು. ಅದು ಸಂಪೂರ್ಣವಾಗಿ ರಾಜಕೀಯವಾಗಿರದಿದ್ದರೂ, ಸಂಪೂರ್ಣವಾಗಿ ಧಾರ್ಮಿಕ ಆಚರಣೆಯಾಗಿದ್ದುದರಿಂದ ಇಲ್ಲಿ ಉಲ್ಲೇಖಿಸಬೇಕು. ಯಾಕೆಂದರೆ, ಭಾರತದಲ್ಲಿ ಧಾರ್ಮಿಕತೆ ಮತ್ತು ರಾಜಕೀಯದಲ್ಲಿ ಬೆರೆತುಕೊಂಡಿರುವ ಲಾಭ ನಷ್ಟದ ಲೆಕ್ಕಾಚಾರದ ಕುರಿತು ಅದು ಒಳನೋಟಗಳನ್ನು ನೀಡುತ್ತದೆ. ಈ ಘಟನೆಯೇ 1919ರ ಎಪ್ರಿಲ್ 13ರಂದು ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ. ಇದರಲ್ಲಿ ಬ್ರಿಟಿಷರ ಗುಂಡಿಗೆ ಮತ್ತು ಅದರಿಂದ ಉಂಟಾದ ಕಾಲ್ತುಳಿತಕ್ಕೆ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಹೆಂಗಸರು, ಮಕ್ಕಳು, ವೃದ್ಧರು ಎನ್ನದೇ ಬಲಿಯಾಗಿದ್ದರು. ಬ್ರಿಟಿಷರು ಇದರ ನಿಜವಾದ ಲೆಕ್ಕಾಚಾರವನ್ನು ಕೊನೆಯ ತನಕ ನೀಡಲಿಲ್ಲ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ನಿರಾಯುಧ, ಶಾಂತಿಯುತ ಜನರ ಸಭೆಯ ಮೇಲೆ- ಇರುವ ಬಾಗಿಲನ್ನೂ ಮುಚ್ಚಿ ಜನರಲ್ ಡಾಯರ್ ಭಾರತೀಯ ಸೈನಿಕರಿಂದಲೇ ಮಾಡಿಸಿದ ಪೈಶಾಚಿಕ ಹತ್ಯಾಕಾಂಡವು ಮೂಲತಃ ರಾಜಕೀಯ ಸ್ವರೂಪದ್ದರೂ,  ಹುತಾತ್ಮರಾದವರಿಗೆ ಅದು ಸ್ವಲ್ಪ ಮಟ್ಟಿಗೆ ಪ್ರತಿಭಟನಾ ರಾಜಕೀಯ ವಿಷಯವಾಗಿದ್ದರೂ, ಮುಖ್ಯವಾಗಿ ಬೈಸಾಕಿ ಹಬ್ಬದ, ವರ್ಷವರ್ಷವೂ ನಡೆಯುವ ಧಾರ್ಮಿಕ ಆಚರಣೆಯಾಗಿತ್ತು. ಇದು ಸಿಕ್ಖ್, ಹಿಂದೂ, ಮುಸ್ಲಿಮರೆನ್ನದೇ ಎಲ್ಲರೂ ಬ್ರಿಟಿಷರ ವಿರುದ್ಧ ಇನ್ನಷ್ಟು ಗಟ್ಟಿಯಾಗಿ ಎದ್ದುನಿಲ್ಲುವುದಕ್ಕೆ ಪ್ರೇರಣೆಯಾಗಿತ್ತು. ಬ್ರಿಟಿಷರ ನೈತಿಕತೆಯ ಅಡಿಪಾಯವನ್ನೇ ಅಲುಗಾಡಿಸಿತ್ತು.

ಈ ಕಾರಣದಿಂದಲೇ, ಇಂದೂ ಕೂಡಾ ರಾಜಕೀಯದವರು ಧಾರ್ಮಿಕ ಆಚರಣೆಗಳಲ್ಲಿ ಸಂಭವಿಸುವ ಸಾವುಗಳ ಬಗ್ಗೆ ಅಸಡ್ಡೆ ತೋರುತ್ತಾರೆ. ಸಕ್ರಿಯವಾಗಿ ಮಧ್ಯಪ್ರವೇಶ ಮಾಡಲು, ಧ್ವನಿಯೆತ್ತಲು ಹೋಗುವುದಿಲ್ಲ. ಆದರೆ, ಬಲಪಂಥೀಯರು ಇಂತಾ ಸಾವುಗಳು ಬೇರೆ ಕೋಮುಗಳ ಜನರ ಕಾರಣದಿಂದ ನಡೆದವು ಎಂದು ಕಿಂಚಿತ್ ನೆಪ ಸಿಕ್ಕಿದರೂ, ಕೋಮುಗಲಭೆ ಎಬ್ಬಿಸಿ ಇನ್ನಷ್ಟು ಜನರನ್ನು ಬಲಿಕೊಡುತ್ತಾರೆ. ಇದು ಎಲ್ಲಾ ಧಾರ್ಮಿಕ ಬಣ್ಣಗಳ ಬಲಪಂಥೀಯರಿಗೆ ಅನ್ವಯಿಸುತ್ತದೆ. ಬ್ರಿಟಿಷರ ಕಾಲಕ್ಕೂ, ಈಗ ನಾವು ಬದುಕುತ್ತಿರುವ ಈ ಕಾಲಕ್ಕೂ ಏನಾದರೂ ವ್ಯತ್ಯಾಸ ಆಗಿದೆಯೇ ಎಂದರೆ, ಭದ್ರತೆಗೆ ಸಂಬಂಧಿಸಿದಂತೆ ಸುಧಾರಣೆಗಳು ಆಗಿವೆಯಾದರೂ, ಇಂತಾ ಘಟನೆಗಳು ಮರುಕಳಿಸುತ್ತಲೇ ಇವೆ. ಆದರೆ, ಯಾರಿಗೂ ಏನೂ ಆಗುವುದಿಲ್ಲ.

