ಆಗುಂಬೆಯ ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ಮೇಲೆ ಅಕ್ರಮವಾಗಿ ಕಾಳಿಂಗ ಸರ್ಪ ಸೆರೆಹಿಡಿಯುವುದು, ಅದರ ಸಾಮೂಹಿಕ ಫೋಟೋ ಶೂಟ್, ಅನುಮತಿ ಇಲ್ಲದೆ ಸಂಶೋಧನೆ, ಸಂರಕ್ಷಣೆ ಅಧ್ಯಯನದ ಹೆಸರಿನಲ್ಲಿ ರೆಸಾರ್ಟ್ ನಡೆಸುತ್ತಿರುವುದು, ಅಕ್ರಮ ಕಾಡು ಪ್ರವೇಶ, ಮೋಜು -ಮಸ್ತಿ, ಕಾಳಿಂಗ ಸರ್ಪಗಳನ್ನು ವಾಣಿಜ್ಯಿಕ ಚಟುವಟಿಕೆಗಳಿಗೆ ಬಳಸುತ್ತಿರುವುದು ಮೊದಲಾದ ಹತ್ತು ಹಲವು ಗಂಭೀರ ಆರೋಪಗಳು ಬಂದು, ಅರಣ್ಯ ಇಲಾಖೆಗೆ ಸರಣಿ ದೂರುಗಳು ಸಲ್ಲಿಕೆಯಾಗಿ ತನಿಖೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಆರೋಪಗಳಿಗೆ ಸ್ಪಷ್ಟನೆ ಕೊಡುವ ನೆಪದಲ್ಲಿ ಕಾಳಿಂಗ ಫೌಂಡೇಶನ್ ನವರು ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರೂ ಇದ್ದಾರೆ. ಅವರು ಹಾವಿನೊಂದಿಗೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಯನ್ನಾಗಲಿ, ಪೂಜನೀಯ ಭಾವನೆಯನ್ನು ಹೊಂದಿಲ್ಲ. ತಮಗೆ ವಿಪತ್ತು ಬಂದಾಗ ಯಾವುದೇ ಹಾವನ್ನಾದರೂ ಕೊಲ್ಲಲು ಅವರು ಸಿದ್ಧರಾಗುತ್ತಾರೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಇದು ತೀವ್ರ ಖಂಡನೀಯ ಎಂದು ಪರಿಸರ ಸಂರಕ್ಷಕರು ತಮ್ಮ ಖಂಡನೆ ತಿಳಿಸಿದ್ದಾರೆ.
ಕಾಳಿಂಗ ಫೌಂಡೇಶನ್ ನ ಸಂಶೋಧಕರಾದ ‘ಗೌರಿಶಂಕರ್’ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಬಗೆಗೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಸಂಶೋಧನಾ ಪ್ರಬಂಧದಲ್ಲಿ “ನಮಗೆ ಕಾಳಿಂಗ ಸರ್ಪ ರಕ್ಷಣೆಗೆ ಕರೆಬಂದ 83.8% ಸಂದರ್ಭಗಳಲ್ಲಿ ಜನರು ಹಾವನ್ನು ಕೊಲ್ಲಲು ಬಯಸಿದ್ದರು” ಎಂದು ಸುಳ್ಳು ಮಾಹಿತಿ ನೀಡಿದ್ದರು. ಮಲೆನಾಡಿನ ಜನರಿಗೆ ಕಾಳಿಂಗ ಸರ್ಪಗಳ ಬಗೆಗೆ ಭಯ, ಭಕ್ತಿ ಇದ್ದು ಪೂಜಿಸುವ ಸಂಸ್ಕೃತಿ ಇದೆ. ಯಾರೂ ಕೂಡಾ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಇವರ ಸುಳ್ಳು ಸಂಶೋಧನೆಗೆ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸುಳ್ಳಗಳ ಸಮರ್ಥನೆಗೆ ಪುನಃ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಾ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ ಎಂದು ಮಲೆನಾಡು ಭಾಗದ ಪರಿಸರ ಸಂರಕ್ಷಕರು ಹೇಳಿದ್ದಾರೆ.
ಇಲ್ಲಿಯವರೆಗೆ ಮಲೆನಾಡಿನ ಯಾವುದೇ ಜನರು ಕಾಳಿಂಗ ಸರ್ಪವನ್ನು ಕೊಂದ ಒಂದೇ ಒಂದು ಉದಾಹರಣೆ ಇಲ್ಲ. ಹೀಗಿರುವಾಗ ‘ಮಲೆನಾಡಿನ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಕಾಳಿಂಗ ಸರ್ಪಗಳನ್ನು ಕೊಲ್ಲಲು ಸಿದ್ಧರಾಗುತ್ತಾರೆ’ ಎಂಬರ್ಥದಲ್ಲಿ ಮಾತನಾಡಿರುವುದು. ತೀವ್ರ ಖಂಡನೀಯ. ಇತರೇ ಸಮುದಾಯಗಳಂತೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಕೂಡಾ ಹಲವಾರು ವರ್ಷಗಳಿಂದ ಮಲೆನಾಡಿನ ಪ್ರಕೃತಿಯೊಂದಿಗೆ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಹಾವನ್ನು ಪೂಜಿಸುವ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿದ್ದಾರೆ. ವಾಸ್ತವ ಹೀಗಿರುವಾಗ ಯಾವುದೇ ದಾಖಲೆಗಳಿಲ್ಲದೆ ವೈಯಕ್ತಿಕ ಸ್ವಾರ್ಥಕ್ಕಾಗಿ ಸಮುದಾಯಗಳ ಮೇಲೆ ಗೂಬೆ ಕೂರಿಸುವುದು ಹೇಯಕರ. ಧಾರ್ಮಿಕ ದ್ವೇಷ ಬಿತ್ತುವ ಪ್ರಯತ್ನ ಕೂಡಾ ಇಲ್ಲಿ ಕಾಣುತ್ತಿದೆ. ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ನೋಡಲಾಗುತ್ತಿದೆ. ಸರ್ಕಾರ ಈ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಶ್ವರ್ ಖಂಡ್ರೆಯವರೇ ಸಂಶೋಧನೆಯ ಮುಖವಾಡದಲ್ಲಿ ಬಹಿರಂಗವಾಗಿಯೇ ವಾಣಿಜ್ಯಿಕ ಚಟುವಟಿಕೆಗಳು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರುವ ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಅಧ್ಯಯನದ ಹೆಸರಿನಲ್ಲಿ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಿರುವ ಅವರಿಗೆ ಮುಂದೆ ಯಾವುದೇ ಸಂಶೋಧನೆಗೆ ಅವಕಾಶ ಕೊಡಬಾರದು. ಅವರ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕು. ಈ ಎಲ್ಲದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಪರಿಸರ ಸಂರಕ್ಷಕರು ಆಗ್ರಹಿಸಿದ್ದಾರೆ.

ಫೋಟೋ: ಇಂದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಸುದ್ದಿ ಆಧಾರಿತ