ಭಾರತದಲ್ಲಿ ಧರ್ಮ ಎಂಬುದಕ್ಕೆ ರಿಲೀಜನ್ ಎಂಬ ಅರ್ಥಕ್ಕೆ ಜೊತೆಜೊತೆಯಾಗಿ ದಾನ, ಸುಮ್ಮನೇ, ಉಚಿತ, ಬಿಟ್ಟಿ, ವ್ಯರ್ಥ ಎಂಬ ಒಳ ಅರ್ಥ, ಕೆಳ ಅರ್ಥಗಳೂ ಇವೆ. ಧರ್ಮಕ್ಕೆ ಕೊಟ್ಟದ್ದು, ಧರ್ಮಕ್ಕೆ ಹೋಯಿತು, ಧರ್ಮಕ್ಕೆ ಪೆಟ್ಟು ತಿಂದರು, ಧರ್ಮಕ್ಕೆ ಮಾನಹೋಯಿತು, ಧರ್ಮಕ್ಕೆ ಸತ್ತರು… ಈ ರೀತಿಯ ಮಾತುಗಳನ್ನು ನಾವು ಕೇಳಬಹುದು. ಧಾರ್ಮಿಕ ಆಚರಣೆಗಳಲ್ಲಿ ಈ ರೀತಿ ಹೇಳದೇ ಕೇಳದೆ, ಅಕಾರಣವಾಗಿ ಸತ್ತವರನ್ನು ಧರ್ಮದ ಹೆಸರಿನಲ್ಲಿ “ಧರ್ಮ”ಕ್ಕೆ ಬಲಿಯಾದವರು ಎಂದು ಹೇಳಬಹುದೇನೋ!

ಯಾಕೆಂದರೆ, ಇಂದು ಧರ್ಮವು ಆರ್ಥಿಕ ಮತ್ತು ಲಾಭದ ಸರಕಾಗಿದೆ. ನಂಬಿಕೆಯು ವ್ಯಾಪಕ ಚಲಾವಣೆಯಲ್ಲಿರುವ ನಾಣ್ಯ. ಪೂಜಾಸ್ಥಳಗಳು, ಜಾತ್ರೆಗಳು, ಹಬ್ಬಗಳು ಬಹುಕೋಟಿ ರೂ.ಗಳ ಬಂಡವಾಳಶಾಹಿ ವ್ಯವಹಾರಗಳಾಗಿವೆ. ಹಾಗಾಗಿ, ಲಾಭ ನಷ್ಟದ ಲೆಕ್ಕಾಚಾರವು ಧರ್ಮಕ್ಕೂ ಅನ್ವಯಿಸಬೇಕಲ್ಲವೆ? ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಸಮತೋಲನ- ಅಸಮತೋಲನಗಳು ಲಾಭ, ನಷ್ಟ, ಬೆಲೆ ಏರಿಕೆ ಇಳಿಕೆಗಳಿಗೆ ಕಾರಣವಾಗುತ್ತವೆ ಎಂಬುದು ಬಂಡವಾಳಶಾಹಿ ಸೂತ್ರ. ಬೇಡಿಕೆ ಇಲ್ಲದೇ, ಪೂರೈಕೆ ಹೆಚ್ಚಾಗಿ ಬೆಲೆ ಕುಸಿದು ತಮ್ಮ ಬೆಳೆಗಳನ್ನು ಹೊಲಗಳಿಗೆ ರಸ್ತೆಗಳಿಗೆ ಚೆಲ್ಲಿದ ರೈತರಿಗೆ ಈ ನಿರ್ದಯ ಲೆಕ್ಕಾಚಾರ ಚೆನ್ನಾಗಿ ಗೊತ್ತಿದೆ. ಸಾಲದ ಸುಳಿಯಲ್ಲಿ ಸಿಕ್ಕು ಆತ್ಮಹತ್ಯೆ ಮಾಡಿಕೊಂಡ ರೈತರಿಗಂತೂ ಇನ್ನೂ ಚೆನ್ನಾಗಿಯೇ ಗೊತ್ತಿತ್ತು. ವ್ಯಾಪಾರವಾಗಿರುವ ಧರ್ಮಕ್ಕೆ ಇದು ಅನ್ವಯಿಸದಿರುವುದೆ!? ಭಾರತದಲ್ಲಿ ಜನಸಂಖ್ಯೆ ಹೆಚ್ಚಲ್ಲವೇ? ಹಾಗಾಗಿಯೇ ಜೀವಕ್ಕೆ ಬೆಲೆ ತೀರಾ ಕಡಿಮೆ!

ಭಾರತದಲ್ಲಿ ಸ್ವಾತಂತ್ರ್ಯಾನಂತರವೂ ನಡೆದ ಇಂತಾ ಅವಿವೇಕಿ ದುರಂತ ಘಟನೆಗಳಿಗೆ ದೊಡ್ಡ ಇತಿಹಾಸವೇ ಇದೆ. ಅವು ಏಕೆ ನಡೆದವು, ಕಾರಣಗಳೇನು, ಆ ಕುರಿತ ತನಿಖೆಗಳು ಏನಾದವು, ಇವುಗಳಿಗೆ ಹೊಣೆಯಾದವರಿಗೆ ಏನಾಯಿತು ಎಂಬುದನ್ನು ಮುಂದಿನ ಕಂತಿನಲ್ಲಿ ನೋಡೋಣ.

You cannot copy content of this page

Exit mobile version